Saturday, July 31, 2010

ಭೂತಗನ್ನಡಿ ಶುರುವಾದದ್ದು ಹೀಗೆ...

ಸುಪ್ರೀತ್.ಕೆ.ಎಸ್


ದಿನೇದಿನೇ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ನಾನಾ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹಿಂದೆಂದೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಕೆಲಸಗಳು ಇಂದು ಮಾಹಿತಿ ತಂತ್ರಜ್ಞಾನದ ನೆರವಿನಿಂದ ಸಾಧ್ಯವಾಗುವಂತಾಗಿದೆ. ಈ ಬೆಳವಣಿಗೆಯನ್ನು ಬಳಸಿಕೊಂಡು ವ್ಯಾಪಾರ ವ್ಯವಹಾರ ಬೆಳೆದಂತೆಯೇ ಕಲೆ ಹಾಗೂ ಅಭಿವ್ಯಕ್ತಿಯೂ ಬೆಳೆಯುತ್ತಿದೆ. ಇಪ್ಪತ್ತೊಂದು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಸಚಿನ್ ತೆಂಡೂಲ್ಕರ್‌ಗೆ ಸಹ ಟ್ವಿಟರ್ ಬೇಕಾಗುತ್ತದೆ, ನಲವತ್ತು ವರ್ಷಗಳಿಗಿಂತ ಹೆಚ್ಚುಕಾಲ ಸಿನೆಮಾ ರಂಗದಲ್ಲಿ ಸಕ್ರಿಯವಾಗಿರುವ ಅಮಿತಾಭ್ ಸಹ ಬ್ಲಾಗ್ ಬರೆಯಲು ತೊಡಗುತ್ತಾರೆ.

ಹೀಗೆ ಹೊಸ ತಂತ್ರಜ್ಞಾನದ ಆವಿಷ್ಕಾರದಿಂದ ಎಲ್ಲಾ ಕ್ಷೇತ್ರಗಳಲ್ಲು ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಹಿಂದೆ ಬರಹಗಾರರು ತಮ್ಮದೊಂದು ಕತೆಯೋ, ಕವನವೋ ಪ್ರಕಟವಾಗಬೇಕೆಂದಿದ್ದರೆ ಪತ್ರಿಕೆಗಳ ಕಛೇರಿಗಳಿಗೆ ಎಡತಾಕಬೇಕಾಗುತ್ತಿತ್ತು. ಅದು ಪ್ರಕಟವಾಗುವ ದಿನಕ್ಕಾಗಿ ಎದುರು ನೋಡುತ್ತಾ ಕೂರಬೇಕಾಗಿತ್ತು. ಪ್ರಕಟಣೆಗೆ ಅರ್ಹವಲ್ಲ ಎಂಬ ಸುಳ್ಳು ವಿಷಾದಭರಿತ ಮರು ಓಲೆಯನ್ನು ಪಡೆದು ನಿರಾಶೆ ಪಡಬೇಕಾಗಿತ್ತು. ಎಲ್ಲೆಡೆ ಸಂಪಾದಕರ ತೀರ್ಮಾನವೇ ಅಂತಿಮ. ಆದರೆ ಈಗ ಪರಿಸ್ಥಿತಿ ಬಹಳ ಬದಲಾಗಿದೆ. ಅಂತರ್ಜಾಲದಲ್ಲಿ ಯಾರು ಬೇಕಾದರೂ ತಮ್ಮ ಸ್ವಂತ ಬ್ಲಾಗುಗಳನ್ನು ಚಿಕ್ಕಾಸು ಖರ್ಚು ಮಾಡದೆ ತೆರೆಯಬಹುದು. ಮನಸ್ಸಿಗೆ ಬಂದದ್ದನ್ನು ಬರೆದು ಕ್ಷಣಾರ್ಧದಲ್ಲಿ ಪ್ರಕಟಿಸಬಹುದು. ಜಗತ್ತಿನಾದ್ಯಂತ ಇರುವ ಓದುಗರು ಅದನ್ನು ಓದಬಹುದು, ನೇರವಾಗಿ ಪ್ರತಿಕ್ರಿಯೆ ನೀಡಬಹುದು. ಲೇಖಕನೊಂದಿಗೆ ಸೆಣೆಸಾಡಬಹುದು. ಅಂತರ್ಜಾಲದಿಂದಾಗಿ ಬರವಣಿಗೆ, ಓದು, ಸುದ್ದಿ ಪ್ರಸಾರದ ಚಹರೆ ಅದೆಷ್ಟರ ಮಟ್ಟಿಗೆ ಬದಲಾಗಿದೆಯೆಂದರೆ ಬ್ಲಾಗುಗಳಲ್ಲಿ ಪ್ರಕಟವಾದ ಬರಹಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳು ಪ್ರಕಟಿಸುತ್ತವೆ. ಬ್ಲಾಗುಗಳಲ್ಲಿ ಬಂದ ಅಭಿಪ್ರಾಯಕ್ಕೆ ದಿನ ಪತ್ರಿಕೆಗಳಲ್ಲಿ ಪ್ರತಿಕ್ರಿಯೆ ಪ್ರಕಟವಾಗುತ್ತದೆ.

ವಿಶ್ವದಲ್ಲಿ ಅಂತರ್ಜಾಲ, ಸುಲಭಕ್ಕೆ ಲಭ್ಯವಿರುವ ತಂತ್ರಜ್ಞಾನ, ಯಂತ್ರೋಪಕರಣಗಳ ಲಭ್ಯತೆಯಿಂದ ಹಲವರು ತಮ್ಮ ಕನಸಿಗೆ ಅಡ್ಡಿಯಾಗಿದ್ದ ಅನೇಕ ಅಡತಡೆಗಳನ್ನು ದಾಟಿಕೊಂಡು ಮುನ್ನುಗ್ಗುತ್ತಿದ್ದಾರೆ. ಸಿನೆಮಾ ಎಂಬ ಕಲಾಕ್ಷೇತ್ರದಲ್ಲಂತೂ ಪ್ರವಾಹೋಪಾದಿಯಲ್ಲಿ ಹೊಸ ಪ್ರಯೋಗಗಳಾಗುತ್ತಿವೆ. ಇಂದು ಪ್ರತಿಯೊಬ್ಬರ ಕಿಸೆಯಲ್ಲಿರುವ ಮೊಬೈಲ್ ಫೋನ್ ನಲ್ಲಿ ಕ್ಯಾಮರಾಗಳಿವೆ. ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಇದ್ದ ಮೂವಿ ಕ್ಯಾಮರಾಗಳಿಗಿಂತ ಹೆಚ್ಚಿನ ಗುಣ ಮಟ್ಟದ ವಿಡಿಯೋ ಚಿತ್ರೀಕರಣ ನಡೆಸಬಹುದಾದ ಕ್ಯಾಮರಾಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ. ಕಂಪ್ಯೂಟರ್ ನೆರವಿನಿಂದ ಎಡಿಟಿಂಗ್ ಮೊದಲಾದ ಕೆಲಸಗಳು ಸಾಕಷ್ಟು ಸುಲಭವಾಗಿ ನಡೆದುಹೋಗುತ್ತವೆ, ಈ ಸವಲತ್ತುಗಳನ್ನು ಬಳಸಿಕೊಂಡು ಅನೇಕ ಮಂದಿ ಪ್ರತಿಭಾವಂತರು, ಕನಸುಗಾರರು ನಿರ್ಮಾಪಕರ ಮರ್ಜಿಗೆ ಬೀಳದೆ, ಮಾರುಕಟ್ಟೆಯ ಲೆಕ್ಕಾಚಾರದ ಮುಲಾಜಿಲ್ಲದೆ ಚಿತ್ರಗಳನ್ನು ನಿರ್ಮಿಸಿ ತೋರಿದ್ದಾರೆ.

ಥಿಯೇಟರಿನಲ್ಲಿ ಬಿಡುಗಡೆಯಾಗದಿದ್ದರೂ ಜನರಿಗೆ ತಲುಪಬಲ್ಲ ಅನೇಕ ಮಾರ್ಗಗಳನ್ನು ಚಿತ್ರ ನಿರ್ಮಾಪಕರು ಕಂಡುಕೊಳ್ಳುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ನಿರ್ದೇಶಿಸಿದ ಸಿನೆಮಾಗಳು ಯುಟ್ಯೂಬ್ ಮೊದಲಾದ ವೇದಿಕೆಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ‘ಥಿಯೇಟರು’ಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿವೆ.

ಇಂತಹ ಪವಾಡ ಕಣ್ಣೆದುರಿಗೆ ಜರುಗುತ್ತಿದ್ದರೂ ಕನ್ನಡಿಗರಾದ ನಾವು ಏನಾದರೂ ಮಾಡಬೇಡವೇ? ಸಿನೆಮಾ ಎನ್ನುವುದು ಮನರಂಜನೆಯ ಹಂತವನ್ನೂ ದಾಟಿ ಕಲಾಪ್ರಕಾರವಾಗಿ ಬೆಳೆಯುವುದಕ್ಕೆ, ಕಾದಂಬರಿ, ದಿನ ಪತ್ರಿಕೆಗಳನ್ನು ಓದಲು ಕಲಿತ ಜನರು ಸಿನೆಮಾವನ್ನು ‘ಓದು’ವುದಕ್ಕೆ ಕಲಿಯುವಂತಾಗಲು ದುಡಿಯುವುದು ಬೇಡವೇ? ಹೀಗೆಲ್ಲಾ ಯೋಚಿಸಿದ ನಂತರ ಶುರುವಾದದ್ದು ‘ಭೂತಗನ್ನಡಿ’.

ಸಣ್ಣ ತಂಡವೊಂದನ್ನು ಕಟ್ಟಿಕೊಂಡು ಅಲ್ಪ ಖರ್ಚಿನಲ್ಲಿಯೇ ಸಿನೆಮಾ ಒಂದನ್ನು ನಿರ್ಮಿಸಲು ಹೊರಟಿದ್ದೇವೆ. ಈ ಪಯಣದದಲ್ಲಿ ನಿಮ್ಮನ್ನೂ ಹೆಜ್ಜೆ ಹಾಕಿಸುವ ಉದ್ದೇಶದಿಂದ ತೆರೆದಿರುವುದು ಈ ಬ್ಲಾಗ್.

Friday, July 30, 2010

ನನಗ್ಯಾಕೆ ಸಿನೆಮಾದ ಗುಂಗು?

ರೂಪ ರಾಜೀವ್

ನನಗೆಂದೂ ಸಿನೆಮಾ ಅಷ್ಟೊಂದು ಎಫೆಕ್ಟಿವ್ ಅನ್ನಿಸಿರಲೇ ಇಲ್ಲ. ಯಾವಾಗಲೋ ಒಮ್ಮೆ ಹಿಂದಿ ಸಿನೆಮಾಗಳ ಸಿಡಿ ತಂದು ಮನೆಯಲ್ಲಿ ನೋಡಿಬಿಟ್ಟರೆ ಮುಗಿಯಿತು. ಇನ್ನೂ ಕನ್ನಡ ಸಿನೆಮಾಗಳೋ, ನಮ್ಮ ಥಿಯೇಟರ್ ಗಳಲ್ಲಿ ತುಂಬಾ ದಿವಸಗಳು ಇದ್ದರೆ ಮಾತ್ರ ಒತ್ತಾಯಕ್ಕೆ ಹೋಗಿಬರುತ್ತಿದ್ದದಷ್ಟೆ.


‘ಮುಂಗಾರು ಮಳೆ’ ಸಿನೆಮಾವನ್ನು ನಾನು ನೋಡಿದ್ದು, ‘ಸುಧಾ’ ವಾರಪತ್ರಿಕೆಯಲ್ಲಿ ಯೋಗರಾಜ್ ಭಟ್ಟರ ಸಿನೆಮಾ ಮೇಕಿಂಗ್ ಬಗೆಗಿನ ಆರ್ಟಿಕಲ್ ಓದಿ, ಅವರ ಬರಹದ ಶೈಲಿಯಿಂದ ಪ್ರಭಾವಿತಳಾಗಿ! ಟೈಟಲ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಎಷ್ಟೋ ಕನ್ನಡ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದ್ದರೂ ನಾನು ನೋಡೇ ಇಲ್ಲ. ಎಷ್ಟೋ ಬಾರಿ ಟಿವಿಗಳಲ್ಲಿ ಬರೇ ಸಿನೆಮಾದ ಬಗ್ಗೆಯೇ ಬಂದಾಗ ಬೇಜಾರಾಗಿ ಟಿವಿ ಆರಿಸಿದ್ದು ಕೂಡ ಉಂಟು.


ನಮ್ಮ ಕನ್ನಡದ ಹೆಸರಾಂತ ನಟರ ಸಿನೆಮಾಗಳನ್ನು ನೋಡಿದಾಗ ಇಷ್ಟು ಸಿಲ್ಲಿ ಸಿನೆಮಾಗಳನ್ನು ಏಕೆ ಮಾಡುತ್ತಾರೆ? ಕಥೆ ಓದಿರುವುದಿಲ್ಲವೇ? ಸಿನೆಮಾದ ಬಗ್ಗೆ ಏನೂ ಗೊತ್ತಿಲ್ಲದ ನನಗೆ ಇದರ ಹುಳುಕುಗಳು ಕಂಡಾಗ, ಇವರಿಗೆಲ್ಲಾ ಗೊತ್ತಾಗುವುದಿಲ್ಲವೇ? ಇವರೆಲ್ಲಾ ಏಕೆ ಹೀಗೆ? ಇಷ್ಟೇ ನನ್ನ ಆಲೋಚನೆಗಳು. ನಂತರ ನನಗ್ಯಾಕೆ? ಎಂದು ಮರೆತುಬಿಡುತ್ತಿದ್ದೆ.


ಹೀಗಿದ್ದ ನಾನು, ಸಿನೆಮಾ ಮೇಕಿಂಗ್ ನ ಗಂಧಗಾಳಿಯೂ ಇಲ್ಲದ, ಇಂತಹ ನಾನು ಈ ಸಿನೆಮಾದ ಗುಂಗು ಹಿಡಿಸಿಕೊಂಡಿದ್ದು ಹೇಗೆ? ಏಕೆ?


ಶೇಖರ್ ಪೂರ್ಣರವರನ್ನು ಭೇಟಿ ಮಾಡುವವರೆಗೂ ನನ್ನ ಆಲೋಚನೆಗಳು ಇಷ್ಟಕ್ಕೆ ಸೀಮಿತವಾಗಿದ್ದವು. ಅವರು ಸಿನೆಮಾಗಳನ್ನು ವಿಮರ್ಶಿಸುವ ರೀತಿ, ಶೈಲಿ ಬಹಳವಾಗಿ ಹಿಡಿಸಿತು. ನಾನು ಇವರ ಹಾಗೇ ಎಲ್ಲಾ ಸಿನೆಮಾಗಳನ್ನು ನೋಡಿಯೇಬಿಡಬೇಕೆಂಬ ಆಸೆ ಕೂಡ ಮೂಡಿಸಿತು. ಅದುವರೆವಿಗೂ ಸಿನೆಮಾ ಅನ್ನೋದು ಮನರಂಜನೆಗಾಗಿ ಮಾತ್ರ ಅನ್ನುವ ಅನಿಸಿಕೆ ನನ್ನಲ್ಲಿ ಬಲವಾಗಿತ್ತು. ನಮ್ಮ ಸಿನೆಮಾಗಳು ಎಷ್ಟು ಕಮರ್ಷಿಯಲೈಸ್ ಆಗಿಬಿಟ್ಟಿವೆ, ನಿರ್ಮಾಪಕನೊಬ್ಬ ಹೆಸರಾಂತ ನಟನಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು (ಕಥೆಯನ್ನು ಕೂಡ ಕೇಳದೆ!) ಖರ್ಚು ಮಾಡಲು ರೆಡಿ ಇರುತ್ತಾನೆ. ಮೊದಲಿಗೆ ನಟ / ನಟಿಯರನ್ನು ಗೊತ್ತು ಮಾಡಿಕೊಂಡು, ಅವರಿಗೆ ಸೂಕ್ತವಾದಂತಹ ಅದೇ ಹಳೆಯ ಫಾರ್ಮುಲಾ ಉಳ್ಳ ಕಥೆಗಳು! ಮಚ್ಚು, ಲಾಂಗ್, ಐಟಮ್ ಸಾಂಗ್, ಒಂದೇ ರೀತಿಯ ಕ್ಯಾಮೆರಾ ವರ್ಕ್, ಎಲ್ಲವೂ ಸ್ಟಿರಿಯೋ ಟೈಪ್ಡ್. ಯಾವುದಾದರೊಂದು ಸಿನೆಮಾ ಯಶಸ್ವಿಯಾಗಿ ಓಡಿಬಿಟ್ಟರೆ, ಅದೇ ಧಾಟಿಯುಳ್ಳ ಹಲವಾರು ಸಿನೆಮಾಗಳು...


ಇದೆಲ್ಲಾ ನಮ್ಮ ಮೊದಲ ಭೇಟಿಯಲ್ಲಿ ಚರ್ಚೆಯಾದಂತಹ ವಿಷಯಗಳು. ಬೇರೆ ಎಲ್ಲಾ ಭಾಷೆಗಳಲ್ಲಿಯೂ ಸಿನೆಮಾಗಳಲ್ಲಿ ಅಷ್ಟೊಂದು ಪ್ರಯೋಗ ನಡೀತಿರಬೇಕಾದರೆ, ಏಕೆ ನಮ್ಮ ಕನ್ನಡ ಸಿನೆಮಾ ಆ ನಿಟ್ಟಿನಲ್ಲಿ ಆಲೋಚಿಸುತ್ತಿಲ್ಲ? ಕನ್ನಡದಲ್ಲಿ ಪ್ರಜ್ಞಾವಂತ ಸಿನೆಮಾ ನೋಡುಗರಿಲ್ಲವೇ? ಸಿನೆಮಾ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಕಾಲಾನುಕಾಲದಿಂದ ಹಾಸುಹೊಕ್ಕಾಗಿವೆ ಹಾಗೂ ಬೇರೆ ಎಲ್ಲಾ ಕಲಾ ಪ್ರಕಾರಗಳಿಗಿಂತ ಹೆಚ್ಚು ಜನರನ್ನು ತಟ್ಟುತ್ತವೆ. ಒಬ್ಬ ವ್ಯಕ್ತಿ ಸಿನೆಮಾ ನೋಡಲು ಸುಮಾರು ೧೦೦ ರೂಗಳನ್ನು ಕೊಟ್ಟು ನೋಡುತ್ತಾನೆಂದರೆ, ಅದನ್ನು ನಾವು ಬರೇ ಮನರಂಜನೆ ಕೊಡುವ ಉದ್ದೇಶ ಇಟ್ಟುಕೊಂಡ್ರೆ ಸಾಲದು. ನಮಗೆ ಆ ಒಬ್ಬೊಬ್ಬ ವ್ಯಕ್ತಿಯ ೧೦೦ ರೂ.ಗಳ ಜವಾಬ್ದಾರಿಯ ಅರಿವಿರಬೇಕು. ನಮ್ಮ ಸಿನೆಮಾದಲ್ಲಿನ ವಸ್ತು (ಕಂಟೆಂಟ್) ಪ್ರತಿಯೊಬ್ಬರನ್ನೂ ಚಿಂತನೆಗೀಡಾಗುವಂತೆ ಮಾಡಬೇಕು. ಸಿನೆಮಾ ನೋಡಿ, ವಾಪಾಸ್ಸು ಹೋಗುವಾಗ ಈ ವಿಷಯ ಜನರನ್ನು ಕಾಡಬೇಕು. ವಾದಗಳಾಗಬೇಕು, ಚರ್ಚೆಗಳಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಇದೆಲ್ಲವನ್ನೂ ದಾಖಲಿಸಬೇಕು. ಇದು ಅವರ ಆಶಯವಾಗಿತ್ತು.


ಕೇಳುತ್ತಾ, ಚರ್ಚಿಸುತ್ತಾ ಹೋದಂತೆ ಇದೆಲ್ಲವೂ ನಮ್ಮೆಲ್ಲರ ಆಶಯವಾಗಿ ಬದಲಾಗಿತ್ತು.


Saturday, July 24, 2010

ಸಿನೆಮಾ- ಯಾಕೆ?

ಸಂವಾದ ಹುಟ್ಟಿದ್ದು ಗುರುಪ್ರಸಾದರ ಮಠದಲ್ಲಿ! ಈ ಚಿತ್ರವನ್ನ ನಾವು ನೋಡಿದಾಗ ಮುಖ್ಯವಾಹಿನಿಯ ಲಾಭವನ್ನೇ ಉದ್ದೇಶವಾಗಿಸಿಟ್ಟುಕೊಂಡ ಚಿತ್ರದಂತಿದ್ದ ಇದರಲ್ಲೂ ಕ್ರಿಯಾಶೀಲ ದಿಗ್ದರ್ಶಕನೊಬ್ಬನ ಸಮರ್ಥ ಅಭಿವ್ಯಕ್ತಿಯನ್ನೂ ಕಾಣಬಹುದಿತ್ತು.ಅದನ್ನ ಸೋ ಕಾಲ್ಡ್ ಆರ್ಟ್ ಮತ್ತು ಕಮರ್ಷಿಯಲ್ ಸಿನೆಮಾಗಳ ನಡುವಿನ ಬ್ರಿಡ್ಜ್ ಸಿನೆಮಾ ಎಂದಾದರೂ ಕರೆಯಬಹುದು.

ವಿಭಿನ್ನ ನಿರೂಪಣಾ ತಂತ್ರ ಮತ್ತು ಸೂಕ್ಷ್ಮ ಕಥಾವಸ್ತುವನ್ನ ಹೊಂದಿದ್ದ ಮಠದಂತಹ ಸಿನೆಮಾದ ವಿಶಿಷ್ಠತೆಯನ್ನ ನಮ್ಮ ಮಾಧ್ಯಮಗಳು ಗುರುತಿಸದೇ ಇದ್ದದ್ದು ಸಂವಾದ ಡಾಟ್ ಕಾಂ ರೂಪು ತಳೆಯಲು ಕಾರಣವಾಯಿತು. ಸಿನೆಮಾ ಒಂದಕ್ಕೆ ರೆಫರೆನ್ಸ್ ಟೆಕ್ಸ್ಟ್ ಇರಬೇಕು, ಸಾಹಿತ್ಯ-ಸಂಗೀತದಲ್ಲಿ ಇರುವಷ್ಟು ಅಕಾಡೆಮಿಕ್ ಟೆಕ್ಸ್ಟ್ ನಮ್ಮ ಸಿನೆಮಾಗಳಲ್ಲಿ ಇಲ್ಲ ಎನ್ನುವ ಬೇಸರ, ನಮ್ಮ ಮಣ್ಣಿನ ಗುಣವಿಲ್ಲದ ಕನ್ನಡ ಸಿನೆಮಾಗಳು.. ಹೀಗೆ ಹತ್ತಾರು ಸಂಕಟಗಳನ್ನ ಒಡಲಲ್ಲಿಟ್ಟುಕೊಂಡು ಹುಟ್ಟಿದ್ದು ಸಂವಾದ.


ಈಗ ನಾವೇ ಸಿನೆಮಾ ಮಾಡಲು ಹೊರಟಿದ್ದೇಕೆ? ಎಂಬ ಪ್ರಶ್ನೆಗೆ ಪೊಳ್ಳು ಕಾರಣಗಳನ್ನ ಆರೋಪಿಸಿಕೊಳ್ಳುವುದು ಬೇಡ. ಇದಕ್ಕೆ ಅಂಥ ಘನ ಉದ್ದೇಶಗಳೇನೂ ಇಲ್ಲ. ಆದರೂ ಕೆಲವೊಂದು ಅಂಶಗಳನ್ನ ಈ ಭೂತಗನ್ನಡಿಯೊಳಗೆ ದಾಖಲಿಸಿಡೋಣ:

೧. ನಮಗೆ ಸಿನೆಮಾ ಎಂದರೆ ತೆವಲು.
೨. ಕ್ಯಾಮೆರಾ ಹಿಡಿಯುವುದು ಹೇಗೆ? ಸೀನ್ ಅಂದರೆ ಏನು? ಏಡಿಟಿಂಗ್ ಹೇಗೆ ಮಾಡುವುದು? ಕಥೆಯೊಂದು ಸ್ಕ್ರಿಪ್ಟ್ ಆಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಬಿದ್ದ ಮೇಲೆ ಎಡಿಟಿಂಗ್ ಟೇಬಲ್ ಮೇಲೆ ಹುಟ್ಟುವುದು ಏನು? ಇಂಥಹ ಅಚ್ಚರಿಗಳನ್ನೆಲ್ಲ ಅನುಭವಿಸುವುದು ಬೇಡವೇ?


ಮನುಷ್ಯನಿಗೆ ಹೊಸ ಹೊಸ ಹುಚ್ಚು ಹಿಡಿದಷ್ಟು ಆತ ಜೀವಂತವಾಗಿರುತ್ತಾನೆ. ಹರಿವ ನದಿಯಾಗುತ್ತಾನೆ. ಇಷ್ಟು ದಿನ ಸಿನೆಮಾ ನೋಡುವ, ಅದರ ಬಗ್ಗೆ ಬರೆಯುವ ಹುಚ್ಚಿದ್ದ ನಮಗೆ, ಈಗ ಹೊಸ ತೆವಲೊಂದು ಸಿಕ್ಕಿಹಾಕಿಕೊಂಡಿದೆ. ಅದೇ ಮೇಕಿಂಗ್ ಆಫ್ ಸಿನೆಮಾ.

ಸಿನೆಮಾ ಮಾಡುತ್ತೆವೆಯೋ ಬಿಡುತ್ತೆವೆಯೋ, ಮಾಡಲು ಹೊರಟಿರುವುದಂತೂ ಹೌದು. ಸಿನೆಮಾ ಮಾಡಿದ ತೃಪ್ತಿಗಿಂತ, ಸಿನೆಮಾ ಮೇಕಿಂಗ್ ನ ಪಯಣದಲ್ಲೇ ಸಾಕಷ್ಟು ಅನುಭವ ನಮ್ಮದಾಗಿರುತ್ತದೆ, ಅನ್ನುವದಂತೂ ಸತ್ಯ.

ಆಕ್ಷನ್..