Wednesday, May 2, 2012

ಅಸ್ತಿತ್ವದ ಹುಡುಕಾಟದಲ್ಲಿ ಕನ್ನಡ ಚಿತ್ರರಂಗ



ಅಸ್ತಿತ್ವದ ಹುಡುಕಾಟದಲ್ಲಿ ಕನ್ನಡ ಚಿತ್ರರಂಗ


೭೭ ವರ್ಷಗಳನ್ನು ಪೂರೈಸಿರುವ ಕನ್ನಡ ಸಿನಿಮಾಗೆ ತಾನು ನಡೆದ ಬಂದ ಹಾದಿಯನ್ನೊಮ್ಮೆ ಮೆಲುಕು ಹಾಕಬೇಕಾದ ಕಾಲಘಟ್ಟದಲ್ಲಿ ನಿಂತಿದೆ ಎಂದು ಹೇಳಬೇಕಾಗಿರುವ ಅನಿವಾರ್ಯತೆ ಬಂದಿರುವುದು ಸಂತೊಷದ ಸಂಗತಿಯಲ್ಲ. ಕಾರಣ  ಕನ್ನಡದ ಮೊದಲ ವಾಕ್ಚಿತ್ರವಾಗಿ ೧೯೩೪ರಲ್ಲಿ ಸಿನಿಮಾ ಮಾಧ್ಯಮದಲ್ಲಿ ತನ್ನ ಅಸ್ಥಿತ್ವವನ್ನು ಹುಡುಕಲು ಪ್ರಾರಂಭಿಸಿದ ಕನ್ನಡ ಚಿತ್ರರಂಗ ೭೦-೮೦ ರ ದಶಕದಲ್ಲಿ ಉಚ್ಛಾಯ ಸ್ಥಿತಿಯನ್ನು ತಲುಪಿದರೂ.. ಆ ನಂತರದ ಎರಡು ದಶಕಗಳಲ್ಲಿ ಮತ್ತೆ ಮತ್ತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯೋಗಗಳ ಜೊತೆಗೆ ರಿಮೇಕ್‌ನ ಮೊರೆ ಹೋಗಲೇಬೇಕಾದ ಅನಿವಾರ್ಯತೆಯನ್ನು ಸದಾ ಎದುರಿಸುತ್ತಲೇ ಬರುತ್ತಿದೆ. ಅಂತಹ ರೀಮೇಕ್‌ಗಳಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿರುವುದು ಹೌದಾದರು ರಿಮೇಕ್ ಸಿನಿಮಾಗಳಿಂದಾಗಿಯೇ ಕನ್ನಡ ಚಿತ್ರರಂಗ ಉಳಿದುಕೊಂಡಿದೆ ಎಂದು ಹೇಳಲು ಬರುವುದಿಲ್ಲ. 
ಭಾರತೀಯ ನೆಲೆಯಲ್ಲಿ ಸಾಹಿತ್ಯದ ಪಸಲು ಜಾಗತಿಕ ಸಿನಿಮಾಗಳಿರುವಂತೆ ಬಹುತೇಕ ಅವಕಾಶಗಳು ಇವೆ. ಅದನ್ನು ಸಮರ್ಥವಾಗಿ ಬಳಸಿಕೊಂಡೇ ಸಿನಿಮಾರಂಗವು ಬೆಳೆದಿದೆ. ಅದರಲ್ಲು ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರತಿ ರಾಜ್ಯಕ್ಕು ತನ್ನದೇ ಆದ ಐತಿಹಾಸಿಕ ನೆಲೆಗಟ್ಟಿದೆ. ಆ ನೆಲೆಗಟ್ಟಿನಲ್ಲಿ ಸಾಹಿತ್ಯವು ವಿಫುಲವಾಗಿ ಬೆಳೆದಿವೆ. ಆ ಸಾಹಿತ್ಯಕ್ಕೆ ಮೂಲಧಾರ ಆಯಾ ರಾಜ್ಯಗಳ ಸಾಂಸ್ಕೃತಿಕ, ಜಾನಪದ. ಅದರ ಮೂಲದಿಂದಲೇ ಸಾಹಿತ್ಯವು ಸ್ಥಳೀಯತೆಯ ಕುರಿತಂತೆ ಸ್ಥಳೀಯ, ರಾಷ್ಟ್ರೀಯ, ಜಾಗತಿಕ ಚೌಕಟ್ಟಿನಲ್ಲಿ ಚರ್ಚಿಸಿ ಬೆಳೆಯುತ್ತ ಹೋಗುತ್ತಿದೆ. ಸ್ವಾತಂತ್ರ್ಯಾನಂತರವಂತು ಸಾಹಿತ್ಯದ ಪರಿಧಿಯ ವಿಸ್ತರಣೆಯು ಹರಡಿದೆ. ಇದೇ ಅಂಶವು ಪೌರಾಣಿಕ ಹಿನ್ನಲೆಯಿಂದ ಪ್ರಾರಂಭವಾದ ಸಿನಿಮಾ ನಿರ್ಮಾಣಕ್ಕೆ ಸಾಮಾಜಿಕ ಚಿತ್ರಗಳನ್ನು ನಿರ್ಮಿಸಲು ಪ್ರೇರಣೆ ನೀಡಿತು. 
"ನಾಂದಿ" ಸಿನಿಮಾ ಬರುವವರೆಗೆ ಸಿನಿಮಾ ಎಂದರೆ ಸಿನಿಮಾ ಅಷ್ಟೆ ಅಲ್ಲಿ ಜನಪ್ರಿಯ, ಕಲಾತ್ಮಕ ಅಥವ ಹೊಸ ಅಲೆಯ ಚಿತ್ರಗಳು ಎಂಬ ವಿಭಜನೆ ಎಂಬುದಿರಲಿಲ್ಲ. ಹೊಸ ಅಲೆಯ ಚಿತ್ರ ಎಂಬ ಹಣೆಪಟ್ಟಿಯೊಂದಿಗೆ ತೆರೆಕಂಡ ಎನ್.ಲಕ್ಷ್ಮಿನಾರಾಯಣ ನಿರ್ದೆಶನದ ನಾಂದಿ ಚಿತ್ರ ಮುಂದೆ ಇಂತಹುದೇ ಒಂದಷ್ಟು ಸಿನಿಮಾಗಳ ನಿರ್ಮಾಣದೊಂದಿಗೆ ಕನ್ನಡ ಸಿನಿಮಾರಂಗವನ್ನು ಜನಪ್ರಿಯ-ಕಲಾತ್ಮಕ ಸಿನಿಮಾ ಎಂದು ವಿಭಜಿಸುವಂತೆ ಮಾಡಿತು. ಇದರ ಪರಾಕಾಷ್ಠೆಯೆಂದರೆ ಈಗಿನ ಕಲಾತ್ಮಕ ಹಣೆಪಟ್ಟಿ ಹೊತ್ತು ಬರುವ ಸಿನಿಮಾಗಳು ಪ್ರಶಸ್ತಿಗಾಗಿಯೇ ನಿರ್ಮಾಣಗೊಂಡಿರುವವು ಎಂಬ ಅಪವಾದವಿದೆ. ಇದಕ್ಕೆ ಪೂರಕವೆಂಬಂತೆ ಈ ಸಿನಿಮಾಗಳು ಸಾರ್ವಜನಿಕ ಪ್ರದರ್ಶನಗಳನ್ನು ಕಾಣುವುದೇ ಇಲ್ಲ. ಕಂಡರೂ ಒಂದೆರೆಡು ದಿನಗಳಲ್ಲಿ ಥಿಯೇಟರ್‌ನಿಂದ ಜಾಗ ಖಾಲಿ ಮಾಡಿರುತ್ತವೆ.  ಈಚಿನ ಕೆಲವು ವರ್ಷಗಳಲ್ಲಿ ಪ್ರಶಸ್ತಿಗಾಗಿ ಎಂದೆ ಸಿನಿಮಾ ಮಾಡುವವರ ದೊಡ್ದ ದಂಡೇ ಕನ್ನಡ ಚಿತ್ರಂಗದಲ್ಲಿದೆ. ಇವರು ಮಾಡುವ ಸಿನಿಮಾ ಕನ್ನಡದ ಎಷ್ಟು ಪ್ರೇಕ್ಷಕರಿಗೆ ತಲುಪಿದೆ ಎನ್ನುವುದಕ್ಕಿಂತ ಎಷ್ಟು ಪ್ರಶಸ್ತಿಗಳು ಬಂದಿವೆ, ಎಷ್ಟು ಸಬ್ಸಿಡಿ ಸಿಗುತ್ತೆ ಎಂಬ ಲೆಕ್ಕಾಚಾರದಲ್ಲೆ ನಿರ್ಮಾಣಗೊಳ್ಳುತ್ತವೆ. ಅದರ ನಿರ್ಮಾಣ ವೆಚ್ಚವೂ ಕೂಡ ಅದೇ ಆ ಲೆಕ್ಕಾಚಾರದ ಪರಿಧಿಯಲ್ಲೆ ಇರುತ್ತದೆ. ಪ್ರಶಸ್ತಿ ಮತ್ತು ಸಬ್ಸಿಡಿಗಾಗಿ ದೊಡ್ಡ ಮಟ್ಟದಲ್ಲಿ ಲಾಭಿಯೂ ನಡೆಯುತ್ತದೆ. 
ಜನಪ್ರಿಯ ಸಿನಿಮಾಗಳೆಂಬ ಸಿನಿಮಾಗಳದು ಮತ್ತೊಂದು ರೀತಿಯ ಗೋಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಅದು ಪರಾವಲಂಬನೆ. ಅಂದರೆ ಒಂದು ಸಿನಿಮಾ ಶ್ರಿಮಂತಿಕೆಯಿಂದ ಕೂಡಿರಬೇಕು ಎಂದರೆ ಅದಕ್ಕೆ ಹೊರ ರಾಜ್ಯದ ತಾಂತ್ರಿಕರೆ ಬೇಕು ಕನ್ನಡ ಚಿತ್ರರಂಗ ೭೭ ವರ್ಷಗಳ ಅವಧಿಯ ಹಾದಿಯನ್ನು ಕ್ರಮಿಸಿದ್ದರು ಇಂದಿಗೂ ಚಿತ್ರೀಕರಣದ ನಂತರದ ಕೆಲಸಗಳಿಗೆ ನೆಚ್ಚಿಕೊಂಡಿರುವುದು ಮದ್ರಾಸು ಬಾಂಬೆಗಳ ತಾಂತ್ರಿಕರನ್ನೇ. ಕರ್ನಾಟಕದಲ್ಲಿ ಇದ್ಯಾವುದು ಇಲ್ಲವೆಂದಲ್ಲ. ಇಲ್ಲಿಯೂ ಕರಿಸುಬ್ಬುರವರ ಬಾಲಾಜಿ ಸ್ಟುಡಿಯೋ, ಚಾಮುಂಡೇಶ್ವರಿ, ಪ್ರಸಾದ್, ಆದಿತ್ಯ ಮತ್ತು ಪ್ರಮುಖ ಸಂಕಲನಾಕಾರರ ಪ್ರತ್ಯೇಕ ಸ್ಟುಡಿಯೋಗಳಿವೆ. ಆದರೆ ಸಂಸ್ಕರಣಕ್ಕೆ ಹೊರರಾಜ್ಯದ ಪ್ರಸಾದ್ ಲ್ಯಾಬ್ ಒಂದೆ ಇರುವುದು. ಇಲ್ಲೂ ಕೆಲವೊಂದು ಒಳ ರಾಜಕೀಯಗಳಿವೆ. ಹಾಗಾಗಿ ಇಲ್ಲಿ ತಯಾರಾಗುವ ಸಿನಿಮಾಗಳ ಅಂಕಿಗಳಿಗೆ ಈ ಒಂದೇ ಲ್ಯಾಬ್ ಸಾಕಾಗುವುದಿಲ್ಲ. ಹಲವು ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಕಾಲಾವಧಿಯಲ್ಲಿ ಕನ್ನಡದ ಕಣ್ಮಣಿಯ ಧರ್ಮ ಪತ್ನಿಗೆ ಹೆಸರಘಟ್ಟದ ಬಳಿ ಇಂತಹ ಸ್ಟುಡಿಯೊ ನಿರ್ಮಾಣ ಮಾಡಲು ಸ್ಥಳನೀಡಲು ಮುಂದಾದರು ಅದಕ್ಕೆ ಒಲ್ಲೆ ಎಂದು ಗಾಂಧಿನಗರದಲ್ಲೇ ಸ್ಥಳ ನೀಡಬೇಕೆಂಬ ಒತ್ತಡ ಕೂಡ ಹೇರಲಾಗಿತ್ತು.
ಇವಿಷ್ಟು ಕನ್ನಡ ಚಿತ್ರರಂಗದ ಸಧ್ಯದ ಅದೋಗತಿಯ ಸ್ಥಿತಿಗೆ ಕೆಲವು ನಿರ್ಮಾಣದ ಹಿಂದಿರುವ ಕಾರಣಗಳಾದರೆ, ಕಳೆದ ಹಲವು ವರ್ಷಗಳ ಸಿನಿಮಾಗಳನ್ನು ೭೦-೮೦ ರ ದಶಕದ ಸಿನಿಮಾಗಳಿಗೆ ಹೋಲಿಸಿದಾಗ ಆಗ ನಿರ್ಮಾಣವಾಗುತ್ತಿದ್ದ ಸಿನಿಮಾಗಳಲ್ಲಿನ ವೈವಿಧ್ಯತೆ ಕಾಣಸಿಗುವುದು ಈಗ   ಅಪರೂಪ. ಇದಕ್ಕೆ ಇಂದಿನ ಸಿನಿಮಾಗಳ ವಿತರಣೆಯ ಮಾರುಕಟ್ಟೆಯೇ ನೇರ ಕಾರಣವೆನ್ನಬಹುದು. ಕನ್ನಡ ಚಿತ್ರಗಳ ಬಿಡುಗಡೆಯ ಹಣೆಬರಹವನ್ನು ನಿರ್ಧರಿಸುವವರು ವಿತರಕರು. ಯಾವುದೇ ಸಿನಿಮಾ ಆಗಲಿ ಅದು ಥಿಯೇಟರ್‌ನಲ್ಲಿ ಇರಬೇಕೆ? ಬೇಡವೆ ಎಂದು ನಿರ್ಧರಿಸುವುದರಿಂದ ಹಿಡಿದು.. ಯಾವ ಯಾವ ಸಿನಿಮಾಗೆ ಯಾವ ಥಿಯೇಟರ್ ಕೊಡಬೇಕು ಎಷ್ಟು ದಿನ ಥಿಯೇಟರ್‌ನಲ್ಲಿ ಇರಬೇಕು ಎಂದು ನಿರ್ಧರಿಸುವವರು ಇವರೇ. ಇವರೊಳಗಿನ ಅಂತಃ ಕಲಹಗಳು ರಾಜಕೀಯದಿಂದಾಗಿ, ಕೆಲವೊಂದು ಉತ್ತಮ ಸಿನಿಮಾಗಳು ಪ್ರೇಕ್ಷಕರನ್ನು ತಲುಪುವುದೇ ಇಲ್ಲ. ಇವರ ಕುಟಿಲತೆಗೆ ಜೊತೆಯಾದರೆ ಎಂತಹ ಕೆಟ್ಟ ಸಿನಿಮಾಗೆ ಬೇಕಾದರು ಕೆಂಪೇಗೌಡ ರಸ್ತೆಯಲ್ಲಿ ಚಿತ್ರಮಂದಿರ ಸಿಗುತ್ತದೆ. 
ಕನ್ನಡ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡುವಲ್ಲಿ ಕನ್ನಡದ ನಿರ್ದೇಶಕರ, ನಿರ್ಮಾಪಕರ ಅಪಾರ ಪರಿಶ್ರಮವಿದೆ. ಆದರೆ ಅದು ಕೇವಲ ಹೆಸರಿಗೆ ಮಾತ್ರ ಸೀಮಿತವಾಯಿತೆ ಹೊರತು ಮಾರುಕಟ್ಟೆಯಲ್ಲಲ್ಲ. ಹಾಗಂತ ಇಲ್ಲಿ ತಯಾರಾಗುವ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲವೆಂದಲ್ಲ. ಅದಕ್ಕೆ ಉದಾಹರಣೆಯಾಗಿ ಮುಂಗಾರು ಮಳೆ, ಜೋಗಿ, ಜೋಗಯ್ಯ, ಪರಮಾತ್ಮ, ಸಾರಥಿ ಸಿನಿಮಾಗಳನ್ನು ಹೆಸರಿಸಬಹುದು. ಕನ್ನಡಚಿತ್ರರಂಗದಲ್ಲಿ ತನ್ನ ಮೂಲವಾಗಿಸಿಕೊಂಡು ತೆಲುಗು ಮತ್ತು ತಮಿಳಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದು ಮತ್ತೊಂದು ಉದಾಹರಣೆ. ಕನ್ನಡದಿಂದ ಇನ್ನೂ ಅನೇಕರು ಬೇರೆ ಭಾಷೆಗಳಲ್ಲಿ ಹೆಸರು, ಖ್ಯಾತಿಗಳನ್ನು ಗಳಿಸಿದ್ದರೂ ಉಪೇಂದ್ರ ಮಾತ್ರ ಉದಾಹರಣೆ ಯಾಕೆಂದರೆ ಅವರದು ಪ್ರತಿಭಾ ಪಲಾಯನವಲ್ಲ. ತಮ್ಮ ಪ್ರತಿಭೆಯೊಂದನ್ನೇ ನಂಬಿ ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿಯೇ ಘಟ್ಟಿಯಾಗಿ ತಳವೂರಿ ಇಂದು ಅಲ್ಲಿನ ಚಿತ್ರಂಗದಲ್ಲಿ ಅಲ್ಲಿ ನಿರ್ಮಾಣವಾಗುವ ಸಿನಿಮಾಗಳಲ್ಲಿ ನಿರ್ಣಾಯಕ ಪಾತ್ರವನ್ನು ಪೋಷಿಸುತ್ತಿರುವ ಅನೇಕ ಪ್ರತಿಭೆಗಳು ನಮ್ಮವರೆಂದು ಹೆಮ್ಮೆಯೆಂದ ಹೇಳಿಕೊಳ್ಳುವುದಕ್ಕೇ ಸಾಧ್ಯವಾಗಿದೆಯೆ ಹೊರತು ಅವರ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬಹುದಾದ ಸಾಧ್ಯತೆಗಳು ಯಾರ ಕಣ್ಣಿಗೂ ಕಾಣುತ್ತಿಲ್ಲ.
ಇಲ್ಲಿಂದ ಬೇರೆ ಭಾಷೆಗಳಿಗೆ ವಲಸೆ ಹೋದವರೆ ಯಾಕೆ ಎಂಬ ಪ್ರಶ್ನೆ ಥಟ್ ಎಂದು ನಮ್ಮ ಮುಂದೆ ಇಡುವವರು ಸಾಕಷ್ಟು ಮಂದಿ ಇದ್ದಾರೆ.  ಆದರೆ ಅವರು ಮರೆಯುವ ಅಥವ ಮರೆಯುವಂತೆ ನಟಿಸುವ ಹಿಂದಿರುವ ಉದ್ದೇಶವೇನೂ ಚಿದಂಬರ ರಹಸ್ಯವೇನೂ ಅಲ್ಲ. ಉತ್ತರ ಸ್ಪಷ್ಟ ಇಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದೇ ಅಪರೂಪ. ತೆರೆಯ ಮೇಲೆ ಕಾಣಿಸುವ ಅಪರೂಪದ ಪ್ರತಿಭೆಗಳಿಗೆ ಅವರ ಪ್ರತಿಭೆಯನ್ನು ತೋರಿಸಿಕೊಳ್ಳುವಂತ ಚಿತ್ರಕಥೆಗಳು ಇಲ್ಲಿ ತಯಾರಾಗದೆ ಇರುವುದೂ ಒಂದು ಕಾರಣ. ಕನ್ನಡ ನಿರ್ಮಾಪಕರಿಗೆ ಸದಾ ಸ್ಟಾರ್‌ಗಳೇ ನಾಯಕರಾಗಬೇಕು. ಆ ಸ್ಟಾರ್‌ಗಳು ಇಲ್ಲಿನವರೇ ಆಗಿರಬೇಕು, ಹೊರಗಿನವರನ್ನು ಕರೆತರಲು ಇವರ ಬಳಿ ಬಡ್ಜೆಟ್ ಇರುವುದಿಲ್ಲ. ಇದ್ದರೂ ಅವರನ್ನು ಕರೆ ತರುವುದಕ್ಕೆ ಹೋಗುವುದಿಲ್ಲ. ಅದೇ ಮಾತು ನಾಯಕಿಯರ ವಿಷಯದಲ್ಲಿ ತದ್ವಿರುದ್ದ. ಇವರ ಸಿನಿಮಾಗಳಿಗೆ ಪರಭಾಷೆಯ ತಳುಕೇ ಬೇಕು, ಅಥವ ಇಲ್ಲಿ ಅದಾಗಲೆ ಸ್ಟಾರ್ ಪಟ್ಟದಲ್ಲಿರುವವರು ಬೇಕು.
ಮುಂಗಾರು ಮಳೆ ಸಿನಿಮಾನ ಕನ್ನಡ ಚಿತ್ರರಂಗದ ಮರುಹುಟ್ಟು ಎಂದೇ ಹೇಳಲಾಗುತ್ತದೆ. ಅದು ಒಂದು ಹಂತದ ಮಟ್ಟಿಗೆ ಸರಿ ಇರಬಹುದೇನೋ ಹೊರತು ಅದೇ ಸತ್ಯವಲ್ಲ. ಕಾರಣ ಅದಕ್ಕು ಮುಂಚೆ ಕನ್ನಡ ಚಿತ್ರರಂಗ ಸತ್ತೇನೂ ಹೋಗಿರಲಿಲ್ಲ. ಮುಂಗಾರು ಮಳೆಗೂ ಮುನ್ನ ಒಂದೆರೆಡು ವರ್ಷಗಳ ಕಾಲ ಲಾಂಗು ಮಚ್ಚಿನದೇ ದರ್ಬಾರು ಅದಕ್ಕೆ ಕಾರಣ, ಓಂ, ಕರಿಯ ಮತ್ತು ಜೋಗಿ. ಈ ಮೂರು ಸಿನಿಮಾಗಳ ಯಶಸ್ಸಿನಿಂದಾಗಿ ಹೆಚ್ಚಾಗಿ ಅದೇ ರೀತಿಯ ಕನ್ನಡ ಸಿನಿಮಾಗಳು ಹೆಚ್ಚಾಗಿ ಬರುತ್ತಿದ್ದವು.. ಇದೇ ಪರಂಪರೆ ಮುಂಗಾರುಮಳೆ ಮತ್ತು ದುನಿಯಾ ಸಿನಿಮಾಗಳ ಸಕ್ಸಸ್ ನಿಂದಾಗಿ ಮುಂದುವರೆದದ್ದೂ ಹೌದು. ಸತತ ಮೂರು ವರ್ಷಗಳ ಕಾಲ ಈ ಎರಡೂ ಸಿನಿಮಾಗಳ ಫಾರ್ಮುಲ ಇಟ್ಕೊಂಡು ಸುಮಾರು ಸಿನಿಮಾಗಳು ಬಂದವು. ಸ್ವತಃ ಈ ಎರಡೂ ಸಿನಿಮಾಗಳ ನಿರ್ದೇಶಕರು ಅದರ ಪ್ರಭಾವಕ್ಕೊಳಗಾಗದೇ ಸಿನಿಮಾ ನಿರ್ದೇಶಿಸಿದರು ಜನರು ಮತ್ತೆ ಮತ್ತೆ ಅಂತಹದ್ದೇ ಸಿನಿಮಾ ಕೇಳಿದರು. ಬೇರೆ ನಿರ್ದೇಶಕರು ರೀಲು ಸುತ್ತಿದರು. ಸುತ್ತಿ ತಕ್ಕಮಟ್ಟಿಗೆ ಗೆದ್ದವರು ಮತ್ತಷ್ಟು ಸುತ್ತಲು ಹೊರಟರು, ಸುತ್ತಿ ಸುಸ್ತಾದವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಮನೆ ಸೇರಿಕೊಂಡರು, ಮಾರಿಕೊಂಡರು. 

ಇದೆಲ್ಲದರ ಪರಿಣಾಮ ನೇರವಾಗಿ ತಟ್ಟುವುದು ಸಿನಿಮಾ ನಿರ್ಮಾಣದ ಮೇಲೆ. ಈಗಾಗಲೆ ನಿರ್ಧರಿತವಾಗಿರುವ ಮಾರುಕಟ್ಟೆಯನ್ನು ಪ್ರವೇಶಿಸಲು ಹೊಸ ನಿರ್ಮಾಪಕ ನಿರ್ದೇಶಕರು ಹಳೆಯ ಗೆದ್ದೆತ್ತಿನ ಬಾಲವನ್ನೆ ಹಿಡಿಯುತ್ತಾರೆ. ಅಥವ ಹಿಡಿಯಲೇ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಂಡೇ ಸಿನಿಮಾರಂಗಕ್ಕೆ ಪ್ರವೇಶಿಸುತ್ತಾರೆ. ಆಗ ನಿರ್ಮಾಣವಾಗುವ ಸಿನಿಮಾಗಳಲ್ಲಿ ಕಥೆ ಮತ್ತು ಚಿತ್ರಕಥೆಗೆ ಗಟ್ಟಿ ತಳಪಾಯವಿಲ್ಲದೆ ಚಿತ್ರ ಬಿಡುಗಡೆಗೊಂಡ ಮರುದಿನವೇ ಎತ್ತಂಗಡಿಯಾಗಿ ಮತ್ತೊಂದು ಸಿನಿಮಾ ಬಂದು ಕೂರುತ್ತವೆ. ೭೦-೮೦ರ ದಶಕದಲ್ಲಿ ಕೆಟ್ಟ ಸಿನಿಮಾಗಳು, ಜನಪ್ರಿಯ ಅಂಶಗಳನ್ನೊಳಗೊಂಡ ಸಿನಿಮಾಗಳು ಬರುತ್ತಿರಲಿಲ್ಲವೇ ಎಂದು ಕೇಳಬಹುದು. ಬರುತ್ತಿರಲಿಲ್ಲ ಎಂದಲ್ಲ. ಆಗಲು ಬರುತ್ತಿದ್ದವು. ಆದರೆ ಆಗ ಸಿನಿಮಾ ನಿರ್ಮಾಣದ ಮಾರುಕಟ್ಟೆ ಇಷ್ಟು ವಿಸ್ತಾರವಾಗಿರಲಿಲ್ಲ. ತಾಂತ್ರಿಕವಾಗಿ ಇಷ್ಟು ಮುಂದುವರೆದಿರಲಿಲ್ಲ. ಆಗ ಯಾವುದೇ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶಿತವಾಗಬೆಕಾದರೆ ಅದು ಪಾಸಿಟಿವ್ ರೀಲ್‌ನಲ್ಲೇ ಪ್ರದರ್ಶಿತವಾಗಬೇಕಿತ್ತು. ಈಗಿನಂತೆ ಪಾಸಿಟಿವ್ ಇಲ್ಲದೆ ಯುಎಫ್‌ಓ ಮುಖಾಂತರ ಥಿಯೇಟರ್‌ಗೆ ಬರುತ್ತಿರಲಿಲ್ಲ. ಜೊತೆಗೆ ಆಗ ನಿರ್ಮಾಣವಾಗುತ್ತಿದ್ದ ಸಿನಿಮಾ ಸಂಖ್ಯೆಗಳು ಕಡಿಮೆ. ಹಾಗಾಗಿ ಸಿನಿಮಾ ಪ್ರೇಕ್ಷಕ ತೆರೆ ಕಂಡ ಬಹುತೇಕ ಸಿನಿಮಾಗಳನ್ನು ನೋಡುತ್ತಿದ್ದ. ಅದೂ ವ್ಯಕ್ತಿಯಾರಧನೆಯು ಉಚ್ಛ್ರಾಯ ಸ್ಥಿತಿಯನ್ನು ತಲುಪುತ್ತಿದ್ದ ಕಾಲವದು.. ಜೊತೆಗೆ ಬಹುತಾರಗಣ ಎಂಬ ಬ್ರಾಂಡ್ ಇಲ್ಲದೆ ಪ್ರಮುಖ ನಟರೆಲ್ಲ ಜೊತೆಯಾಗಿ ನಟಿಸುವುದನ್ನು ಬಿಟ್ಟು ಏಕಮೇವಾದ್ವಿತೇಯರಾಗಿ ಮೆರೆಯಲು ಹೊರಟ ಕಾಲವಾಗಿದ್ದರು ಪ್ರೇಕ್ಷಕ ಎಲ್ಲರ ಸಿನಿಮಾಗಳನ್ನು ನೋಡುತ್ತಿದ್ದ.
ಈ ಮೇಲಿನ ಕಾರಣಗಳು ಸಿನಿಮಾದ ಯಶಸ್ಸಿನಲ್ಲಿ ಕಾಲುಭಾಗಕ್ಕಿಂತ ಕಡಿಮೆ ಪಾಲುದಾರರಷ್ಟೇ, ಯಶಸ್ಸಿನ ಮೂಲಾಧಾರ ಕಥೆ-ಚಿತ್ರಕಥೆ, ನಟರು, ತಂತ್ರಜ್ಞರಲ್ಲಿದ್ದ ವೃತ್ತಿಪರತೆ ಮುಖ್ಯವಾದವು. ಈಗಿನ ತಂತ್ರಜ್ಞನರಲ್ಲು ವೃತ್ತಿಪರತೆ ಇದ್ದರು.. ಆಗಿನ ತಂತ್ರಜ್ಞರಿಗೆ ಈಗಿನವರಂತೆ ಸಿನಿಮಾ ಮಾಡುವುದೆಂದರೆ ಬರೀ ಹಣ ಮಾಡುವುದಲ್ಲ.. ಸಿನಿಮಾ ಅಂದರೆ ದೇವರು, ಸಿನಿಮಾನೆ ಉಸಿರು, ಸಿನಿಮಾನೆ ಎಲ್ಲ. ಹಾಗಾಗಿ ಸಿನಿಮಾಗಳಲ್ಲಿ ಸಿನಿಮಾ ಕಥೆಯಲ್ಲಿ ಸಾಧ್ಯವಾದಷ್ಟು ಪ್ರೇಕ್ಷಕ ಸ್ಪಂದಿಸುವಂತೆ ಕಥೆಗಳಿಗೆ- ಚಿತ್ರಕಥೆಗಳಿಗೆ ಹೆಚ್ಚು ಒತ್ತು ನಿಡುತ್ತಿದ್ದರು. ಆಗಿನ ಕಥೆಗಳಲ್ಲಿ ಆಗಿನ ಸಮಾಜದ ಕುರಿತಂತೆ ಒಂದು ಕಳಕಳಿ, ಸಮಸ್ಯೆಗಳಿಗೆ ಸ್ಪಂದಿಸುವಂತ ದೃಶ್ಯ ನಿರೂಪಣೆಯನ್ನು ಸಿನಿಮಾದ ಒಳಗೆ ಅಳವಡಿಸಿಕೊಳ್ಳುತ್ತಿದ್ದರು. 
ಕನ್ನಡ ಚಿತ್ರರಂಗ ಇದಿಷ್ಟಕ್ಕೇ ಪರಾವಲಂಬಿಯಾಗಿದ್ದರೆ ಸಾಕಿತ್ತೇನೊ.. ಆದರೆ ವಿಪರ್ಯಾಸವೆಂದರೆ ಸಿನಿಮಾ ಕಥೆಗಳ ಆಯ್ಕೆಯಲ್ಲು ಇಂದಿಗೂ ಕನ್ನಡ ಚಿತ್ರರಂಗ ಅವಲಂಭಿತವಾಗಿರುವುದು ಬೇರೆ ಭಾಷೆಗಳ ಮೇಲೆಯೆ. ಇದಕ್ಕೆ ಇವರಿಗಿರುವ ಪ್ರಮುಖ ಆಧಾರ ಸ್ಥಂಬ ಡಬ್ಬಿಂಗ್ ನಿಷೇದ. ದಕ್ಷಿಣದ ಯಾವ ಭಾಷೆಯ ಸಿನಿಮಾಗಳಿಗು ಇಲ್ಲದ ನೀತಿ ಕನ್ನಡ ಚಿತ್ರರಂಗಕ್ಕೆ ಮಾತ್ರ ಇದೆ. ಇಲ್ಲಿಗೆ ಬೇರೆ ಯಾವ ಭಾಷೆಯ ಚಿತ್ರಗಳು ಡಬ್ ಆಗುವಂತಿಲ್ಲ. ಆದರೆ ಇವರ ಚಿತ್ರಗಳು ಭಾರತದ ಯಾವುದೇ ಭಾಷೆಗೆ ಡಬ್ ಆಗಬಹುದು. ಈ ಡಬ್ಬಿಂಗ್ ವಿರೋಧಿ ನೀತಿಗೆ ಇವರ ಬಳಿ ಇರುವ ಸಿದ್ದ ಉತ್ತರ. ಡಬ್ಬಿಂಗ್‌ನಿಂದಾಗಿ ಚಿತ್ರರಂಗದ ಕಾರ್ಮಿಕ ವರ್ಗಕ್ಕೆ ಕೆಲಸವಿಲ್ಲದಂತಾಗುತ್ತದೆ ಎಂದು. ಈ ಉತ್ತರದಲ್ಲೇ ಸಿಗುವ ಸರಳ ಅಂಶ ರೀಮೇಕ್ ಎಂಬ ಪೆಡಂ ಭೂತ. ರೀಮೇಕ್ ಎಂಬ ಭೂತದ ನೆರವಿಂದಾಗಿ ಕನ್ನಡದ ಎಷ್ಟೋ ವಿತರಕರು, ನಿರ್ಮಾಪಕರು, ನಿರ್ದೇಶಕರು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇವರಿಗೆ ನಮ್ಮ ನೆಲದಲ್ಲಿನ ಕಥೆ ಕಥಾನಾಂಶಗಳನ್ನು ದೃಶ್ಯೀಕರಿಸಲು ಪರಭಾಷೆ ಸಿನಿಮಾಗಳೆ ಬೇಕು. ಇವರು ಕನ್ನಡ ಸಿನಿಮಾಗಳ ಬಿಡುಗಡೆ ಯಾವಾಗ ಎಂದು ಕಾಯುವುದಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿ ಯಾವ ಯಾವ ಸಿನಿಮಾ ಬಿಡುಗಡೆ ಆಗುತ್ತೆ, ಅದು ಎಷ್ಟು ಹಿಟ್ ಆಗುತ್ತೆ. ಎಂಬುದನ್ನೇ ಕಾಯುತ್ತಿರುತ್ತಾರೆ. ಅಲ್ಲಿ ಹಿಟ್ಟಾದ ತಕ್ಷಣ ಅವರ ಮುಂದೆ ಮಂಡಿಯೂರಿ ಆ ಸಿನಿಮಾದ ಹಕ್ಕುಗಳನ್ನು ಪಡೆದು ಬಂದು ಇಲ್ಲಿನ ಖ್ಯಾತ ನಟರನ್ನು ಹಿಡಿದು ಮುಹೂರ್ತ ಮಾಡಿ ಪ್ರೆಸ್‌ಮೀಟ್ ಮಾಡಿ ಬಿಡುತ್ತಾರೆ. ಅಲ್ಲಿ ಅವರ ಹೇಳಿಕೆಗಳೆ ಹಾಸ್ಯಾಸ್ಪದ. ಇದು ರೀಮೇಕ್ ಆದರು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕೆಲವೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು. ಬದಲಾವಣೆ ಎಂದರೆ ಏನು ಎಂದು ಸಿನಿಮಾ ನೋಡಲು ಹೋದರೆ ಗೊತ್ತಾಗುತ್ತೆ.. ಮೂಲ ಸಿನಿಮಾದ ಭಾಷೆ, ನಟ, ನಟಿ, ಪೋಷಕ ನಟರು ನಿರ್ಮಾಪಕರು ಹೊರತು ಪಡಿಸಿ ಎಲ್ಲವನ್ನು ಯಾಥಾವತ್ತಾಗಿ ನಕಲು ಮಾಡಿರುವುದು. ಜಪಾನಿನ ಖ್ಯಾತ ನಿರ್ದೇಶಕ ಕುರೋಸವರ ಸಂಜುರೋ ಎಂಬ ಸಿನಿಮಾವನ್ನು ಕನ್ನಡದ ನೆಲೆಗಟ್ಟಿಗೆ ಹೊಂದುವಂತೆ ಭಾವಾನುವಾದಿಸಿ ಚಿತ್ರಕಥೆ ರಚಿಸಿ ನಿರ್ದೇಶಿದ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಎಂಬ ಸಿನಿಮಾಗಿರುವ ಪ್ರೌಡಿಮೆ, ಭಾವಾಭಿವ್ಯಕ್ತಿ, ನಿರೂಪಣೆಯ ಹದದ ಅರಿವು ಖಂಡಿತ ಈಗಿನ ಕನ್ನಡದಲ್ಲಿನ ರೀಮೆಕ್‌ಗಳಿಗಿರುವುದಿಲ್ಲ. ಅದು ಭಾವಾನುವಾದವಾದರೆ, ಇದು ಭಾಷಾಂತರವಷ್ಟೇ.
ಕನ್ನಡ ಚಿತ್ರರಂಗದ ಇಷ್ಟೆಲ್ಲ ಏಳು ಬೀಳುಗಳ ನಡುವೆ ಚಿತ್ರರಂಗದಲ್ಲಿ ಸಾಧಿಸಲು, ಹೊಸ ಪ್ರಯತ್ನಗಳು ಕನಸುಗಳನ್ನು ಹೊತ್ತು ಅನೇಕ ಯುವಕರು ತಮ್ಮ ಮೌನ ಪ್ರಯತ್ನ ಮಾಡುತ್ತಿರುವುದು ಸಂತಸದ ಸಂಗತಿಯಾದರು, ಇಷ್ಟೆಲ್ಲ ಒಳ ರಾಜಕೀಯಗಳ ಮೇಲಾಟದಲ್ಲಿ ಈ ಯುವ ಪೀಳಿಗೆಯ ನಿರ್ದೇಶಕರು ಕಥೆಗಾರರು ಹೇಗೆ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯೊಂದನ್ನು ಸರ್ಕಾರ ಸ್ಥಾಪಿಸಿದೆ. ಆ ಅಕಾಡೆಮಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗುವುದೋ ಅಥವ ಬೇರೆ ಅಕಾಡೆಮಿಗಳಂತೆ ಬರಿ ನಾಮಕಾವಸ್ಥೆಗೆ ಸೀಮಿತ ಗೊಳ್ಳುತ್ತೋ ನೋಡಬೇಕು.// 

-ಮಂಸೋರೆ


Tuesday, May 1, 2012

ಸಿನಿಮಾ ಗ್ರಹಿಕೆಯ ಕುರಿತು:


ಬರವಣಿಗೆ ನಾನು ಇತ್ತೀಚೆಗೆ ಅಂದರೆ ಸುಮಾರು ನಾಲ್ಕು ವರ್ಷದಿಂದ ಕಂಡುಕೊಂಡ ಅಭಿವ್ಯಕ್ತಿ ಮಾರ್ಗ. ಬರವಣಿಗೆಯನ್ನು ಪ್ರಾರಂಭಿಸಿದಾಗ ನನ್ನಲ್ಲಿ ಬದಲಾಗಿದ್ದು ನಾನು ಓದುತ್ತಿದ್ದ ರೀತಿ. ವಿಷಯ, ವಸ್ತು ನಿಷ್ಠತೆ, ಬರಹದಲ್ಲಿ ವ್ಯಕ್ತವಾಗುತ್ತಿರುವ ಭಾವ ಇವೆಲ್ಲದರ ಸೂಕ್ಷ್ಮ ಒಳಹುಗಳು ಅರಿವಿಗೆ ಬರ ತೊಡಗಿದ್ದು ಬರವಣಿಗೆಯಿಂದ ನನಗಾದ ಅತಿ ಹೆಚ್ಚಿನ ಉಪಯೋಗವೆಂದೇ ಹೇಳಬೇಕು. ಬರವಣಿಗೆಗೆ ತೊಡಗಲು ಮುಂಚೆ ಇದ್ದ ಮುಗ್ಧತೆ ಈಗಿಲ್ಲ ಅಥವಾ ಬರವಣಿಗೆಗೆ ತೊಡಗಿದ ಮೇಲೆ ಓದು ಹೆಚ್ಚು ಗಂಭೀರವಾಗಿದೆ ಎನ್ನಬಹುದು. ಬದಲಾದ ನನ್ನ ಓದಿನ ರೀತಿ ನಾನು ಓದುತ್ತಿದ್ದ ವಿಷಯಗಳ ಬದಲಾವಣೆಗೂ ಕಾರಣವಾಗಿದೆ. ಇದನ್ನು ಏಕೆ ಹೇಳುತ್ತಿದ್ದೇನೆಂದರೆ, ಸಿನಿಮಾ ನೋಡುವ ನನ್ನ ಇತ್ತೀಚಿನ ಹವ್ಯಾಸದಲ್ಲೂ ಕೂಡ ನಾನು ಈ ತರಹದ್ದೆ ಅನುಭವವನ್ನು ಪಡೆಯತೊಡಗಿದ್ದೇನೆ. ಸಿನಿಮಾಗಳನ್ನು ವೀಕ್ಷಿಸುವ, ಅದನ್ನು ಆಳವಾಗಿ ಗ್ರಹಿಸುವ, ಕಲಿಕೆಯ ಮಾರ್ಗವನ್ನಾಗಿಸುವ ಬಗ್ಗೆ ಇತ್ತೀಚಿನ ಪರಿಚಯಗಳಿಂದ ಹೆಚ್ಚಿಗೆ ಕೇಳುತ್ತಿರುವೆನಾದ್ದರಿಂದ ಬೇರೆ ಬೇರೆ ಭಾಷೆಯ, ದೇಶದ ಹಲವು ಸಿನಿಮಾಗಳ ನೋಡುವಿಕೆಗೆ ಉತ್ತೇಜಿಸುತ್ತಲಿದೆ. ಬರೆದು ಮುಗಿದ ಮೇಲೆ ಲೇಖಕರನ್ನು ಹೊರಗಿಟ್ಟು ಹೇಗೆ ವಿಶಿಷ್ಟ ಬರಹವೊಂದು ತನ್ನದೇ ಆದ ವಿವಿಧ ಅರ್ಥಗಳನ್ನು ಪಡೆದುಕೊಳ್ಳುತ್ತದೋ, ಸಿನಿಮೀಯ ಪರಿಭಾಷೆಯನ್ನು, ಒಳನೋಟಗಳನ್ನು, ಕಲ್ಪನೆಯನ್ನೂ ಒಳಗೊಂಡ ಸಿನಿಮಾ ಕೂಡ ಅಂತಹದ್ದೇ ಅನುಭವವನ್ನು ಕೊಡತೊಡಗುತ್ತದೆ ಎಂಬ ಮಾತಿನ ಅನುಭವವಾಗುತ್ತಿದೆ.

Speaking of Films ಎಂಬ ಪುಸ್ತಕದಲ್ಲಿ ಸತ್ಯಜಿತ್ ರೇ ಹೇಳಿದ ಒಂದು ಮಾತಿದೆ;

"...it is true that serious, accomplished films -  films which use the language of cinema with insight and imagination - challenge our sensibilities in the same way as the more rarefied forms of music, painting and literature."

ಸಿನಿಮಾ ಒಂದು ಕಲೆಯ ಮಾಧ್ಯಮ.  ಸಂಗೀತ, ಚಿತ್ರಕಲೆ, ಸಾಹಿತ್ಯ ಕಲೆಯ ಮಾಧ್ಯಮಗಳಾದರೆ ಸಿನಿಮಾ ಈ ಮೂರನ್ನು ಹೊಂದಿರುವ ನಮ್ಮ ಸಂವೇದನಶೀಲತೆಯನ್ನು ಪರೀಕ್ಷಿಸುವ ಸಂಕೀರ್ಣ ಕಲೆಯ ಮಾಧ್ಯಮ, ಎಂದು ಮುಂದುವರೆದು ಸತ್ಯಜಿತ್ ರೇ ಬರೆಯುತ್ತಾರೆ.

ಓದು ನನಗೆ ಹವ್ಯಾಸವಾಗುವ ಮುಂಚಿನಿಂದ ನಾನು ಸಿನಿಮಾ ನೋಡುತ್ತಿರುವೆ. ಆದರೆ ಅದನ್ನೊಂದು ಕಲಿಕೆಯ ರೀತಿಯಿಂದ, structured study ಎಂಬಂತೆ ಅಲ್ಲ ಎನ್ನುವುದು ತಿಳಿದದ್ದೇ. ಸಿನಿಮಾ ಗ್ರಹಿಕೆಯು ಓದಿಗಿಂತ complicated ಆದದ್ದು ಎಂದು ನನಗನ್ನಿಸುತ್ತಿದೆ. ಓದು ನಮ್ಮಲ್ಲಿ ಕಲ್ಪನೆಯ ಸ್ವಾತಂತ್ರ್ಯವನ್ನು ಉಳಿಸುತ್ತದೆ. ಆದರೆ ಸಿನಿಮಾದಲ್ಲಿ ನಾವು ಕಲ್ಪಿಸಿಕೊಳ್ಳುವ ಅವಕಾಶವಿರುವುದಿಲ್ಲ. ಸಾಹಿತ್ಯದಂತೆ ಸಿನಿಮಾ ಕೂಡ ಒಂದು ಕಾಲಘಟ್ಟದ ಸಂಸ್ಕೃತಿಯನ್ನು, ಜೀವನ ಶೈಲಿಯನ್ನು ಯಥಾವತ್ತಾಗಿ ಕಟ್ಟಿಕೊಡುವುದಕ್ಕೆ ಸಾಧ್ಯ, ಪ್ರಾಯಶಃ ಹೆಚ್ಚು ಪರಿಣಾಮಕಾರಿಯಾಗಿ ಕಟ್ಟಿಕೊಡಬಲ್ಲದು, ಆದರೆ ಅದನ್ನು ಗುರುತಿಸುವ, ಅರ್ಥಮಾಡಿಕೊಳ್ಳುವ ರೀತಿ ಅಷ್ಟು ಸುಲಭಕ್ಕೆ ಒಲಿಯುವಂತದ್ದಲ್ಲ. ಹಾಗಾಗಿ ಈ ಕುರಿತು ಹೆಚ್ಚಿನದೇನನ್ನು ಬರೆಯುವಷ್ಟು ತಿಳಿದಿಲ್ಲವಾದರೂ, ರಾಶೋಮನ್, ಪಥೇರ್ ಪಾಂಚಾಲಿ, ಒಂದಾನೊಂದು ಕಾಲದಲ್ಲಿ, ದ್ವೀಪ ಇತ್ಯಾದಿ ಸಿನಿಮಾಗಳಿಗೂ, ’ಕಮರ್ಷಿಯಲ್’ ಎಂಬ ಹಣೆಪಟ್ಟಿಯಡಿ ವರ್ಗೀಕರಿಸಲಾದ ಇತರ ಜನಪ್ರಿಯ ಸಿನಿಮಾಗಳಿಗೂ ಇರಬಹುದಾದ ವ್ಯತ್ಯಾಸವನ್ನು ಗ್ರಹಿಸುವಲ್ಲಿ, ಅದರ ಅಗತ್ಯತೆಯೇನು ಎಂದು ತಿಳಿಯುವಲ್ಲಿ ಇತ್ತೀಚೆಗೆ ನಾನು ನೋಡಿದ ಸಿನಿಮಾಗಳು ಸಹಾಯ ಮಾಡುತ್ತಿವೆ.

ಸಿನಿಮಾ ನೋಡುವ ರೀತಿಯನ್ನು ಕುರಿತು ಕಲಿಯುತ್ತಿದ್ದೇನೆ ಎಂದು ಹೇಳಿದೆನಷ್ಟೇ, ಮೊನ್ನೆ ಸಂವಾದ ತಂಡ ಆಯೋಜಿಸಿದ್ದ ಮಜಿದ್ ಮಜಿದಿ ಎಂಬ ಇರಾನಿ ನಿರ್ದೇಶಕನ ’ಬರನ್’ ಸಿನಿಮಾ ವೀಕ್ಷಣೆ ಮತ್ತು ಚರ್ಚೆಯಲ್ಲಿ ಒಂದು ಮಾತು ಬಂದಿತು. ’ಸಿನಿಮಾ ಹೇಗಿದೆ ಎಂದು ಹೇಳಲು, ವ್ಯಕ್ತಿಯೊಬ್ಬನ ಸಾಂಸ್ಕೃತಿಕ ಹಿನ್ನೆಲೆ (cultural background) ಕೂಡ ಮುಖ್ಯವಾಗುತ್ತದೆ’ ಎಂದು. ಸಿನಿಮಾ ಒಂದನ್ನು, ಅದು ತಯಾರಿಸಲ್ಪಟ್ಟ ಕಾಲ, ಅಲ್ಲಿನ ರಾಜಕೀಯ ಹಿನ್ನೆಲೆ, ಸಂಸ್ಕೃತಿಯ ವಿವರಗಳನ್ನೊಳಗೊಂಡು ಅರ್ಥ ಮಾಡಿಕೊಳ್ಳುವುದಕ್ಕೂ, ವೈಯಕ್ತಿಕವಾಗಿ ಅಥವಾ ನಮಗೆ ಲಭ್ಯವಿರುವ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ವಿಪರೀತ ವ್ಯತ್ಯಾಸವಿದೆ ಎಂಬುವಂತದ್ದು. ಇದಕ್ಕೇ ತಳಕು ಹಾಕಿಕೊಂಡಂತೇ ಸಾಹಿತ್ಯದ ಬಗ್ಗೆ ಲಂಕೇಶರ ಟೀಕೆ ಟಿಪ್ಪಣಿಯಲ್ಲಿ ಒಂದು ಮಾತಿದೆ, ಲಂಕೇಶರಿಗೊಮ್ಮೆ ಯಾರೋ ಅಂದರಂತೆ ’ನಿಮ್ಮ ಗದ್ಯ ತುಂಬಾ ಚೆನ್ನಾಗಿದೆ’ ಎಂದು. ಅದಕ್ಕೆ ಲಂಕೇಶರು ಹೇಳುತ್ತಾರೆ ’ಇಲ್ಲ, ಗದ್ಯ ತಾನೇ ತಾನಾಗಿ ಚೆನ್ನಾಗಿರೋಲ್ಲ, ನೀವು, ನಿಮ್ಮ ಅನುಭವ ಚೆನ್ನಾಗಿ ’structured' ಆಗಿದ್ದು, ನಿಮ್ಮ ಪಂಚೇಂದ್ರಿಯಗಳು ಸರಿ ಇದ್ದರೆ ಮಾತ್ರ ಗದ್ಯ ಚೆನ್ನಾಗಿರುತ್ತೆ!’

ಸಿನಿಮಾ ನೋಡುವ ಹೊಸ ದೃಷ್ಟಿಕೋನವನ್ನು ಅಳವಡಿಸಿಕೊಳುತ್ತಾ,  ಸಾಹಿತ್ಯದೊಂದಿಗೆ ಅದನ್ನು ತಳಕು ಹಾಕುತ್ತ, ನಾನು ಇಲ್ಲಿಯವರೆಗೆ ನೋಡಿದ ಸಿನಿಮಾಗಳ ಮೆಲುಕು ಈಗೀಗ ಹೊಮ್ಮಿಸುತ್ತಿರುವ ಬೇರೆಯದೇ ಅರ್ಥಕ್ಕೆ ಬೆರಗಾಗುತ್ತಿದ್ದೇನೆ!!

Thursday, March 29, 2012

ಸಿನೆಮಾ ಎಲ್ಲರಿಗಾಗಿ ಅಲ್ಲ

ಈಚೆಗೆ ಓದುತ್ತಿರುವ ಸಿನೆಮಾ ಕುರಿತು ಸತ್ಯಜಿತ್ ರೇ ಬರೆದಿರುವ ಲೇಖನಗಳ ಸಂಕಲನ, speaking of Films ನ ಒಂದು ಪ್ರಬಂಧ(On Charulatha) ದಲ್ಲಿ ರೇ ಹೀಗೆ ಬರೆಯುತ್ತಾರೆ:‌

Normally only those who appreciate- or try to appreciate- excellence in paintings, books and music would feel the urge to visit the exhibitions of good paintings, read good books or go to reputed live concerts. But in the case of cinema, I often find that anyone who has seen sangam will also peer in to a screening of La Dolce vita.

There is nothing, of course, that one can do about it. If someone has a rupee and twenty five paisa in his pocket and about three hours to spare, he can see any film he likes and comment on it. I have no problems if his comments are confined to gatherings at the coffee house or local clubs. But if every Tom, Dick and Harry starts to reveal his little and therefore dangerous knowledge in journals and magazines, a question arises quite naturally: will it not create a confusion in the minds of at least a certain number of readers and viewers, especially when film goers in Bengal have only recently started showing an interest in learning about cinema and displaying signs of being able to distinguish between good and bad films?

ಇದು ಸ್ಪಷ್ಟವಾಗಿ ಸಿನೆಮಾವನ್ನು ಕಲಾಪ್ರಕಾರ ಎಂದು ನಂಬಿಕೊಂಡ ನಿರ್ದೇಶಕನೊಬ್ಬನ ಅಭಿಪ್ರಾಯ. ಇದರ ಬಗ್ಗೆ ನಿಮಗೇನನ್ನಿಸುತ್ತದೆ?‌

Monday, September 19, 2011

ಲೈಫು ಇಷ್ಟೇನೆ: ನನ್ನ ರೀಡಿಂಗ್

ಪವನ್ ಕುಮಾರ್ ನಿರ್ದೇಶನದ ಲೈಫು ಇಷ್ಟೇನೇ ಸಿನೆಮ ನನಗೆ ಮೆಚ್ಚುಗೆಯಾಗುವುದಕ್ಕೆ ಅನೇಕ ಕಾರಣಗಳಿವೆ. ಈ ಬರಹವನ್ನು ಸಿನೆಮ ವಿಮರ್ಶೆಯಾಗಿಸದೆ ಸಿನೆಮವನ್ನು ನಾನು ಓದಿಕೊಂಡ (ಹೌದು ಓದಿಕೊಂಡ) ಬಗೆಯನ್ನು ವಿವರಿಸಲು ಬಳಸುವೆ.

೧. ಯೋಗರಾಜ್ ಭಟ್ಟರ ಗರಡಿಯಲ್ಲಿ ಬೆಳೆದು ನಿರ್ದೇಶಕರಾದರೂ ಪವನ್ ಕುಮಾರ್ ಯೋಗರಾಜ್ ಭಟ್ಟರು ಈಗಿನ ಯುವಕರನ್ನು ಗಮನದಲ್ಲಿಟ್ಟುಕೊಂಡು ಸಿನೆಮ ಮಾಡುವ ಹಳೆ ತಲೆಮಾರಿನ ನಿರ್ದೇಶಕರು ಎಂದು ಸಾಬೀತು ಪಡಿಸಿದ್ದಾರೆ. ಚಿತ್ರಕತೆಯಲ್ಲಿ ಅವರು ತೊಡಗಿಸಿರುವ ಶ್ರದ್ಧೆ ಅಪಾರ. ಬುದ್ಧಿವಂತಿಕೆಯ ಮಾತುಗಾರಿಕೆ, ಕಚಗುಳಿಯಿಡುವ ಡೈಲಾಗುಗಳು, ನವಿರೆನಿಸುವ ದೃಶ್ಯ ಸಂಯೋಜನೆಗಳಲ್ಲಿ ಸಿನೆಮ ತೂಗಿಸುವ ಭಟ್ಟರ ಕೆಲವೇ ಕೆಲವು ದೌರ್ಬಲ್ಯಗಳ ನೆರಳೂ ಪವನ್ ಸಿನೆಮಾದ ಮೇಲೆ ಬಿದ್ದಿಲ್ಲ.

ಕೊಚ್ಚೆಗುಂಡಿಯಲ್ಲಿ ಪ್ರಾರಂಭವಾದ ಪ್ರೀತಿ ಜೋಗದ ಗುಂಡಿಯಲ್ಲಿ ಮಣ್ಣಾಗುವ ಮುಂಗಾರು ಮಳೆ, ನೀರಿನ ಸೆಳವಿನಲ್ಲಿ ಕೈ ಹಿಡಿದು ಒಂದಾಗುವ, ಗೇಲಿ ಮಾಡಿ ನಗುವ ಬೀದಿಯ ಜನದ ನಡುವೆ ಕೈ ಹಿಡಿದು ನಡೆವ ಗಾಳಿ ಪಟ- ಮನಸಾರೆ, ಪ್ರೀತಿ ಪ್ರೇಮ, ಮದುವೆ ಮಕ್ಕಳು ಸಂಸಾರ, ಅಪ್ಪ ಅಮ್ಮ ಎಲ್ಲವೂ ಏಕತ್ರವಾಗಿ ಕೇವಲ ವಸ್ತು'ಗಳು' ಆಗಿ ಕಾಣುವ ವೇದಾಂತದ ಕಣ್ಣಿರುವ ನಾಯಕ, ನೂರು ಮಂದಿ ಹುಡುಗರ ಪ್ರಪೋಸಲ್ ಪಡೆದು ಮತ್ತೊಮ್ಮೆ ಡಿಟೇಲ್ ಆಗಿ ಲವ್ ಮಾಡುವ ವ್ಯವಧಾವಿಲ್ಲದೆ ಮದುವೆಗೆ ಪ್ರಪೋಸ್ ಮಾಡುವ ಹುಡುಗಿಯರ ಪಂಚರಂಗಿ - ಹೀಗೆ ಭಟ್ಟರ ಸಿನೆಮಾಗಳಲ್ಲಿ ಹಾಗೂ ಹೀಗೂ ಹುಡುಗ ಹುಡುಗಿ ಒಂದಾಗಿಯೇ ಆಗುತ್ತಾರೆ. ಸಂತೆಯೆಲ್ಲ ಸುತ್ತಿ ಬಂದು ಕಾಲು ತೊಳೆದು ಮನೆ ಸೇರಿಕೊಂಡಂತೆ. ಆದರೆ ಈ ತಲೆಮಾರಿನ ತಲ್ಲಣಗಳ ಪ್ರತ್ಯಕ್ಷ ಅನುಭವ ಇರಬಹುದಾದ ಪವನ್ ಕುಮಾರ್ ನಾಯಕ ನಾಯಕಿ ಒಂದಾಗುವುದು ಇಲ್ಲವೇ ಬೇರೆಯಾಗುವುದು ಮುಖ್ಯವೇ ಅಲ್ಲ ಎನ್ನುವಂತೆ ಸಿನೆಮ ಕಟ್ಟಿಕೊಡುತ್ತಾರೆ.

೨. ಸಿನೆಮದ ಧ್ವನಿ ಶಕ್ತಿ. ಸಂಭಾಷಣೆಯ ಆತ್ಮವಿಶ್ವಾಸದಲ್ಲಿ ಸಿನೆಮ ಸೋರಗದಂತೆ ನೋಡಿಕೊಂಡಿರುವುದು ಪವನ್ ಬಳಸಿರುವ ಹತ್ತಾರು ಸಜೇಶನ್ ಗಳ ಮೂಲಕ.ಇವುಗಳಲ್ಲಿ ಕೆಲವು ನಾನು ಗುರುತಿಸಿದಂತವು: ನಾಯಕನ ಏಕಾಂತದ ಖಾಸಗಿ ಕ್ಷಣಗಳಲ್ಲಿ ಕಾಣಿಸಿಕೊಳ್ಳುವ ನಾಲ್ಕು ಮಂದಿ. ನಾಯಕ ದುಃಖದಲ್ಲಿರುವಾಗ ಬೇಸರವಾಗುವ, ಗೊಂದಲದಲ್ಲಿದ್ದಾಗ ಸಂತೈಸುವ, ಕೆಲವೊಮ್ಮೆ  ಅವನ ಹುಡುಗಿಗೆ ದಾರಿ ತೋರಿಸುವ, ಇವನು ಖುಶಿಯಲ್ಲಿದ್ದಾಗ ವಯೋಲಿನ್ ನುಡಿಸುವ, ಪ್ಯಾಥೋ ಹಾಡುವಾಗ ತಲೆ ಒರಗಲು ಭುಜ ನೀಡುವ, ಜೂನಿಯರ್ ದೇವ್ ದಾಸನ ಹುಡುಗಿಯಾಗಿ ಬರುವ ಹೊಸ ಪ್ರೇಯಸಿಯ ಆಗಮನವನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಆದರೆ ಇಡೀ ಸಿನೆಮದಲ್ಲಿ ಎಲ್ಲೂ ಒಂದೂ ಮಾತಾಡದ ಆ ನಾಲ್ಕು ಮಂದಿ. ಮುಂದೆ ನಾನು ಹೇಳಲಿರುವ ಎರಡನೆಯ ಸಜೆಶನ್ ಆಧಾರದಲ್ಲಿ ಹೇಳುವುದಾದರೆ ಈ ನಾಲ್ಕು ಮಂದಿ ವಯೋಲಿನ್ ನುಡಿಸುವ, ನೃತ್ಯ ಮಾಡುವ ಕಲಾವಿದರು. ಸಂಗೀತ, ನೃತ್ಯ ಎನ್ನುವ ಎಲಿಮೆಂಟುಗಳು ನಾಯಕನ ಖಾಸಗಿ ಕ್ಷಣಗಳನ್ನು ಆವರಿಸಿ ಸಂತೈಸುವ, ಸಂಭ್ರಮಿಸುವ ಪಾತ್ರಗಳಾಗುವವು.

ಎರಡನೆಯದು, ಸಿನೆಮಾದಲ್ಲಿ ಸಿನೆಮಗಳನ್ನು ಸಜೆಶನ್ ಗಳಾಗಿ ಬಳಸಿರುವುದು. ಇದು ಹೊಸ ತಂತ್ರವೇನಲ್ಲ. ಗಿರೀಶ್ ಕಾಸರವಳ್ಳಿ ತಮ್ಮ `ಮನೆ' ಚಿತ್ರದಲ್ಲಿ ಫ್ರೆಡ್ರಿಕೊ ಫೆಲಿನಿಯ "Eight and Half" ಚಿತ್ರದ ಮ್ಯೂಸಿಕ್ ಬಿಟ್ ಒಂದನ್ನು ಬಳಸುತ್ತಾರೆ. ಇಂತಹ ಪ್ರಯತ್ನ ಕೆಲವೊಮ್ಮೆ ಕೇವಲ ಪ್ರಭಾವವನ್ನು ನೆನೆಯುವಲ್ಲಿ, ಅರ್ಪಣೆಯಾಗಿಸುವಲ್ಲಿ ಬಳಕೆಯಾಗುತ್ತದೆ. ಆದರೆ ಚಿತ್ರಕತೆಯಲ್ಲಿ ಇವುಗಳು ಸಂವಾದ ನಡೆಸುವ ಅಂಶಗಳಾಗುವುದು ಲೈಫು ಇಷ್ಟೇನೆ ಚಿತ್ರಕಥೆಯ ಹೆಚ್ಚುಗಾರಿಕೆ. ಮೊದಲ ನಾಯಕಿ ಕೈ ಕೊಟ್ಟ ದುಃಖದಲ್ಲಿ ಆಕೆಯ ಫೊಟೊಗಳಿಗೆ ಅಪ್ಪ ಕೊಟ್ಟ ಲೈಟರಿನಲ್ಲಿ ಬೆಂಕಿ ಹೊತ್ತಿಸುವಾಗ ಹಿನ್ನೆಲೆಯ ಟಿವಿಯಲ್ಲಿ ಮುಂಗಾರು ಮಳೆಯ "ಇವನು ಗೆಳೆಯನಲ್ಲ" ದೃಶ್ಯ ಕಾಣಿಸುವುದು, ಗಣೇಶ್ ಪ್ರೀತಿಯನ್ನು ಮಣ್ಣು ಮಾಡಿ ತ್ಯಾಗ ಮಾಡಿದ ಉದಾತ್ತ ಭಾವದಲ್ಲಿ ಜೋಗದ ತುದಿಯಲ್ಲಿ ನಿಲ್ಲುವುದನ್ನು ಗೇಲಿ ಮಾಡುವಂತೆ ಈತ ನೆನಪುಗಳನ್ನು ಸುಡುವುದು, ಇವನನ್ನು ಬಿಟ್ಟು ಇನ್ನೊಬ್ಬನನ್ನು ಮದುವೆಯಾಗುವ ಹುಡುಗಿಯ ಹೆಸರು "ನಂದಿನಿ" ಯೇ (ಮುಂಗಾರು ಮಳೆ ನೆನಪಿಸಿಕೊಳ್ಳಿ) ಆಗಿರುವುದು ಆಕಸ್ಮಿಕವಲ್ಲ.

ಹುಡುಗಿ ಕೈಕೊಟ್ಟ ದುಃಖದಲ್ಲಿ ತಲೆ ಕೆಡಿಸಿಕೊಂಡವನನ್ನು ಗುಜರಿ ಅಂಗಡಿಯ 'ಅಜ್ಜ'ನ ಬಳಿಗೆ ಸೆಲೂನ್ ಅಂಗಡಿಯವನು ಕೊಂಡೊಯ್ಯುವುದು, ಅಜ್ಜ ನೆನಪು ಅಳಿಸುತ್ತೇನೆಂದು ಎಣ್ಣೆ ಮಾಲಿಶ್ ಮಾಡುವುದು ಒಂದು ಶಕ್ತಿಶಾಲಿ ಸಜೆಶನ್. ಇದರ ಅರ್ಥ ಗ್ರಹಿಸುವುದಕ್ಕೆ ನನಗೆ ಒಂದು ವೀಕ್ಷಣೆಯಲ್ಲಿ ಸಾಧ್ಯವಾಗಿಲ್ಲ.

೩. ಸಿನೆಮದ ಚಿತ್ರಕಥೆಯನ್ನು ಕಟ್ಟಿರುವ ಬಿಗಿ ಹಾಗೂ ಸಂಯಮ. ಸಿನೆಮವನ್ನು ವಿವರಿಸಿಬಿಡಬೇಕೆಂಬ ಧಾವಂತ ನಿರ್ದೇಶಕರಿಗಿಲ್ಲ. ಇಡೀ ಸಿನೆಮಾ ತುಂಬಾ ವ್ಯಕ್ತಿ, ವಿಚಾರಗಳಿಗೆಲ್ಲ 'ಗಳು' ಸೇರಿಸಿ ಸಂಬೋಧಿಸುವ ಪಂಚರಂಗಿಯ ನಾಯಕ ಸಿನೆಮಾದ ಅಂತ್ಯದಲ್ಲಿ ಇಡೀ ಸಿನೆಮಾದಲ್ಲಿರುವ ಈ ಸಜೆಶನ್ ಜನರಿಗೆಲ್ಲಿ ಅರ್ಥವಾಗದೆ ವ್ಯರ್ಥವಾಗುವುದೋ ಎನ್ನುವಂತೆ ಅದಕ್ಕೆ ಪೇಲವವಾದ ಅರ್ಥವಿವರಣೆಯನ್ನು ನೀಡುತ್ತಾನೆ. ಆದರೆ ಲೈಫು ಇಷ್ಟೇನೆ ನಲ್ಲಿ ಕುಣಿಯುವ, ವಯೋಲಿನ್ ನುಡಿಸುವ ವ್ಯಕ್ತಿಗಳು ಯಾರು, ನಂದಿನಿ ತಂದೆಗೆ ಹೆದರಿದಳಾ ಅಥವಾ ಕೆಲಸ ಸೇರಲು ಬಯಸದ ನಾಯಕನಿಂದ ಬೇಸತ್ತು ದೂರವಾದಳಾ, ಎರಡನೆಯದಾಗಿ ಬರುವ ನಾಯಕಿ ಯಾವ ಕಾರಣಕ್ಕೆ ತಂದೆಯನ್ನು ಬಿಟ್ಟು ಹೋಗಿರುತ್ತಾಳೆ?ಇಬ್ಬರು ಸೇರಿ ಅಪ್ಪನ ಸ್ಕೂಟರನ್ನು ತೊಳೆದಿರಿಸಿದ್ದು ಏಕೆ? ಕಡೆಗೆ ನಾಯಕ ಏನೆಂದು ತೀರ್ಮಾನಿಸುತ್ತಾನೆ ಎನ್ನುವ ಸಂಗತಿಗಳು ವಿವರಣೆಯ ಚಪ್ಪಡಿ ಕಲ್ಲು ಎಳೆಸಿಕೊಳ್ಳದೆ ಹಲವು ಬಗೆಯ ಇಂಟರ್ ಪ್ರಿಟೇಶ ಗಳಿಗೆ ತೆರೆದುಕೊಂಡಂತೆ ಇವೆ.

ಬಾಲ್ಯದಲ್ಲಿ ಆಕರ್ಷಣೆಯಾಗಿ ಮನಸ್ಸಲ್ಲಿ ನಾಟಿದ ಪೆಂಡ್ಯುಲಮ್ ನಂತೆ ಓಲಾಡುವ  ಜುಮುಕಿ, ಮುಂದೆಯೂ ಅವನ ಸ್ಮೃತಿ ಪಟಲದಲ್ಲಿ ಉಳಿಯುವುದು, ಜುಮುಕಿ ಕಾಣುವ ಮೊದಲ ಸೀನ್ ನಲ್ಲಿ ಟೀಚರ್ ಪೆಂಡುಲಮ್ ಬರೆಯುವುದು ಎಷ್ಟು ಅಪ್ರಯತ್ನ ಪೂರ್ವಕವಾಗಿ ಬೆರೆತು ಹೋಗಿವೆ! ಹಾಗೆಯೇ ನಾಯಕನ ಗೆಳೆಯ ನಾಯಕನ ಮನಸ್ಸು ಪಬ್ಲಿಕ್ ಟಾಯ್ಲೆಟ್ ಆಗಿದೆ ಎಂದು ಹೇಳುವ ಸನ್ನಿವೇಶ ಎಷ್ಟು ಸಹಜವಾಗಿ ಅವರಿಬ್ಬರು ಟಾಯ್ಲೆಟಿನಿಂದ ಹೊರ ಬಂದ ಸಂದರ್ಭದಲ್ಲಿ ಜರುಗುತ್ತದೆ! ಮೊದಲ ಹುಡುಗಿಯೊಂದಿಗಿನ ಡ್ಯುಯೆಟ್ ನಲ್ಲಿ ದಿಗಂತ್ ನಾಯಕಿಯ ಕಣ್ಣಿಗೆ ಮುತ್ತಿಟ್ಟರೆ ಎರಡನೆಯ ಹುಡುಗಿಯೊಂದಿಗೆನ ಡ್ಯುಯೆಟ್ ನಲ್ಲಿ ಸರಿಸುಮಾರು ಅದೇ ಕೆಮರಾ ಆಂಗಲ್ ನಲ್ಲಿ ಹುಡುಗಿ ದಿಗಂತ್ ಕೆಣ್ಣಿಗೆ ಮುತ್ತಿಡುತ್ತಾಳೆ  - ಇವೆಲ್ಲ ಸ್ಕ್ರೀನ್ ಪ್ಲೇ ಹಿಂದಿರುವ ಶ್ರದ್ಧೆಯನ್ನು ಬಿಂಬಿಸುತ್ತವೆ.

೪. ಇಡೀ ಸಿನೆಮ ಬೆನ್ನು ಮೂಳೆಯಿಲ್ಲದ, ಫುಟ್ ಬಾಲಿನಂತೆ ಒದೆಸಿಕೊಳ್ಳುತ್ತ ಜೀವನದ ಪಾಠ ಕಲಿಯುತ್ತ ಹೋಗುವ ಯುವಕ ತನ್ನ ಜೀವನವನು ನಿರೂಪಿಸುತ್ತಾ ಹೋಗುವ ಶೈಲಿಯಲ್ಲಿದೆ. ಹೀಗೆ ಆತನದೇ ನಿರೂಪಣೆಯಲ್ಲಿ ಚಿತ್ರ ಸಾಗುವುದು ದೊಡ್ಡ ಹೈಲೈಟ್. ಏಕೆಂದರೆ ಚಿತ್ರದ ನಿರೂಪಣೆಯಲ್ಲಿ  ನಾವು ಕಾಣುವ ಉಡಾಫೆ, ಬೇಜವಾಬ್ದಾರಿತನ, ಜಗತ್ತನ್ನು, ವ್ಯಕ್ತಿಗಳನ್ನು ನೋಡುವ ಕ್ರಮ ಎಲ್ಲ ನಾಯಕನ ದೃಷ್ಟಿಕೋನವಾಗಿ ಸಿನೆಮ ಅರ್ಥೈಸಿಕೊಳ್ಳುವುದಕ್ಕೆ ಹೊಸತೊಂದು ಆಯಾಮ ದೊರಕಿಸಿಕೊಡುತ್ತದೆ. ಇಲ್ಲವಾದರೆ ಉಡಾಫೆ, ಬೇಜವಾಬ್ದಾರಿತನ ನಿರ್ದೇಶಕ ಸಿನೆಮದ ಮೇಲೆ ಹೇರಿದ ವೈಯಕ್ತಿಕ `ಸ್ಟೈಲ್' ಆಗುತ್ತದೆ.

ಸಿನೆಮ ಹುಡುಗರ ವೀವ್ ಪಾಯಿಂಟ್ ನಲ್ಲಿದೆ ಅದಕ್ಕೆ ಹುಡುಗರಿಗೆಲ್ಲ ಇಷ್ಟವಾಗುತ್ತದೆ. ಹುಡುಗೀರ ವೀವ್ ಪಾಯಿಂಟ್ ನಿಂದ ಏನನ್ನು ತೋರಿಸಿಲ್ಲ ಎನ್ನುವ ಕೆಲವು ಅಭಿಪ್ರಾಯಗಳಿಗೆ ನಾಯಕನೇ ನಿರೂಪಕನಾಗಿರುವ ಅಂಶ ಉತ್ತರವಾಗಬಲ್ಲದು.

೫. ಪ್ರೀತಿ ಪ್ರೇಮದಲ್ಲಿ ಭಾವನೆಗಳ ಪಾತಳಿಯಾಗಿ ಬಳಕೆಯಾಗುವುದು ಹುಡುಗಿಯ ಮನಸ್ಸು. ಹುಡುಗ, ಗಂಡು ಹೊಡೆದಾಡಿ ರಕ್ಷಿಸುವ, ಇಲ್ಲ ಹೊಡೆದಾಡಿ ಪ್ರಾಣ ಕೊಡುವ, ಡಮ್ಮಿ ಪಾತ್ರವಷ್ಟೇ ಆಗಿರುತ್ತಾನೆ. ಅನೇಕ ವೇಳೆ ಗಂಡಸರು ಟಿಕೆಟ್, ಪಾಪ್ ಕಾರ್ನ್ ಕೊಂಡು ಪ್ರೇಯಸಿ/ಹೆಂಡತಿಯರನ್ನು  ಬೈಕಿನಲ್ಲಿ ಥಿಯೇಟರಿಗೆ ಕರೆದುಕೊಂಡು ಬರುವ ಡಮ್ಮಿ ಯಷ್ಟೇ ಆಗಿರುವುದರಿಂದ ಸಿನೆಮಾ ಪ್ರೀತಿಯನ್ನು ಹೆಣ್ಣಿನ ಅಂತರಂಗದ ಸಾಕ್ಷಿಯಲ್ಲಿ ವ್ಯಾಖ್ಯಾನಿಸುತ್ತದೆ. ಈ ಸಿನೆಮಾದಲ್ಲಿ ಪ್ರೀತಿ ಎನ್ನುವುದನ್ನು ಹುಡಗರು ಗ್ರಹಿಸುವ, ವ್ಯಾಖ್ಯಾನಿಸಿಕೊಳ್ಳುವ, 'ಫೀಲ್ ಮಾಡುವ' ಬಗೆಯನ್ನು ಅನ್ವೇಷಿಸುತ್ತದೆ.

೬. ಸಿನೆಮ ನಾಯಕನ ಪ್ರೀತಿ, ವೈಫಲ್ಯಗಳನ್ನೇ ಕಥೆಯಾಗಿಸಿಕೊಂಡರೂ ಅದು ಮೂಲ ಕಥೆ ಎನ್ನಿಸುವುದೇ ಇಲ್ಲ. ಮೂಲ ಕಥೆಯಾಗಬಹುದಾದ ಗುಣ ಹೊಂದಿರುವುದು - ಗೆಳೆಯರ ಖರ್ಚನ್ನೆಲ್ಲ ಭರಿಸುವ ಎಂ ಎಲ್ ಎ ಮಗ,  ಹಳ್ಳಿಯ ಹಿನ್ನೆಲೆಯ, ಬಡತನದಲ್ಲಿಂದ ಬಂದ, ಎಂ ಎಲ್ ಎ ಮಗನನ್ನು ಲಜ್ಜೆಯಿಲ್ಲದೆ ಹೊಗಳುವ ಸತೀಶ್ ಪಾತ್ರ, ಮಧ್ಯಮ ವರ್ಗದ ನಾಯಕ - ಇವರ ಗೆಳೆತನ. ಬಿಲ್ಲು ಭರಿಸುತ್ತ, ಗೆಳೆಯರಿಗೆ ಸಹಾಯ ಮಾಡುತ್ತ ಇರುವ ಎಂ ಎಲ್ ಎ ಮಗ ಮುನ್ನೆಲೆಗೆ ಬರುವುದೇ ಇಲ್ಲ. ಆದರೆ ಸತೀಶ್ ಪಾತ್ರ ಹಾಗೂ ನಾಯಕ ಒಬ್ಬರ ಬದುಕನ್ನು ಮತ್ತೊಬ್ಬರು ವ್ಯಾಖ್ಯಾನಿಸುತ್ತ, ವಿಮರ್ಶಿಸುತ್ತ, ಮೌಲ್ಯ ಮಾಪನ ಮಾಡುತ್ತ, ನಿರ್ದೇಶಿಸುತ್ತ ಇರುತ್ತವೆ. ತೀರಾ ವರ್ಗ ಸಂಘರ್ಷದ ಥಿಯರಿ ಎಳೆದು ತರುವ ಅವಶ್ಯಕತೆ ಇಲ್ಲದಿದ್ದರೂ ಈ ರೀತಿ ಒಂದು ವರ್ಗ ಇನ್ನೊಂದು ವರ್ಗದೊಂದಿಗೆ ಸಂವಾದಿಯಾಗಲಿಕ್ಕೆ , ಒಬ್ಬನನ್ನು ಇನ್ನೊಬ್ಬನು ಪ್ರಾಣಕ್ಕಿಂತ ಹೆಚ್ಚು ಮೆಚ್ಚುವುದಕ್ಕೆ ನಗರ ಕೇಂದ್ರಿತ ಉನ್ನತ ಶಿಕ್ಷಣ, ಅದು ದೊರಕಿಸಿಕೊಟ್ಟ  ಉದ್ಯೋಗಗಳು ಕಾರಣವಾಗುವವೇ ಎನ್ನುವ ಕುತೂಹಲಕರ ಆಯಾಮ ಸಿನೆಮಾಗೆ ಒದಗಿ ಬರುತ್ತದೆ.

೭. ಇನ್ನು ಸಿನೆಮ ಹೇಳುವುದು ಏನನ್ನು? ಹೇಳಬೇಕಿರುವುದನ್ನು ಉಪಸಂಹಾರದ ಹಾಗೆ ಕಡೆಯಲ್ಲೇ ಹೇಳಬೇಕೆಂದಿಲ್ಲ. ಚಿತ್ರ ಕಡೆಯಲ್ಲಿ ಬದುಕನ್ನು ಪೂರ್ತಿಯಾಗಿ ಅನುಭವಿಸು ಎನ್ನುವ abstract ಸಂದೇಶ ನೀಡಿದಂತೆ ಕಾಣುತ್ತದೆ. ಆದರೆ ನೆನಪಿಡಿ ಇದು ಸಿನೆಮಾ ನಿರೂಪಿಸುತ್ತಿರುವ ನಾಯಕ ಇಡೀ ಕಥನಕ್ಕೆ ನೀಡುವ ಉಪಸಂಹಾರವಷ್ಟೇ ಆಗುವ ಸಾಧ್ಯತೆಯಿದೆ.

ನನಗೆ ಕಂಡಂತೆ ಸಿನೆಮ ಹೇಳುವುದು: ಆಧುನಿಕ ಸಮಾಜ ನಾಗರೀಕವಾಗುತ್ತ, ನಾಗರೀಕವಾಗುವ ಪ್ರಕ್ರಿಯೆಯನ್ನು ಸೂಕ್ಷ್ಮ, ಅತಿ ಸೂಕ್ಷ್ಮವಾಗಿಸುತ್ತಿದೆ. ಈ ನಾಗರೀಕತೆ ನಿರ್ಮಿಸುತ್ತಿರುವ ಯುವಕರು ಎಷ್ಟು ನಾಜೂಕೆಂದರೆ  ರಸ್ತೆ ಮಧ್ಯೆ ನಿಂತು ಎತ್ತರಿಸಿದ ದನಿಯಲ್ಲಿ ಜಗಳ ಆಡಲಾರರು, ಅವಾಚ್ಯ ಶಬ್ಧವನ್ನು ಬಳಸಲಿಕ್ಕೇ ಆಗದವರು, ಕೈ ಎತ್ತಿ ಯಾರನ್ನಾದರೂ ಹೊಡೆಯುವುದು ಎಂತಹ ಕೋಪದಲ್ಲೂ ಸಾಧ್ಯವಿಲ್ಲ.  ನಮ್ಮ ಪರಿಸರದಲ್ಲಿನ ಆಧುನಿಕ, ನಾಗರೀಕ ಎನ್ನಿಸುವ ವರ್ಗಕ್ಕೆ ಸೇರಿದ ಈ ನಾಯಕ (ಹಾಗೆ ನೋಡಿದರೆ ಪಂಚರಂಗಿಯ ಸಹೋದರರೂ) ವಿಪರೀತವಾಗಿ ನಾಗರೀಕರಾಗುತ್ತ ತಮ್ಮ ವ್ಯಕ್ತಿತ್ವದ ಮೂಲಭೂತವಾದ ಜೈವಿಕ (Biological) ಆಯಾಮವನ್ನೇ ಮರೆಯುತ್ತಿದ್ದಾರಾ?

ಈ ಒಳನೋಟವನ್ನು ದೊರಕಿಸಿಕೊಟ್ಟ ಪ್ರಸಂಗ ನಡೆದದ್ದು ಥಿಯೇಟರಿನಲ್ಲೇ. ಮೊದಲ ಹುಡುಗಿ ತಣ್ಣಗೆ ತನಗೆ ಇನ್ನೊಬ್ಬನೊಂದಿಗೆ ನಿಶ್ಚಿತಾರ್ಥವಾಗಿದೆ ಎಂದಾಗ ನಾಯಕ ತನಗುಂಟಾಗುವ ಭಾವ ತಲ್ಲಣವನ್ನು ಸಿನೆಮಾಗಳಲ್ಲಿ ಕ್ಲೀಶೆಯಾಗುವಷ್ಟು  ಬಳಸಿರುವ ಜ್ವಾಲಾಮುಖಿ ಸ್ಪೋಟ, ಗುಡುಗು, ಸಮುದ್ರದ ಅಲೆಗಳನ್ನು ನೆನಪಿಸಿಕೊಳ್ಳುವುದರ ಮೂಲಕ ವ್ಯಾಖ್ಯಾನಿಸುತ್ತಾನೆ! (ಮುಂದೆ ತನಗೆ ಯಾವುದೂ ಫ್ರೆಶ್ ಅನ್ನಿಸುತ್ತಿಲ್ಲ ಎಲ್ಲವೂ ಸೆಕೆಂಡ್ ಹ್ಯಾಂಡ್ ಅನ್ನಿಸುತ್ತಿದೆ ಎನ್ನುವ ನಾಯಕನದು ಮುಗ್ಧತೆ ಬಹು ಬೇಗ ಬಿಟ್ಟುಕೊಟ್ಟ ಈ ತಲೆಮಾರಿನ ಹುಡುಗ ಹುಡುಗಿಯರ ತಲ್ಲಣವೇ ಆಗಿದೆಯೇ?) ಹಾಗೆ ಹೇಳುತ್ತ ಆಕೆ ಅದನ್ನು ಹೇಳಿದಾಗ ತನಗೆ ಕೋಪ ಬಂದರೂ ಅವಳನ್ನು ಬೈಯಬೇಕು ಅನ್ನಿಸಲಿಲ್ಲ ಎನ್ನುತ್ತಾನೆ. ಈ ಸಮಯಕ್ಕೆ ಸರಿಯಾಗಿ ಥಿಯೇಟರಿನಲ್ಲಿದ್ದ ಹುಡುಗನೊಬ್ಬ "ಯಾಕಂದ್ರೆ ನೀನು ಗಂಡಸಲ್ಲ ಕಣೋ!" ಎಂದು ಕೂಗಿದ. ನಾಯಕನ ನಿರೂಪಣೆಯಲ್ಲಿರುವ ಇಡೀ ಸಿನೆಮಾಗೆ ಈ ಒಂದು ಪ್ರತಿಕ್ರಿಯೆಯೇ ಶಕ್ತಿಶಾಲಿ ರೀಡಿಂಗ್ ಒದಗಿಸಬಲ್ಲದು.

ಪಂಚರಂಗಿಯಲ್ಲಿ ಮದುವೆಯ ಬ್ರೋಕರ್ ಆದ ರಾಜು ತಾಳಿಕೋಟೆ "ಗಂಡು ಹೆಣ್ಣು, ಪಸೀನ ಪಸೀನ ಆಗಬೇಕು, ಮಕ್ಕಳು ಹುಟ್ಟಬೇಕು" ಎನ್ನುವುದು, ಲೈಫು ಇಷ್ಟೇನೆ ಸಿನೆಮಾದಲ್ಲಿ ಅದೇ ರಾಜು ತಾಳಿಕೋಟೆ ಪ್ರಾಯದ ಹುಡುಗೀರ ಹಾಸ್ಟೆಲಿನ ವಾಚ್ ಮನ್ ಆಗಿದ್ದು "ನಾವು ಹುಟ್ಟಿರೋದೆ ಇನ್ನೊಬ್ಬರನ್ನು ಹುಟ್ಟಿಸುವುದಕ್ಕೆ" ಎನ್ನುವುದು ಎಲ್ಲ ಕಾಕತಾಳೀಯವೇನೆಲ್ಲ. ತೀವ್ರವಾದ ಎಚ್ಚರದಿಂದ ಅಳವಡಿಸಿರುವ ಥೀಮ್ ಗಳು.

೮. ಕಡೆಯದಾಗಿ ಈ ಸಿನೆಮ ಪಂಚರಂಗಿಯ ವಿಸ್ತರಣೆಯಾಗಿ, ಅದಕ್ಕಿಂತಲೂ ಸ್ಪಷ್ಟವಾಗಿ ಇರುವುದಕ್ಕೆ ಕಾರಣದ ಅಂಶವೊಂದಿದೆ. ಈ ಸಿನೆಮಾ ಆಧುನಿಕ ಗಂಡಿನ virginity consciousness (ಕನ್ಯತ್ವ ಪ್ರಜ್ಞೆ ಎನ್ನಲಿಕ್ಕೆ ಸಾಧ್ಯವೇ?) ಗುರುತಿಸಿದ ಹಾಗೂ ಅದನ್ನು ಕುರಿತು ಮಾತಾಡಿದ ಮೊಟ್ಟ ಮೊದಲ ಕನ್ನಡ ಸಿನೆಮ ಆಗಿದೆ. ಸಿನೆಮಗಳಲ್ಲಿನ ಪ್ರೇಮ ಕಥಾನಕದ ದಿಕ್ಕನ್ನು ಬದಲಿಸುವಷ್ಟು ಸಮರ್ಥವಾದುದಾಗಿದೆ. ಆರು ಪ್ರೇಮ ಪ್ರಕರಣಗಳನ್ನು ಅನುಭವಿಸಿದ ನಾಯಕ ಏಳನೆಯ ಹುಡುಗಿಯ ಸಮ್ಮುಖದಲ್ಲಿ ತನಗೆ ಎಲ್ಲವೂ ಸೆಕೆಂಡ್ ಹ್ಯಾಂಡ್ ಆಗಿ ಕಾಣುತ್ತಿರುವುದು, ಪ್ರೀತಿ ಫ್ರೆಶ್ ಅನ್ನಿಸದೇ ಇರುವುದು, ಹಳೆಯ ನೆನಪುಗಳು ಹೊಸ ಅನುಭವದ ಸಂವೇದನೆಯನ್ನು ಮಂಕಾಗಿಸುವುದನ್ನು ಗ್ರಹಿಸುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ ಪರಿಶುದ್ಧವಾಗಿರಬೇಕೆಂಬ ಅಪೇಕ್ಷೆಯ ಬಂಧವನ್ನು ಹೆಣ್ಣಿನ ಮೇಲಿಂದ ಸಡಿಲ ಗೊಳಿಸುತ್ತ ಆಧುನಿಕ ಗಂಡು ತನ್ನ ಮೇಲೆ ಹೇರಿಕೊಳ್ಳುತ್ತಿದ್ದಾನೆಯೇ? ತಾನೂ ಶುದ್ಧನಾಗಿರಬೇಕೆಂಬ ಪ್ರಜ್ಞೆ ಮೂಡಿದ ಹೊಸ ಗಂಡನ್ನು ವ್ಯಾಖ್ಯಾನಿಸುವ, ಮುಟ್ಟುವ, ಮಾತಾಡಿಸುವ ಕಥಾನಕಗಳು ಹುಟ್ಟಿಕೊಳ್ಳಬೇಕಾದ ಅವಶ್ಯಕತೆ ಇದೆಯೇ?ಲೈಫು ಇಷ್ಟೇನೆ ಸಿನೆಮಾವಂತೂ ಪ್ರಶ್ನೆಗಳನ್ನು ಸ್ಪಷ್ಟವಾಗಿ ಎತ್ತುತ್ತದೆ.

ಅಚ್ಚರಿಯೆಂದರೆ ಪಂಚರಂಗಿ ಹಾಗೂ ಲೈಫು ಇಷ್ಟೇನೆ ಸಿನೆಮಗಳೆರಡರಲ್ಲ್ಲೂ ಗೊಂದಲದಲ್ಲಿ ಬೀಳುವುದು, ಚಂಚಲರಾಗುವುದು, ಅಪ್ರಬುದ್ಧವಾದ ಜೀವನ ದೃಷ್ಟಿಯನ್ನು ಹೊಂದಿರುವುದು ಗಂಡು! ಪ್ರಬುದ್ಧವಾಗಿ ಯೋಚಿಸುವುದು (ನೀನು ಸುಮ್ಮನೆ ಎಲ್ಲವನ್ನು ಅನಲೈಸ್ ಮಾಡಬೇಡ ಎನ್ನುವ ಲೈಫು ಇಷ್ಟೇನೆ ನಾಯಕಿ) , ಮಾರ್ಗದರ್ಶನ ಮಾಡಲು ಮುಂದಾಗುವುದು ( ಬಾ ಬದುಕುವ ದಾರಿ ತೋರಿಸ್ತ್ತೇನೆ ಎನ್ನುವ ಪಂಚರಂಗಿ ನಾಯಕಿ), ಗಟ್ಟಿ ಹೆಗಲು ನೀಡುವುದು ಹೆಣ್ಣು! ಆಧುನಿಕ ದಾಂಪತ್ಯದಲ್ಲಿನ role reversal ಸೂಚನೆಯೇ ಇದು? 

Monday, May 2, 2011

“ಸುಳಿ” ಚಿತ್ರೀಕರಣ ಮುಂದಕ್ಕೆ

ಕಳೆದ ವಾರಾಂತ್ಯದಲ್ಲಿ ಯೋಜಿಸಿದ್ದ “ಸುಳಿ” ಕಿರುಚಿತ್ರದ ಚಿತ್ರೀಕರಣ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದೆ. ಮುಂದಿನ ಶೆಡ್ಯೂಲ್ ಕುರಿತ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಇದುವರೆಗೆ ನೀವು ತೋರಿರುವ ಆಸಕ್ತಿ ಹಾಗೂ ನೀಡಿದ ಬೆಂಬಲ ನಮ್ಮನ್ನು ಹುರಿದುಂಬಿಸುತ್ತಲಿದೆ. ಧನ್ಯವಾದಗಳು.

ಮತ್ತೊಂದು ಕಿರುಚಿತ್ರ!


ಭೂತಗನ್ನಡಿ ತಂಡದಲ್ಲಿ ವಿಪರೀತ ಚಟುವಟಿಕೆಯ ಸಮಯವಿದು. ಹಿಂದಿನ ವಾರವಿಡೀ “ಸುಳಿ” ಕಿರುಚಿತ್ರದ ಚಿತ್ರೀಕರಣದ ವಿವರಗಳನ್ನು ಓದಿದಿರಿ. ಅನಿವಾರ್ಯ ಕಾರಣಗಳಿಂದ ಕಳೆದ ವಾರಾಂತ್ಯದಲ್ಲಿ ಆ ಚಿತ್ರದ ಚಿತ್ರೀಕರಣದ ಎರಡನೆಯ ಭಾಗ ನಡೆಸುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ ಸುಮ್ಮನೆ ಕೂರುವ ಜಾಯಮಾನ ಭೂತಗನ್ನಡಿಯ ಸದಸ್ಯರಿಗೆ ಇಲ್ಲವೇ ಇಲ್ಲ.

ರೂಪಲಕ್ಷ್ಮಿಯವರ ಕತೆ, ಕಿರಣ್ ರ ಚಿತ್ರಕತೆ ಹೊಂದಿರುವ ಇನ್ನೂ ಹೆಸರಿಡದ ಎರಡನೆಯ ಕಿರುಚಿತ್ರದ ಚಿತ್ರೀಕರಣ ಕೈಗೆತ್ತಿಕೊಂಡೆವು. ಭಾರಿ ಮಳೆಯ ನಡುವೆಯೇ ಶನಿವಾರ ರಿಹರ್ಸಲ್ ನಡೆಸಿ ಭಾನುವಾರ ಬೆಳಗಿನಿಂದಲೇ ಒಳಾಂಗಣ ಸನ್ನಿವೇಶಗಳ ಚಿತ್ರೀಕರಣ ನಡೆಸಲಾಯ್ತು.

ಚಿತ್ರದ ಹಾಗೂ ಚಿತ್ರೀಕರಣದ ವಿವರಗಳು ಮುಂದಿನ ದಿನಗಳಲ್ಲಿ ಭೂತಗನ್ನಡಿಯಲ್ಲಿ ಮೂಡಿ ಬರಲಿವೆ.

ಕಳೆದ ವಾರಾಂತ್ಯದ ಚಿತ್ರೀಕರಣದ ಕೆಲವು ಫೋಟೊಗಳು ನಿಮಗಾಗಿ: