Thursday, August 12, 2010

ಮುಂದಿನ ಬದಲಾವಣೆ...

ಸಂಪಾದಕ


ಅನುಭವವಿಲ್ಲದ ನಾವೊಂದಿಷ್ಟು ಮಂದಿ ಸೇರಿಕೊಂಡು ಸಿನೆಮಾ ಮಾಡಬೇಕೆಂಬ ಹಂಬಲ ಬಲವಾದದ್ದು ಹೇಗೆ? ಯಾವ ಉದ್ದೇಶದಿಂದಾಗಿ ನಮ್ಮ ತಂಡವು ಒಂದುಗೂಡಿತು? ಮೊದಲ ಭೇಟಿಯ ಚರ್ಚೆಯಲ್ಲಿ ಬಂದು ಹೋದ ವಿಷಯಗಳೇನು ಎನ್ನುವ ವಿವರಗಳನ್ನು ದಾಖಲಿಸುವ ಬರಹವನ್ನು ಸಧ್ಯದಲ್ಲಿಯೇ ಪೋಸ್ಟ್ ಮಾಡಲಾಗುತ್ತದೆ. ಅದರ ನೆರವಿನಿಂದ ನಮ್ಮ ಕೆಲಸದ ಪ್ರೇರಣೆಯೇನು, ನಮ್ಮ ತಂಡದ ದೃಷ್ಟಿಕೋನವೇನೆಂಬುದು ಸಂಪೂರ್ಣವಾಗಿಯಲ್ಲದಿದ್ದರೂ ತಕ್ಕಮಟ್ಟಿಗೆ ದಾಖಲಿಸಿದ ಹಾಗಾಗುತ್ತದೆ.

ಸಿನೆಮಾ ಮಾಡಬೇಕೆಂಬ ತೀರ್ಮಾನವನ್ನು ಮಾಡಿದ ನಂತರ ಹಲವು ಬಾರಿ ಭೇಟಿಯಾಗಿ ನಮ್ಮ ತಂಡ ಚರ್ಚೆಗಳನ್ನು ನಡೆಸುತ್ತಿತ್ತು. ಟೌನ್ ಹಾಲಿನ ಬದಿಯ ಕಲ್ಲು ಹಾಸುಗಳು, ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನಿನ ಕಲ್ಲು ಕಟ್ಟೆಗಳು ನಮ್ಮ ಮಾತುಕತೆ, ಹರಟೆ, ವಾದಗಳಿಗೆ ಸಾಕ್ಷಿಯಾಗಿವೆ. ಅನಂತರ ಮಾಡುವ ಕೆಲಸದ ಬಗ್ಗೆ ಸ್ವಲ್ಪ ಸ್ಪಷ್ಟತೆ ಸಿಕ್ಕನಂತರ ಸ್ಥೂಲವಾಗಿ ಕಟ್ಟಿಕೊಂಡಿದ್ದ ವಿಷಯಕ್ಕೆ ಪೂರಕವಾದ ವಸ್ತುವನ್ನು ಹುಡುಕಿಕೊಂಡು ಮೂರು ದಿನಗಳ ಪ್ರವಾಸವನ್ನು ಕೈಗೊಂಡೆವು. ತೀರ್ಥಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ತಿರುಗಾಡಿ ಅಲ್ಲಿನ ಜನರನ್ನು, ಬಿರು ಮಳೆಯನ್ನು, ಹಸಿರು ಕಾಡನ್ನು, ಸೇತುವೆ, ನದಿಗಳನ್ನು ಮಾತನಾಡಿಸಿಕೊಂಡು ಹಿಂದಿರುಗಿದೆವು. ಈ ಪ್ರವಾಸದ ಕುರಿತಾದ ಟಿಪ್ಪಣಿಯೂ ಸಹ ಮುಂದಿನ ದಿನಗಳಲ್ಲಿ ಈ ಬ್ಲಾಗಿನಲ್ಲಿ ಪ್ರಕಟವಾಗುತ್ತದೆ.

ವಸ್ತುವಿನ ಕುರಿತು ಸ್ಪಷ್ಟತೆ ಸಿಕ್ಕಿತು ಎಂಬ ಭ್ರಮೆ ಒಂದಿಬ್ಬರಿಗೆ ಆವರಿಸಿಕೊಂಡ ಕಾವಿನಲ್ಲೇ ಕತೆಯನ್ನು ಹೆಣೆಯುವ ಕಾಯಕಕ್ಕೆ ಮುಂದಾದೆವು. ಅಲ್ಲಿಯವರೆಗೆ ಕತೆಗೂ ಚಿತ್ರಕತೆಗೂ ಹೆಚ್ಚೆಂದರೆ ಎರಡು ಅಕ್ಷರಗಳ ವ್ಯತ್ಯಾಸವಿದೆ ಎಂದಷ್ಟೇ ಭಾವಿಸಿದ್ದ ನಮಗೆ ಅವುಗಳ ನಡುವಿನ ಅಂತರ ಭೂಮಿ ಆಕಾಶದಷ್ಟು ಎನ್ನುವ ಸತ್ಯ ಗೋಚರವಾಗ್ತಾ ಹೋಯ್ತು. ಬರೆಯಲು ತೊಡಗಿದರೆ ಪಾತ್ರಗಳ ಒಳತೋಟಿ, ಮನೋವ್ಯಾಪಾರಕ್ಕೇ ಪೆನ್ನು ಸಿಲುಕಿಸಿಕೊಂಡು ಒದ್ದಾಡುವ ಸಮಸ್ಯೆ ಕೆಲವೇ ದಿನಗಳಲ್ಲಿ ನಮ್ಮೆಲ್ಲರ ಗಮನಕ್ಕೆ ಬಂದಿತು. ಕಾದಂಬರಿ, ಕತೆಗಳನ್ನು ಓದಿಕೊಂಡವರಿಗಂತೂ ಸಿನೆಮಾ ಸ್ರ್ಕೀನ್ ಪ್ಲೇ ಓದುವುದು ಧರ್ಮಸ್ಥಳದ ಬಸ್ಸಲ್ಲಿ ಕೂತು ಪ್ಯಾರಿಸಿನ ರೇಲ್ವೇ ಟೈಮ್ ಟೇಬಲ್ ಓದಿದಂತಾಗುತ್ತಿತ್ತು. ಶುಷ್ಕವಾದ ಭಾಷೆಯಲ್ಲಿ ಚಿತ್ರಕತೆಯನ್ನು ಬರೆಯುವುದೇ ಸವಾಲಾಗಿ ಹೋಗಿತ್ತು. ಈ ಅನುಭವದ ನಿರೂಪಣೆಯ ಬರಹವೂ ಸಹ ಸಧ್ಯದಲ್ಲೇ ಪ್ರಕಟಿಸಲಿದ್ದೇವೆ.

ಅನನುಭವಿಗಳಾದ ಅಮೆಚ್ಯೂರ್ ಗಳ ತಂಡ ಯಾವುದಕ್ಕೇ ಕೈ ಹಾಕಿದರೂ ಒಂದು ಅಪಾಯ ಕಟ್ಟಿಟ್ಟ ಬುತ್ತಿ. ನಾವು ಯಾವ ಸ್ಥಾಪಿತ ಕ್ಷೇತ್ರದ ನಿಯಮಾವಳಿಗಳನ್ನು ಮುರಿಯ ಹೊರಟಿದ್ದೇವೆಯೋ, ಯಾವ ಸ್ಟೀರಿಯೋಟೈಪುಗಳಿಂದ ರೋಸು ಹೋಗಿ ಹೊಸ ಸಾಹಸಕ್ಕೆ ಕೈಹಾಕಿದ್ದೇವೆಯೋ, ತಾವುದರಿಂದ ತಪ್ಪಿಸಿಕೊಳ್ಳಲೆಂದು ಓಡುತ್ತಿದ್ದೇವೆಯೋ ಅದೇ ಗುಂಡಿಗೆ ಬಂದು ಬೀಳುವುದು... ಅಮೆಚ್ಯೂರ್ ಗಳಾದವರು ಅನುಕರಣೆಯ ಸಂಕೋಲೆಗೆ ಸಿಲುಕಿಕೊಂಡು ಬಿಡುವುದು. ಹೀಗಾಗದಿರುವುದಕ್ಕೆ ಟೀಮ್ ಲೀಡರ್ ಆಗಾಗ ಅಂಟಿಕೊಂಡ ತುಕ್ಕನ್ನು ಕೆರೆದು ತೆಗೆಯುತ್ತಿರಬೇಕಾಗುವುದು. ಶೇಖರ್ ಪೂರ್ಣರೊಂದಿಗೆ ಪ್ರತಿ ಬಾರಿ ಮಾತನಾಡುವಾಗಲೂ ನಾವು ಹೀಗೆ ಸ್ವಯಾರ್ಜಿತವಾಗಿ ಸಂಪಾದಿಸಿದ ತುಕ್ಕು ಕೆರೆದು ತೆಗೆಸಿಕೊಂಡ ಅನುಭವವಾಗುತ್ತಿತ್ತು. ಈ ಕೆಲಸದಲ್ಲಿ ತೊಡಗಿಕೊಂಡಾಗಿನಿಂದ ನಮ್ಮ ಗ್ರಹಿಕೆ, ದೃಷ್ಟಿಕೋನಗಳಲ್ಲಿ ಆದ ಬದಲಾವಣೆಗಳನ್ನೆಲ್ಲಾ ದಾಖಲಿಸಬೇಕೆನ್ನುವ ಉದ್ದೇಶದಿಂದ ಗೀಚಿದ ಟಿಪ್ಪಣಿಗಳೂ ಸಹ ಪ್ರಕಟವಾಗಲಿವೆ.