Saturday, December 11, 2010

ವಾರಾಂತ್ಯದ ಭೇಟಿ 3

ಹಿಂದಿನ ಭೇಟಿಯ ಸಂದರ್ಭದಲ್ಲಿ ನಾವು ಚರ್ಚಿಸಿ ಒಪ್ಪಿಕೊಂಡಿದ್ದ ಕಥಾ ಹಂದರವನ್ನು ಒಂದು ಸಾಲಿನ ಸ್ಕ್ರಿಪ್ಟ್ ಆಗಿ ಕಟ್ಟಿಕೊಡಲಿಕ್ಕೆ ತುಂಬಾ ಕಷ್ಟ ಎನ್ನುವ ಅರಿವಾಯಿತು. ಎರಡು ಪಾತ್ರಗಳನ್ನು ಇಟ್ಟುಕೊಂಡು ಇಡೀ ಚಿತ್ರಕತೆಯನ್ನು ಹೆಣೆಯುವುದಾಗಿ ನಾವು ಯೋಜಿಸಿಕೊಂಡಿದ್ದೆವು. ಆದರೆ ಎರಡು ಪಾತ್ರಗಳು ಇಡೀ ಕ್ಯಾನ್ವಾಸನ್ನು ಆಕ್ರಮಿಸಿಕೊಳ್ಳುವಾಗ ನಮ್ಮ ಚಿತ್ರಕತೆ ವಿಪರೀತ ನಾಟಕೀಯವಾಗಿರಬೇಕಾದ ಅನಿವಾರ್ಯತೆ ಕಾಡುತ್ತದೆ. ನಾಟಕೀಯತೆ ಅತಿಯಾದಷ್ಟು ಚಿತ್ರಕತೆ ವಾಸ್ತವದಿಂದ ದೂರ ಹೋಗುತ್ತದೆ ಹಾಗೂ ಚಿತ್ರಕತೆ ಪೇಲವವಾಗುತ್ತದೆ ಎನ್ನಿಸಿತು. ಹೀಗಾಗಿ ನಾವು ಎರಡು ಪಾತ್ರಗಳ ಕತಾ ಹಂದರವನ್ನು ಕೈಬಿಟ್ಟು ವಿಸ್ತಾರವಾದ ಕ್ಯಾನ್ವಾಸ್ ಒದಗಿಸುವಂತಹ ಕತಾಹಂದರವನ್ನು ರೂಪಿಸಿಕೊಂಡಿದ್ದೇವೆ. ಹೆಚ್ಚು ಪಾತ್ರಗಳನ್ನು ಕಟ್ಟಿಕೊಂಡಿದ್ದೇವೆ.

ಹಿಂದಿನ ಭೇಟಿಯ ಸಂದರ್ಭದಲ್ಲಿ ನಾವು ಚರ್ಚಿಸಿದ ಹಾಗೂ ಈಗ ಕೈಬಿಟ್ಟ ಕತಾ ಹಂದರವನ್ನು ಭೂತಗನ್ನಡಿಯಲ್ಲಿ ದಾಖಲಿಸುತ್ತಿದ್ದೇವೆ.

ಮಾತೇ ಆಡದ ಪೊಲೀಸ್ ಅಧಿಕಾರಿಯ ಕಿಡ್ನಾಪ್ ಆಗುತ್ತದೆ. ವಿಪರೀತ ವಾಚಾಳಿ, ಸೈದ್ಧಾಂತಿಕವಾಗಿ ವಿಪರೀತ ಪ್ರಭಾವಿತನಾದ ನಕ್ಸಲೈಟ್ ಸುಪರ್ದಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಬಿಡಲಾಗುತ್ತದೆ. ಆತನ ಬಳಿ ಒಂದು ಮೊಬೈಲ್ ಫೋನ್ ಇರುತ್ತದೆ. ಆದರೆ ಅದಕ್ಕೆ ಇನ್ ಕಮಿಂಗ್ ಮಾತ್ರ ಇರುತ್ತದೆ.

ನಕ್ಸಲೈಟ್ ನಾಯಕರು ತಮ್ಮ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಪೊಲೀಸ್ ಅಧಿಕಾರಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಸರಕಾರದ ಜೊತೆಗೆ ಮಾತುಕತೆ ನಡೆಸುತ್ತಿರುತ್ತದೆ. ಫೋನ್ ಮೂಲಕ ಸೂಚನೆಗಳನ್ನು ನೀಡುತ್ತಿರುತ್ತಾರೆ.

ಒಂದು ದಿನ ಚೆನ್ನಾಗಿ ನೋಡಿಕೊಳ್ಳುವ, ಹಿಂಸಿಸಿ ಬಾಯಿ ಬಿಡಿಸುವ, ಆತನ ಯೋಗಕ್ಷೇಮಕ್ಕಾಗಿ ಆಡಿಯೋ ಟೇಪ್, ವಿಡಿಯೋ ಫೂಟೇಜ್ ಕಳಿಸುವ ಸೂಚನೆ ಸಿಕ್ಕುತ್ತದೆ.

ವಾಚಾಳಿಯಾದ ನಕ್ಸಲೈಟ್ ಮಾತಾಡಲು ಯಾರೊಬ್ಬರೂ ಇರದೆ, ಮೊಬೈಲ್ ನಲ್ಲೂ ಮಾತಾಡುವ ಅವಕಾಶವಿಲ್ಲದೆ ಮೌನಿ ಪೊಲೀಸ್ ಅಧಿಕಾರಿಯನ್ನೇ ಮಾತಿಗೆಳೆಯುತ್ತಾನೆ, ಮಾತಾಡುತ್ತ ಮಾತಾಡುತ್ತ ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತೆ.

ಹೀಗಿರುವಾಗ ಆ ಪೊಲೀಸ್ ಅಧಿಕಾರಿಯನ್ನು ಕೊಂದು ಬರುವ ಸೂಚನೆ ಮೊಬೈಲ್ ನಲ್ಲಿ ಇವನಿಗೆ ಸಿಕ್ಕುತ್ತೆ.

ಈ ವಾರದ ಭೇಟಿಯಲ್ಲಿ ನಿಷ್ಕರ್ಷಿಸಿದ ಹೊಸ ಕತಾ ಹಂದರದ ಮೇಲೆ ಕೆಲಸ ನಡೆಯುತ್ತಿದೆ. ಇನ್ನು ಎರಡುವಾರದಲ್ಲಿ ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರು ಮಾಡಬೇಕೆಂದು ಯೋಜನೆ ಹಾಕಿಕೊಳ್ಳಲಾಗಿದೆ.

1 comment:

  1. ಎರಡೇ ಪಾತ್ರಗಳ ಸುತ್ತ ಚಿತ್ರಕತೆಯನ್ನು ಹೆಣೆಯುವಾಗ ನಾಟಕೀಯತೆ ನುಸುಳುವುದು ಅನಿವಾರ್ಯ ಎನ್ನುವುದನ್ನು ನಾನು ಒಪ್ಪುವುದಿಲ್ಲ.

    ಚಿತ್ರಕತೆಗೆ ಆಯ್ದುಕೊಂಡ ಕಥಾವಸ್ತುವಿನ ಘಟನೆಯೇ ಸಾಕಷ್ಟು ನಾಟಕೀಯವಾಗಿ ಇಟ್ಟುಕೊಳ್ಳುವುದಕ್ಕೆ ಅವಕಾಶವಿದೆ. ಉದಾಹರಣೆಗೆ ಜನಸಾಮಾನ್ಯರಿಗೆ ತುಂಬಾ ಪರಿಚಿತವಿರುವ ಪೊಲೀಸ್ ಮುಖವೊಂದರ ಅಪಹರಣವನ್ನು ನಕ್ಸಲರು ಮಾಡುತ್ತಾರೆ. ಅದು ಕಿರಣ್ ಬೇಡಿ ಎಂದಿಟ್ಟುಕೊಳ್ಳಿ, ಆಗ ಇಡೀ ಘಟನೆಯೇ ನಾಟಕೀಯ ಸನ್ನಿವೇಶವನ್ನು ಒದಗಿಸುತ್ತದೆ. ಚಿತ್ರಕತೆಯನ್ನು ವಾಸ್ತವಕ್ಕೆ ಹತ್ತಿರವಿರುವಂತೆಯೇ, ನಾಟಕೀಯತೆ ನುಸುಳದಂತೆ ಕಟ್ಟಿಕೊಡುವುದಕ್ಕೆ ಸಾಧ್ಯವಿದೆ.

    ಆದರೆ ಚಿತ್ರಕತೆಯ ಯಾವುದೇ ಹಂತದಲ್ಲಿ ನಿರೂಪಣೆ ಮೆಲೋಡ್ರಾಮ ಆಗದಂತೆ ಎಚ್ಚರವಹಿಸಬೇಕು.

    ಇದು, ಎರಡೇ ಪಾತ್ರಗಳನ್ನಿಟ್ಟುಕೊಂಡು ಚಿತ್ರಕತೆ ಬರೆಯುವುದಕ್ಕೆ ನಾಟಕೀಯತೆ ಅನಿವಾರ್ಯ ಎನ್ನುವ ನಿಲುವನ್ನು ಕುರಿತ ನನ್ನ ಅನಿಸಿಕೆಯಷ್ಟೇ. ಇದು ನಿಮ್ಮ ನಿರ್ಧಾರ, ಕೆಲಸಗಳಿಗೆ ಅಡ್ಡಿಯಾಗದು ಎಂದು ಭಾವಿಸುವೆ.

    -ಶೇಖರ್ ಪೂರ್ಣ, ಸಂವಾದ.ಕಾಮ್

    ReplyDelete

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ