Wednesday, May 2, 2012

ಅಸ್ತಿತ್ವದ ಹುಡುಕಾಟದಲ್ಲಿ ಕನ್ನಡ ಚಿತ್ರರಂಗಅಸ್ತಿತ್ವದ ಹುಡುಕಾಟದಲ್ಲಿ ಕನ್ನಡ ಚಿತ್ರರಂಗ


೭೭ ವರ್ಷಗಳನ್ನು ಪೂರೈಸಿರುವ ಕನ್ನಡ ಸಿನಿಮಾಗೆ ತಾನು ನಡೆದ ಬಂದ ಹಾದಿಯನ್ನೊಮ್ಮೆ ಮೆಲುಕು ಹಾಕಬೇಕಾದ ಕಾಲಘಟ್ಟದಲ್ಲಿ ನಿಂತಿದೆ ಎಂದು ಹೇಳಬೇಕಾಗಿರುವ ಅನಿವಾರ್ಯತೆ ಬಂದಿರುವುದು ಸಂತೊಷದ ಸಂಗತಿಯಲ್ಲ. ಕಾರಣ  ಕನ್ನಡದ ಮೊದಲ ವಾಕ್ಚಿತ್ರವಾಗಿ ೧೯೩೪ರಲ್ಲಿ ಸಿನಿಮಾ ಮಾಧ್ಯಮದಲ್ಲಿ ತನ್ನ ಅಸ್ಥಿತ್ವವನ್ನು ಹುಡುಕಲು ಪ್ರಾರಂಭಿಸಿದ ಕನ್ನಡ ಚಿತ್ರರಂಗ ೭೦-೮೦ ರ ದಶಕದಲ್ಲಿ ಉಚ್ಛಾಯ ಸ್ಥಿತಿಯನ್ನು ತಲುಪಿದರೂ.. ಆ ನಂತರದ ಎರಡು ದಶಕಗಳಲ್ಲಿ ಮತ್ತೆ ಮತ್ತೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯೋಗಗಳ ಜೊತೆಗೆ ರಿಮೇಕ್‌ನ ಮೊರೆ ಹೋಗಲೇಬೇಕಾದ ಅನಿವಾರ್ಯತೆಯನ್ನು ಸದಾ ಎದುರಿಸುತ್ತಲೇ ಬರುತ್ತಿದೆ. ಅಂತಹ ರೀಮೇಕ್‌ಗಳಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿರುವುದು ಹೌದಾದರು ರಿಮೇಕ್ ಸಿನಿಮಾಗಳಿಂದಾಗಿಯೇ ಕನ್ನಡ ಚಿತ್ರರಂಗ ಉಳಿದುಕೊಂಡಿದೆ ಎಂದು ಹೇಳಲು ಬರುವುದಿಲ್ಲ. 
ಭಾರತೀಯ ನೆಲೆಯಲ್ಲಿ ಸಾಹಿತ್ಯದ ಪಸಲು ಜಾಗತಿಕ ಸಿನಿಮಾಗಳಿರುವಂತೆ ಬಹುತೇಕ ಅವಕಾಶಗಳು ಇವೆ. ಅದನ್ನು ಸಮರ್ಥವಾಗಿ ಬಳಸಿಕೊಂಡೇ ಸಿನಿಮಾರಂಗವು ಬೆಳೆದಿದೆ. ಅದರಲ್ಲು ದಕ್ಷಿಣ ಭಾರತದ ರಾಜ್ಯಗಳಲ್ಲಿ ಪ್ರತಿ ರಾಜ್ಯಕ್ಕು ತನ್ನದೇ ಆದ ಐತಿಹಾಸಿಕ ನೆಲೆಗಟ್ಟಿದೆ. ಆ ನೆಲೆಗಟ್ಟಿನಲ್ಲಿ ಸಾಹಿತ್ಯವು ವಿಫುಲವಾಗಿ ಬೆಳೆದಿವೆ. ಆ ಸಾಹಿತ್ಯಕ್ಕೆ ಮೂಲಧಾರ ಆಯಾ ರಾಜ್ಯಗಳ ಸಾಂಸ್ಕೃತಿಕ, ಜಾನಪದ. ಅದರ ಮೂಲದಿಂದಲೇ ಸಾಹಿತ್ಯವು ಸ್ಥಳೀಯತೆಯ ಕುರಿತಂತೆ ಸ್ಥಳೀಯ, ರಾಷ್ಟ್ರೀಯ, ಜಾಗತಿಕ ಚೌಕಟ್ಟಿನಲ್ಲಿ ಚರ್ಚಿಸಿ ಬೆಳೆಯುತ್ತ ಹೋಗುತ್ತಿದೆ. ಸ್ವಾತಂತ್ರ್ಯಾನಂತರವಂತು ಸಾಹಿತ್ಯದ ಪರಿಧಿಯ ವಿಸ್ತರಣೆಯು ಹರಡಿದೆ. ಇದೇ ಅಂಶವು ಪೌರಾಣಿಕ ಹಿನ್ನಲೆಯಿಂದ ಪ್ರಾರಂಭವಾದ ಸಿನಿಮಾ ನಿರ್ಮಾಣಕ್ಕೆ ಸಾಮಾಜಿಕ ಚಿತ್ರಗಳನ್ನು ನಿರ್ಮಿಸಲು ಪ್ರೇರಣೆ ನೀಡಿತು. 
"ನಾಂದಿ" ಸಿನಿಮಾ ಬರುವವರೆಗೆ ಸಿನಿಮಾ ಎಂದರೆ ಸಿನಿಮಾ ಅಷ್ಟೆ ಅಲ್ಲಿ ಜನಪ್ರಿಯ, ಕಲಾತ್ಮಕ ಅಥವ ಹೊಸ ಅಲೆಯ ಚಿತ್ರಗಳು ಎಂಬ ವಿಭಜನೆ ಎಂಬುದಿರಲಿಲ್ಲ. ಹೊಸ ಅಲೆಯ ಚಿತ್ರ ಎಂಬ ಹಣೆಪಟ್ಟಿಯೊಂದಿಗೆ ತೆರೆಕಂಡ ಎನ್.ಲಕ್ಷ್ಮಿನಾರಾಯಣ ನಿರ್ದೆಶನದ ನಾಂದಿ ಚಿತ್ರ ಮುಂದೆ ಇಂತಹುದೇ ಒಂದಷ್ಟು ಸಿನಿಮಾಗಳ ನಿರ್ಮಾಣದೊಂದಿಗೆ ಕನ್ನಡ ಸಿನಿಮಾರಂಗವನ್ನು ಜನಪ್ರಿಯ-ಕಲಾತ್ಮಕ ಸಿನಿಮಾ ಎಂದು ವಿಭಜಿಸುವಂತೆ ಮಾಡಿತು. ಇದರ ಪರಾಕಾಷ್ಠೆಯೆಂದರೆ ಈಗಿನ ಕಲಾತ್ಮಕ ಹಣೆಪಟ್ಟಿ ಹೊತ್ತು ಬರುವ ಸಿನಿಮಾಗಳು ಪ್ರಶಸ್ತಿಗಾಗಿಯೇ ನಿರ್ಮಾಣಗೊಂಡಿರುವವು ಎಂಬ ಅಪವಾದವಿದೆ. ಇದಕ್ಕೆ ಪೂರಕವೆಂಬಂತೆ ಈ ಸಿನಿಮಾಗಳು ಸಾರ್ವಜನಿಕ ಪ್ರದರ್ಶನಗಳನ್ನು ಕಾಣುವುದೇ ಇಲ್ಲ. ಕಂಡರೂ ಒಂದೆರೆಡು ದಿನಗಳಲ್ಲಿ ಥಿಯೇಟರ್‌ನಿಂದ ಜಾಗ ಖಾಲಿ ಮಾಡಿರುತ್ತವೆ.  ಈಚಿನ ಕೆಲವು ವರ್ಷಗಳಲ್ಲಿ ಪ್ರಶಸ್ತಿಗಾಗಿ ಎಂದೆ ಸಿನಿಮಾ ಮಾಡುವವರ ದೊಡ್ದ ದಂಡೇ ಕನ್ನಡ ಚಿತ್ರಂಗದಲ್ಲಿದೆ. ಇವರು ಮಾಡುವ ಸಿನಿಮಾ ಕನ್ನಡದ ಎಷ್ಟು ಪ್ರೇಕ್ಷಕರಿಗೆ ತಲುಪಿದೆ ಎನ್ನುವುದಕ್ಕಿಂತ ಎಷ್ಟು ಪ್ರಶಸ್ತಿಗಳು ಬಂದಿವೆ, ಎಷ್ಟು ಸಬ್ಸಿಡಿ ಸಿಗುತ್ತೆ ಎಂಬ ಲೆಕ್ಕಾಚಾರದಲ್ಲೆ ನಿರ್ಮಾಣಗೊಳ್ಳುತ್ತವೆ. ಅದರ ನಿರ್ಮಾಣ ವೆಚ್ಚವೂ ಕೂಡ ಅದೇ ಆ ಲೆಕ್ಕಾಚಾರದ ಪರಿಧಿಯಲ್ಲೆ ಇರುತ್ತದೆ. ಪ್ರಶಸ್ತಿ ಮತ್ತು ಸಬ್ಸಿಡಿಗಾಗಿ ದೊಡ್ಡ ಮಟ್ಟದಲ್ಲಿ ಲಾಭಿಯೂ ನಡೆಯುತ್ತದೆ. 
ಜನಪ್ರಿಯ ಸಿನಿಮಾಗಳೆಂಬ ಸಿನಿಮಾಗಳದು ಮತ್ತೊಂದು ರೀತಿಯ ಗೋಳು ನಮ್ಮ ಕನ್ನಡ ಚಿತ್ರರಂಗದಲ್ಲಿ ಅದು ಪರಾವಲಂಬನೆ. ಅಂದರೆ ಒಂದು ಸಿನಿಮಾ ಶ್ರಿಮಂತಿಕೆಯಿಂದ ಕೂಡಿರಬೇಕು ಎಂದರೆ ಅದಕ್ಕೆ ಹೊರ ರಾಜ್ಯದ ತಾಂತ್ರಿಕರೆ ಬೇಕು ಕನ್ನಡ ಚಿತ್ರರಂಗ ೭೭ ವರ್ಷಗಳ ಅವಧಿಯ ಹಾದಿಯನ್ನು ಕ್ರಮಿಸಿದ್ದರು ಇಂದಿಗೂ ಚಿತ್ರೀಕರಣದ ನಂತರದ ಕೆಲಸಗಳಿಗೆ ನೆಚ್ಚಿಕೊಂಡಿರುವುದು ಮದ್ರಾಸು ಬಾಂಬೆಗಳ ತಾಂತ್ರಿಕರನ್ನೇ. ಕರ್ನಾಟಕದಲ್ಲಿ ಇದ್ಯಾವುದು ಇಲ್ಲವೆಂದಲ್ಲ. ಇಲ್ಲಿಯೂ ಕರಿಸುಬ್ಬುರವರ ಬಾಲಾಜಿ ಸ್ಟುಡಿಯೋ, ಚಾಮುಂಡೇಶ್ವರಿ, ಪ್ರಸಾದ್, ಆದಿತ್ಯ ಮತ್ತು ಪ್ರಮುಖ ಸಂಕಲನಾಕಾರರ ಪ್ರತ್ಯೇಕ ಸ್ಟುಡಿಯೋಗಳಿವೆ. ಆದರೆ ಸಂಸ್ಕರಣಕ್ಕೆ ಹೊರರಾಜ್ಯದ ಪ್ರಸಾದ್ ಲ್ಯಾಬ್ ಒಂದೆ ಇರುವುದು. ಇಲ್ಲೂ ಕೆಲವೊಂದು ಒಳ ರಾಜಕೀಯಗಳಿವೆ. ಹಾಗಾಗಿ ಇಲ್ಲಿ ತಯಾರಾಗುವ ಸಿನಿಮಾಗಳ ಅಂಕಿಗಳಿಗೆ ಈ ಒಂದೇ ಲ್ಯಾಬ್ ಸಾಕಾಗುವುದಿಲ್ಲ. ಹಲವು ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಗಳಾಗಿದ್ದ ಕಾಲಾವಧಿಯಲ್ಲಿ ಕನ್ನಡದ ಕಣ್ಮಣಿಯ ಧರ್ಮ ಪತ್ನಿಗೆ ಹೆಸರಘಟ್ಟದ ಬಳಿ ಇಂತಹ ಸ್ಟುಡಿಯೊ ನಿರ್ಮಾಣ ಮಾಡಲು ಸ್ಥಳನೀಡಲು ಮುಂದಾದರು ಅದಕ್ಕೆ ಒಲ್ಲೆ ಎಂದು ಗಾಂಧಿನಗರದಲ್ಲೇ ಸ್ಥಳ ನೀಡಬೇಕೆಂಬ ಒತ್ತಡ ಕೂಡ ಹೇರಲಾಗಿತ್ತು.
ಇವಿಷ್ಟು ಕನ್ನಡ ಚಿತ್ರರಂಗದ ಸಧ್ಯದ ಅದೋಗತಿಯ ಸ್ಥಿತಿಗೆ ಕೆಲವು ನಿರ್ಮಾಣದ ಹಿಂದಿರುವ ಕಾರಣಗಳಾದರೆ, ಕಳೆದ ಹಲವು ವರ್ಷಗಳ ಸಿನಿಮಾಗಳನ್ನು ೭೦-೮೦ ರ ದಶಕದ ಸಿನಿಮಾಗಳಿಗೆ ಹೋಲಿಸಿದಾಗ ಆಗ ನಿರ್ಮಾಣವಾಗುತ್ತಿದ್ದ ಸಿನಿಮಾಗಳಲ್ಲಿನ ವೈವಿಧ್ಯತೆ ಕಾಣಸಿಗುವುದು ಈಗ   ಅಪರೂಪ. ಇದಕ್ಕೆ ಇಂದಿನ ಸಿನಿಮಾಗಳ ವಿತರಣೆಯ ಮಾರುಕಟ್ಟೆಯೇ ನೇರ ಕಾರಣವೆನ್ನಬಹುದು. ಕನ್ನಡ ಚಿತ್ರಗಳ ಬಿಡುಗಡೆಯ ಹಣೆಬರಹವನ್ನು ನಿರ್ಧರಿಸುವವರು ವಿತರಕರು. ಯಾವುದೇ ಸಿನಿಮಾ ಆಗಲಿ ಅದು ಥಿಯೇಟರ್‌ನಲ್ಲಿ ಇರಬೇಕೆ? ಬೇಡವೆ ಎಂದು ನಿರ್ಧರಿಸುವುದರಿಂದ ಹಿಡಿದು.. ಯಾವ ಯಾವ ಸಿನಿಮಾಗೆ ಯಾವ ಥಿಯೇಟರ್ ಕೊಡಬೇಕು ಎಷ್ಟು ದಿನ ಥಿಯೇಟರ್‌ನಲ್ಲಿ ಇರಬೇಕು ಎಂದು ನಿರ್ಧರಿಸುವವರು ಇವರೇ. ಇವರೊಳಗಿನ ಅಂತಃ ಕಲಹಗಳು ರಾಜಕೀಯದಿಂದಾಗಿ, ಕೆಲವೊಂದು ಉತ್ತಮ ಸಿನಿಮಾಗಳು ಪ್ರೇಕ್ಷಕರನ್ನು ತಲುಪುವುದೇ ಇಲ್ಲ. ಇವರ ಕುಟಿಲತೆಗೆ ಜೊತೆಯಾದರೆ ಎಂತಹ ಕೆಟ್ಟ ಸಿನಿಮಾಗೆ ಬೇಕಾದರು ಕೆಂಪೇಗೌಡ ರಸ್ತೆಯಲ್ಲಿ ಚಿತ್ರಮಂದಿರ ಸಿಗುತ್ತದೆ. 
ಕನ್ನಡ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡುವಲ್ಲಿ ಕನ್ನಡದ ನಿರ್ದೇಶಕರ, ನಿರ್ಮಾಪಕರ ಅಪಾರ ಪರಿಶ್ರಮವಿದೆ. ಆದರೆ ಅದು ಕೇವಲ ಹೆಸರಿಗೆ ಮಾತ್ರ ಸೀಮಿತವಾಯಿತೆ ಹೊರತು ಮಾರುಕಟ್ಟೆಯಲ್ಲಲ್ಲ. ಹಾಗಂತ ಇಲ್ಲಿ ತಯಾರಾಗುವ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲವೆಂದಲ್ಲ. ಅದಕ್ಕೆ ಉದಾಹರಣೆಯಾಗಿ ಮುಂಗಾರು ಮಳೆ, ಜೋಗಿ, ಜೋಗಯ್ಯ, ಪರಮಾತ್ಮ, ಸಾರಥಿ ಸಿನಿಮಾಗಳನ್ನು ಹೆಸರಿಸಬಹುದು. ಕನ್ನಡಚಿತ್ರರಂಗದಲ್ಲಿ ತನ್ನ ಮೂಲವಾಗಿಸಿಕೊಂಡು ತೆಲುಗು ಮತ್ತು ತಮಿಳಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಉಪೇಂದ್ರ ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವುದು ಮತ್ತೊಂದು ಉದಾಹರಣೆ. ಕನ್ನಡದಿಂದ ಇನ್ನೂ ಅನೇಕರು ಬೇರೆ ಭಾಷೆಗಳಲ್ಲಿ ಹೆಸರು, ಖ್ಯಾತಿಗಳನ್ನು ಗಳಿಸಿದ್ದರೂ ಉಪೇಂದ್ರ ಮಾತ್ರ ಉದಾಹರಣೆ ಯಾಕೆಂದರೆ ಅವರದು ಪ್ರತಿಭಾ ಪಲಾಯನವಲ್ಲ. ತಮ್ಮ ಪ್ರತಿಭೆಯೊಂದನ್ನೇ ನಂಬಿ ಬೇರೆ ಬೇರೆ ಭಾಷೆಗಳಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಪಕ್ಕದ ರಾಜ್ಯಗಳಿಗೆ ವಲಸೆ ಹೋಗಿ ಅಲ್ಲಿಯೇ ಘಟ್ಟಿಯಾಗಿ ತಳವೂರಿ ಇಂದು ಅಲ್ಲಿನ ಚಿತ್ರಂಗದಲ್ಲಿ ಅಲ್ಲಿ ನಿರ್ಮಾಣವಾಗುವ ಸಿನಿಮಾಗಳಲ್ಲಿ ನಿರ್ಣಾಯಕ ಪಾತ್ರವನ್ನು ಪೋಷಿಸುತ್ತಿರುವ ಅನೇಕ ಪ್ರತಿಭೆಗಳು ನಮ್ಮವರೆಂದು ಹೆಮ್ಮೆಯೆಂದ ಹೇಳಿಕೊಳ್ಳುವುದಕ್ಕೇ ಸಾಧ್ಯವಾಗಿದೆಯೆ ಹೊರತು ಅವರ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬಹುದಾದ ಸಾಧ್ಯತೆಗಳು ಯಾರ ಕಣ್ಣಿಗೂ ಕಾಣುತ್ತಿಲ್ಲ.
ಇಲ್ಲಿಂದ ಬೇರೆ ಭಾಷೆಗಳಿಗೆ ವಲಸೆ ಹೋದವರೆ ಯಾಕೆ ಎಂಬ ಪ್ರಶ್ನೆ ಥಟ್ ಎಂದು ನಮ್ಮ ಮುಂದೆ ಇಡುವವರು ಸಾಕಷ್ಟು ಮಂದಿ ಇದ್ದಾರೆ.  ಆದರೆ ಅವರು ಮರೆಯುವ ಅಥವ ಮರೆಯುವಂತೆ ನಟಿಸುವ ಹಿಂದಿರುವ ಉದ್ದೇಶವೇನೂ ಚಿದಂಬರ ರಹಸ್ಯವೇನೂ ಅಲ್ಲ. ಉತ್ತರ ಸ್ಪಷ್ಟ ಇಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದೇ ಅಪರೂಪ. ತೆರೆಯ ಮೇಲೆ ಕಾಣಿಸುವ ಅಪರೂಪದ ಪ್ರತಿಭೆಗಳಿಗೆ ಅವರ ಪ್ರತಿಭೆಯನ್ನು ತೋರಿಸಿಕೊಳ್ಳುವಂತ ಚಿತ್ರಕಥೆಗಳು ಇಲ್ಲಿ ತಯಾರಾಗದೆ ಇರುವುದೂ ಒಂದು ಕಾರಣ. ಕನ್ನಡ ನಿರ್ಮಾಪಕರಿಗೆ ಸದಾ ಸ್ಟಾರ್‌ಗಳೇ ನಾಯಕರಾಗಬೇಕು. ಆ ಸ್ಟಾರ್‌ಗಳು ಇಲ್ಲಿನವರೇ ಆಗಿರಬೇಕು, ಹೊರಗಿನವರನ್ನು ಕರೆತರಲು ಇವರ ಬಳಿ ಬಡ್ಜೆಟ್ ಇರುವುದಿಲ್ಲ. ಇದ್ದರೂ ಅವರನ್ನು ಕರೆ ತರುವುದಕ್ಕೆ ಹೋಗುವುದಿಲ್ಲ. ಅದೇ ಮಾತು ನಾಯಕಿಯರ ವಿಷಯದಲ್ಲಿ ತದ್ವಿರುದ್ದ. ಇವರ ಸಿನಿಮಾಗಳಿಗೆ ಪರಭಾಷೆಯ ತಳುಕೇ ಬೇಕು, ಅಥವ ಇಲ್ಲಿ ಅದಾಗಲೆ ಸ್ಟಾರ್ ಪಟ್ಟದಲ್ಲಿರುವವರು ಬೇಕು.
ಮುಂಗಾರು ಮಳೆ ಸಿನಿಮಾನ ಕನ್ನಡ ಚಿತ್ರರಂಗದ ಮರುಹುಟ್ಟು ಎಂದೇ ಹೇಳಲಾಗುತ್ತದೆ. ಅದು ಒಂದು ಹಂತದ ಮಟ್ಟಿಗೆ ಸರಿ ಇರಬಹುದೇನೋ ಹೊರತು ಅದೇ ಸತ್ಯವಲ್ಲ. ಕಾರಣ ಅದಕ್ಕು ಮುಂಚೆ ಕನ್ನಡ ಚಿತ್ರರಂಗ ಸತ್ತೇನೂ ಹೋಗಿರಲಿಲ್ಲ. ಮುಂಗಾರು ಮಳೆಗೂ ಮುನ್ನ ಒಂದೆರೆಡು ವರ್ಷಗಳ ಕಾಲ ಲಾಂಗು ಮಚ್ಚಿನದೇ ದರ್ಬಾರು ಅದಕ್ಕೆ ಕಾರಣ, ಓಂ, ಕರಿಯ ಮತ್ತು ಜೋಗಿ. ಈ ಮೂರು ಸಿನಿಮಾಗಳ ಯಶಸ್ಸಿನಿಂದಾಗಿ ಹೆಚ್ಚಾಗಿ ಅದೇ ರೀತಿಯ ಕನ್ನಡ ಸಿನಿಮಾಗಳು ಹೆಚ್ಚಾಗಿ ಬರುತ್ತಿದ್ದವು.. ಇದೇ ಪರಂಪರೆ ಮುಂಗಾರುಮಳೆ ಮತ್ತು ದುನಿಯಾ ಸಿನಿಮಾಗಳ ಸಕ್ಸಸ್ ನಿಂದಾಗಿ ಮುಂದುವರೆದದ್ದೂ ಹೌದು. ಸತತ ಮೂರು ವರ್ಷಗಳ ಕಾಲ ಈ ಎರಡೂ ಸಿನಿಮಾಗಳ ಫಾರ್ಮುಲ ಇಟ್ಕೊಂಡು ಸುಮಾರು ಸಿನಿಮಾಗಳು ಬಂದವು. ಸ್ವತಃ ಈ ಎರಡೂ ಸಿನಿಮಾಗಳ ನಿರ್ದೇಶಕರು ಅದರ ಪ್ರಭಾವಕ್ಕೊಳಗಾಗದೇ ಸಿನಿಮಾ ನಿರ್ದೇಶಿಸಿದರು ಜನರು ಮತ್ತೆ ಮತ್ತೆ ಅಂತಹದ್ದೇ ಸಿನಿಮಾ ಕೇಳಿದರು. ಬೇರೆ ನಿರ್ದೇಶಕರು ರೀಲು ಸುತ್ತಿದರು. ಸುತ್ತಿ ತಕ್ಕಮಟ್ಟಿಗೆ ಗೆದ್ದವರು ಮತ್ತಷ್ಟು ಸುತ್ತಲು ಹೊರಟರು, ಸುತ್ತಿ ಸುಸ್ತಾದವರು ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಮನೆ ಸೇರಿಕೊಂಡರು, ಮಾರಿಕೊಂಡರು. 

ಇದೆಲ್ಲದರ ಪರಿಣಾಮ ನೇರವಾಗಿ ತಟ್ಟುವುದು ಸಿನಿಮಾ ನಿರ್ಮಾಣದ ಮೇಲೆ. ಈಗಾಗಲೆ ನಿರ್ಧರಿತವಾಗಿರುವ ಮಾರುಕಟ್ಟೆಯನ್ನು ಪ್ರವೇಶಿಸಲು ಹೊಸ ನಿರ್ಮಾಪಕ ನಿರ್ದೇಶಕರು ಹಳೆಯ ಗೆದ್ದೆತ್ತಿನ ಬಾಲವನ್ನೆ ಹಿಡಿಯುತ್ತಾರೆ. ಅಥವ ಹಿಡಿಯಲೇ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಂಡೇ ಸಿನಿಮಾರಂಗಕ್ಕೆ ಪ್ರವೇಶಿಸುತ್ತಾರೆ. ಆಗ ನಿರ್ಮಾಣವಾಗುವ ಸಿನಿಮಾಗಳಲ್ಲಿ ಕಥೆ ಮತ್ತು ಚಿತ್ರಕಥೆಗೆ ಗಟ್ಟಿ ತಳಪಾಯವಿಲ್ಲದೆ ಚಿತ್ರ ಬಿಡುಗಡೆಗೊಂಡ ಮರುದಿನವೇ ಎತ್ತಂಗಡಿಯಾಗಿ ಮತ್ತೊಂದು ಸಿನಿಮಾ ಬಂದು ಕೂರುತ್ತವೆ. ೭೦-೮೦ರ ದಶಕದಲ್ಲಿ ಕೆಟ್ಟ ಸಿನಿಮಾಗಳು, ಜನಪ್ರಿಯ ಅಂಶಗಳನ್ನೊಳಗೊಂಡ ಸಿನಿಮಾಗಳು ಬರುತ್ತಿರಲಿಲ್ಲವೇ ಎಂದು ಕೇಳಬಹುದು. ಬರುತ್ತಿರಲಿಲ್ಲ ಎಂದಲ್ಲ. ಆಗಲು ಬರುತ್ತಿದ್ದವು. ಆದರೆ ಆಗ ಸಿನಿಮಾ ನಿರ್ಮಾಣದ ಮಾರುಕಟ್ಟೆ ಇಷ್ಟು ವಿಸ್ತಾರವಾಗಿರಲಿಲ್ಲ. ತಾಂತ್ರಿಕವಾಗಿ ಇಷ್ಟು ಮುಂದುವರೆದಿರಲಿಲ್ಲ. ಆಗ ಯಾವುದೇ ಸಿನಿಮಾ ಥಿಯೇಟರ್‌ನಲ್ಲಿ ಪ್ರದರ್ಶಿತವಾಗಬೆಕಾದರೆ ಅದು ಪಾಸಿಟಿವ್ ರೀಲ್‌ನಲ್ಲೇ ಪ್ರದರ್ಶಿತವಾಗಬೇಕಿತ್ತು. ಈಗಿನಂತೆ ಪಾಸಿಟಿವ್ ಇಲ್ಲದೆ ಯುಎಫ್‌ಓ ಮುಖಾಂತರ ಥಿಯೇಟರ್‌ಗೆ ಬರುತ್ತಿರಲಿಲ್ಲ. ಜೊತೆಗೆ ಆಗ ನಿರ್ಮಾಣವಾಗುತ್ತಿದ್ದ ಸಿನಿಮಾ ಸಂಖ್ಯೆಗಳು ಕಡಿಮೆ. ಹಾಗಾಗಿ ಸಿನಿಮಾ ಪ್ರೇಕ್ಷಕ ತೆರೆ ಕಂಡ ಬಹುತೇಕ ಸಿನಿಮಾಗಳನ್ನು ನೋಡುತ್ತಿದ್ದ. ಅದೂ ವ್ಯಕ್ತಿಯಾರಧನೆಯು ಉಚ್ಛ್ರಾಯ ಸ್ಥಿತಿಯನ್ನು ತಲುಪುತ್ತಿದ್ದ ಕಾಲವದು.. ಜೊತೆಗೆ ಬಹುತಾರಗಣ ಎಂಬ ಬ್ರಾಂಡ್ ಇಲ್ಲದೆ ಪ್ರಮುಖ ನಟರೆಲ್ಲ ಜೊತೆಯಾಗಿ ನಟಿಸುವುದನ್ನು ಬಿಟ್ಟು ಏಕಮೇವಾದ್ವಿತೇಯರಾಗಿ ಮೆರೆಯಲು ಹೊರಟ ಕಾಲವಾಗಿದ್ದರು ಪ್ರೇಕ್ಷಕ ಎಲ್ಲರ ಸಿನಿಮಾಗಳನ್ನು ನೋಡುತ್ತಿದ್ದ.
ಈ ಮೇಲಿನ ಕಾರಣಗಳು ಸಿನಿಮಾದ ಯಶಸ್ಸಿನಲ್ಲಿ ಕಾಲುಭಾಗಕ್ಕಿಂತ ಕಡಿಮೆ ಪಾಲುದಾರರಷ್ಟೇ, ಯಶಸ್ಸಿನ ಮೂಲಾಧಾರ ಕಥೆ-ಚಿತ್ರಕಥೆ, ನಟರು, ತಂತ್ರಜ್ಞರಲ್ಲಿದ್ದ ವೃತ್ತಿಪರತೆ ಮುಖ್ಯವಾದವು. ಈಗಿನ ತಂತ್ರಜ್ಞನರಲ್ಲು ವೃತ್ತಿಪರತೆ ಇದ್ದರು.. ಆಗಿನ ತಂತ್ರಜ್ಞರಿಗೆ ಈಗಿನವರಂತೆ ಸಿನಿಮಾ ಮಾಡುವುದೆಂದರೆ ಬರೀ ಹಣ ಮಾಡುವುದಲ್ಲ.. ಸಿನಿಮಾ ಅಂದರೆ ದೇವರು, ಸಿನಿಮಾನೆ ಉಸಿರು, ಸಿನಿಮಾನೆ ಎಲ್ಲ. ಹಾಗಾಗಿ ಸಿನಿಮಾಗಳಲ್ಲಿ ಸಿನಿಮಾ ಕಥೆಯಲ್ಲಿ ಸಾಧ್ಯವಾದಷ್ಟು ಪ್ರೇಕ್ಷಕ ಸ್ಪಂದಿಸುವಂತೆ ಕಥೆಗಳಿಗೆ- ಚಿತ್ರಕಥೆಗಳಿಗೆ ಹೆಚ್ಚು ಒತ್ತು ನಿಡುತ್ತಿದ್ದರು. ಆಗಿನ ಕಥೆಗಳಲ್ಲಿ ಆಗಿನ ಸಮಾಜದ ಕುರಿತಂತೆ ಒಂದು ಕಳಕಳಿ, ಸಮಸ್ಯೆಗಳಿಗೆ ಸ್ಪಂದಿಸುವಂತ ದೃಶ್ಯ ನಿರೂಪಣೆಯನ್ನು ಸಿನಿಮಾದ ಒಳಗೆ ಅಳವಡಿಸಿಕೊಳ್ಳುತ್ತಿದ್ದರು. 
ಕನ್ನಡ ಚಿತ್ರರಂಗ ಇದಿಷ್ಟಕ್ಕೇ ಪರಾವಲಂಬಿಯಾಗಿದ್ದರೆ ಸಾಕಿತ್ತೇನೊ.. ಆದರೆ ವಿಪರ್ಯಾಸವೆಂದರೆ ಸಿನಿಮಾ ಕಥೆಗಳ ಆಯ್ಕೆಯಲ್ಲು ಇಂದಿಗೂ ಕನ್ನಡ ಚಿತ್ರರಂಗ ಅವಲಂಭಿತವಾಗಿರುವುದು ಬೇರೆ ಭಾಷೆಗಳ ಮೇಲೆಯೆ. ಇದಕ್ಕೆ ಇವರಿಗಿರುವ ಪ್ರಮುಖ ಆಧಾರ ಸ್ಥಂಬ ಡಬ್ಬಿಂಗ್ ನಿಷೇದ. ದಕ್ಷಿಣದ ಯಾವ ಭಾಷೆಯ ಸಿನಿಮಾಗಳಿಗು ಇಲ್ಲದ ನೀತಿ ಕನ್ನಡ ಚಿತ್ರರಂಗಕ್ಕೆ ಮಾತ್ರ ಇದೆ. ಇಲ್ಲಿಗೆ ಬೇರೆ ಯಾವ ಭಾಷೆಯ ಚಿತ್ರಗಳು ಡಬ್ ಆಗುವಂತಿಲ್ಲ. ಆದರೆ ಇವರ ಚಿತ್ರಗಳು ಭಾರತದ ಯಾವುದೇ ಭಾಷೆಗೆ ಡಬ್ ಆಗಬಹುದು. ಈ ಡಬ್ಬಿಂಗ್ ವಿರೋಧಿ ನೀತಿಗೆ ಇವರ ಬಳಿ ಇರುವ ಸಿದ್ದ ಉತ್ತರ. ಡಬ್ಬಿಂಗ್‌ನಿಂದಾಗಿ ಚಿತ್ರರಂಗದ ಕಾರ್ಮಿಕ ವರ್ಗಕ್ಕೆ ಕೆಲಸವಿಲ್ಲದಂತಾಗುತ್ತದೆ ಎಂದು. ಈ ಉತ್ತರದಲ್ಲೇ ಸಿಗುವ ಸರಳ ಅಂಶ ರೀಮೇಕ್ ಎಂಬ ಪೆಡಂ ಭೂತ. ರೀಮೇಕ್ ಎಂಬ ಭೂತದ ನೆರವಿಂದಾಗಿ ಕನ್ನಡದ ಎಷ್ಟೋ ವಿತರಕರು, ನಿರ್ಮಾಪಕರು, ನಿರ್ದೇಶಕರು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದಾರೆ. ಇವರಿಗೆ ನಮ್ಮ ನೆಲದಲ್ಲಿನ ಕಥೆ ಕಥಾನಾಂಶಗಳನ್ನು ದೃಶ್ಯೀಕರಿಸಲು ಪರಭಾಷೆ ಸಿನಿಮಾಗಳೆ ಬೇಕು. ಇವರು ಕನ್ನಡ ಸಿನಿಮಾಗಳ ಬಿಡುಗಡೆ ಯಾವಾಗ ಎಂದು ಕಾಯುವುದಕ್ಕಿಂತ ಹೆಚ್ಚಾಗಿ ಬೇರೆ ಭಾಷೆಗಳಲ್ಲಿ ಯಾವ ಯಾವ ಸಿನಿಮಾ ಬಿಡುಗಡೆ ಆಗುತ್ತೆ, ಅದು ಎಷ್ಟು ಹಿಟ್ ಆಗುತ್ತೆ. ಎಂಬುದನ್ನೇ ಕಾಯುತ್ತಿರುತ್ತಾರೆ. ಅಲ್ಲಿ ಹಿಟ್ಟಾದ ತಕ್ಷಣ ಅವರ ಮುಂದೆ ಮಂಡಿಯೂರಿ ಆ ಸಿನಿಮಾದ ಹಕ್ಕುಗಳನ್ನು ಪಡೆದು ಬಂದು ಇಲ್ಲಿನ ಖ್ಯಾತ ನಟರನ್ನು ಹಿಡಿದು ಮುಹೂರ್ತ ಮಾಡಿ ಪ್ರೆಸ್‌ಮೀಟ್ ಮಾಡಿ ಬಿಡುತ್ತಾರೆ. ಅಲ್ಲಿ ಅವರ ಹೇಳಿಕೆಗಳೆ ಹಾಸ್ಯಾಸ್ಪದ. ಇದು ರೀಮೇಕ್ ಆದರು ಇಲ್ಲಿನ ನೇಟಿವಿಟಿಗೆ ತಕ್ಕಂತೆ ಕೆಲವೊಂದು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು. ಬದಲಾವಣೆ ಎಂದರೆ ಏನು ಎಂದು ಸಿನಿಮಾ ನೋಡಲು ಹೋದರೆ ಗೊತ್ತಾಗುತ್ತೆ.. ಮೂಲ ಸಿನಿಮಾದ ಭಾಷೆ, ನಟ, ನಟಿ, ಪೋಷಕ ನಟರು ನಿರ್ಮಾಪಕರು ಹೊರತು ಪಡಿಸಿ ಎಲ್ಲವನ್ನು ಯಾಥಾವತ್ತಾಗಿ ನಕಲು ಮಾಡಿರುವುದು. ಜಪಾನಿನ ಖ್ಯಾತ ನಿರ್ದೇಶಕ ಕುರೋಸವರ ಸಂಜುರೋ ಎಂಬ ಸಿನಿಮಾವನ್ನು ಕನ್ನಡದ ನೆಲೆಗಟ್ಟಿಗೆ ಹೊಂದುವಂತೆ ಭಾವಾನುವಾದಿಸಿ ಚಿತ್ರಕಥೆ ರಚಿಸಿ ನಿರ್ದೇಶಿದ ಕಾರ್ನಾಡರ ಒಂದಾನೊಂದು ಕಾಲದಲ್ಲಿ ಎಂಬ ಸಿನಿಮಾಗಿರುವ ಪ್ರೌಡಿಮೆ, ಭಾವಾಭಿವ್ಯಕ್ತಿ, ನಿರೂಪಣೆಯ ಹದದ ಅರಿವು ಖಂಡಿತ ಈಗಿನ ಕನ್ನಡದಲ್ಲಿನ ರೀಮೆಕ್‌ಗಳಿಗಿರುವುದಿಲ್ಲ. ಅದು ಭಾವಾನುವಾದವಾದರೆ, ಇದು ಭಾಷಾಂತರವಷ್ಟೇ.
ಕನ್ನಡ ಚಿತ್ರರಂಗದ ಇಷ್ಟೆಲ್ಲ ಏಳು ಬೀಳುಗಳ ನಡುವೆ ಚಿತ್ರರಂಗದಲ್ಲಿ ಸಾಧಿಸಲು, ಹೊಸ ಪ್ರಯತ್ನಗಳು ಕನಸುಗಳನ್ನು ಹೊತ್ತು ಅನೇಕ ಯುವಕರು ತಮ್ಮ ಮೌನ ಪ್ರಯತ್ನ ಮಾಡುತ್ತಿರುವುದು ಸಂತಸದ ಸಂಗತಿಯಾದರು, ಇಷ್ಟೆಲ್ಲ ಒಳ ರಾಜಕೀಯಗಳ ಮೇಲಾಟದಲ್ಲಿ ಈ ಯುವ ಪೀಳಿಗೆಯ ನಿರ್ದೇಶಕರು ಕಥೆಗಾರರು ಹೇಗೆ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯೊಂದನ್ನು ಸರ್ಕಾರ ಸ್ಥಾಪಿಸಿದೆ. ಆ ಅಕಾಡೆಮಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಪೂರಕವಾಗುವುದೋ ಅಥವ ಬೇರೆ ಅಕಾಡೆಮಿಗಳಂತೆ ಬರಿ ನಾಮಕಾವಸ್ಥೆಗೆ ಸೀಮಿತ ಗೊಳ್ಳುತ್ತೋ ನೋಡಬೇಕು.// 

-ಮಂಸೋರೆ


1 comment:

  1. ಮಾಹಿತಿಪೂರ್ಣ ಮತ್ತು ಒಳನೋಟದ ಬರಹ.

    ReplyDelete

ನೆನಪಿಡಿ: ನಿಮ್ಮ ಪ್ರತಿಕ್ರಿಯೆ ರಚನಾತ್ಮಕವಾಗಿರಲಿ