ಸುಪ್ರೀತ್.ಕೆ.ಎಸ್
ದಿನೇದಿನೇ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ನಾನಾ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹಿಂದೆಂದೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಕೆಲಸಗಳು ಇಂದು ಮಾಹಿತಿ ತಂತ್ರಜ್ಞಾನದ ನೆರವಿನಿಂದ ಸಾಧ್ಯವಾಗುವಂತಾಗಿದೆ. ಈ ಬೆಳವಣಿಗೆಯನ್ನು ಬಳಸಿಕೊಂಡು ವ್ಯಾಪಾರ ವ್ಯವಹಾರ ಬೆಳೆದಂತೆಯೇ ಕಲೆ ಹಾಗೂ ಅಭಿವ್ಯಕ್ತಿಯೂ ಬೆಳೆಯುತ್ತಿದೆ. ಇಪ್ಪತ್ತೊಂದು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಸಚಿನ್ ತೆಂಡೂಲ್ಕರ್‌ಗೆ ಸಹ ಟ್ವಿಟರ್ ಬೇಕಾಗುತ್ತದೆ, ನಲವತ್ತು ವರ್ಷಗಳಿಗಿಂತ ಹೆಚ್ಚುಕಾಲ ಸಿನೆಮಾ ರಂಗದಲ್ಲಿ ಸಕ್ರಿಯವಾಗಿರುವ ಅಮಿತಾಭ್ ಸಹ ಬ್ಲಾಗ್ ಬರೆಯಲು ತೊಡಗುತ್ತಾರೆ.
ಹೀಗೆ ಹೊಸ ತಂತ್ರಜ್ಞಾನದ ಆವಿಷ್ಕಾರದಿಂದ ಎಲ್ಲಾ ಕ್ಷೇತ್ರಗಳಲ್ಲು ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಹಿಂದೆ ಬರಹಗಾರರು ತಮ್ಮದೊಂದು ಕತೆಯೋ, ಕವನವೋ ಪ್ರಕಟವಾಗಬೇಕೆಂದಿದ್ದರೆ ಪತ್ರಿಕೆಗಳ ಕಛೇರಿಗಳಿಗೆ ಎಡತಾಕಬೇಕಾಗುತ್ತಿತ್ತು. ಅದು ಪ್ರಕಟವಾಗುವ ದಿನಕ್ಕಾಗಿ ಎದುರು ನೋಡುತ್ತಾ ಕೂರಬೇಕಾಗಿತ್ತು. ಪ್ರಕಟಣೆಗೆ ಅರ್ಹವಲ್ಲ ಎಂಬ ಸುಳ್ಳು ವಿಷಾದಭರಿತ ಮರು ಓಲೆಯನ್ನು ಪಡೆದು ನಿರಾಶೆ ಪಡಬೇಕಾಗಿತ್ತು. ಎಲ್ಲೆಡೆ ಸಂಪಾದಕರ ತೀರ್ಮಾನವೇ ಅಂತಿಮ. ಆದರೆ ಈಗ ಪರಿಸ್ಥಿತಿ ಬಹಳ ಬದಲಾಗಿದೆ. ಅಂತರ್ಜಾಲದಲ್ಲಿ ಯಾರು ಬೇಕಾದರೂ ತಮ್ಮ ಸ್ವಂತ ಬ್ಲಾಗುಗಳನ್ನು ಚಿಕ್ಕಾಸು ಖರ್ಚು ಮಾಡದೆ ತೆರೆಯಬಹುದು. ಮನಸ್ಸಿಗೆ ಬಂದದ್ದನ್ನು ಬರೆದು ಕ್ಷಣಾರ್ಧದಲ್ಲಿ ಪ್ರಕಟಿಸಬಹುದು. ಜಗತ್ತಿನಾದ್ಯಂತ ಇರುವ ಓದುಗರು ಅದನ್ನು ಓದಬಹುದು, ನೇರವಾಗಿ ಪ್ರತಿಕ್ರಿಯೆ ನೀಡಬಹುದು. ಲೇಖಕನೊಂದಿಗೆ ಸೆಣೆಸಾಡಬಹುದು. ಅಂತರ್ಜಾಲದಿಂದಾಗಿ ಬರವಣಿಗೆ, ಓದು, ಸುದ್ದಿ ಪ್ರಸಾರದ ಚಹರೆ ಅದೆಷ್ಟರ ಮಟ್ಟಿಗೆ ಬದಲಾಗಿದೆಯೆಂದರೆ ಬ್ಲಾಗುಗಳಲ್ಲಿ ಪ್ರಕಟವಾದ ಬರಹಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳು ಪ್ರಕಟಿಸುತ್ತವೆ. ಬ್ಲಾಗುಗಳಲ್ಲಿ ಬಂದ ಅಭಿಪ್ರಾಯಕ್ಕೆ ದಿನ ಪತ್ರಿಕೆಗಳಲ್ಲಿ ಪ್ರತಿಕ್ರಿಯೆ ಪ್ರಕಟವಾಗುತ್ತದೆ.
ವಿಶ್ವದಲ್ಲಿ ಅಂತರ್ಜಾಲ, ಸುಲಭಕ್ಕೆ ಲಭ್ಯವಿರುವ ತಂತ್ರಜ್ಞಾನ, ಯಂತ್ರೋಪಕರಣಗಳ ಲಭ್ಯತೆಯಿಂದ ಹಲವರು ತಮ್ಮ ಕನಸಿಗೆ ಅಡ್ಡಿಯಾಗಿದ್ದ ಅನೇಕ ಅಡತಡೆಗಳನ್ನು ದಾಟಿಕೊಂಡು ಮುನ್ನುಗ್ಗುತ್ತಿದ್ದಾರೆ. ಸಿನೆಮಾ ಎಂಬ ಕಲಾಕ್ಷೇತ್ರದಲ್ಲಂತೂ ಪ್ರವಾಹೋಪಾದಿಯಲ್ಲಿ ಹೊಸ ಪ್ರಯೋಗಗಳಾಗುತ್ತಿವೆ. ಇಂದು ಪ್ರತಿಯೊಬ್ಬರ ಕಿಸೆಯಲ್ಲಿರುವ ಮೊಬೈಲ್ ಫೋನ್ ನಲ್ಲಿ ಕ್ಯಾಮರಾಗಳಿವೆ. ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಇದ್ದ ಮೂವಿ ಕ್ಯಾಮರಾಗಳಿಗಿಂತ ಹೆಚ್ಚಿನ ಗುಣ ಮಟ್ಟದ ವಿಡಿಯೋ ಚಿತ್ರೀಕರಣ ನಡೆಸಬಹುದಾದ ಕ್ಯಾಮರಾಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ. ಕಂಪ್ಯೂಟರ್ ನೆರವಿನಿಂದ ಎಡಿಟಿಂಗ್ ಮೊದಲಾದ ಕೆಲಸಗಳು ಸಾಕಷ್ಟು ಸುಲಭವಾಗಿ ನಡೆದುಹೋಗುತ್ತವೆ, ಈ ಸವಲತ್ತುಗಳನ್ನು ಬಳಸಿಕೊಂಡು ಅನೇಕ ಮಂದಿ ಪ್ರತಿಭಾವಂತರು, ಕನಸುಗಾರರು ನಿರ್ಮಾಪಕರ ಮರ್ಜಿಗೆ ಬೀಳದೆ, ಮಾರುಕಟ್ಟೆಯ ಲೆಕ್ಕಾಚಾರದ ಮುಲಾಜಿಲ್ಲದೆ ಚಿತ್ರಗಳನ್ನು ನಿರ್ಮಿಸಿ ತೋರಿದ್ದಾರೆ.
ಥಿಯೇಟರಿನಲ್ಲಿ ಬಿಡುಗಡೆಯಾಗದಿದ್ದರೂ ಜನರಿಗೆ ತಲುಪಬಲ್ಲ ಅನೇಕ ಮಾರ್ಗಗಳನ್ನು ಚಿತ್ರ ನಿರ್ಮಾಪಕರು ಕಂಡುಕೊಳ್ಳುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ನಿರ್ದೇಶಿಸಿದ ಸಿನೆಮಾಗಳು ಯುಟ್ಯೂಬ್ ಮೊದಲಾದ ವೇದಿಕೆಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ‘ಥಿಯೇಟರು’ಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿವೆ.
ಇಂತಹ ಪವಾಡ ಕಣ್ಣೆದುರಿಗೆ ಜರುಗುತ್ತಿದ್ದರೂ ಕನ್ನಡಿಗರಾದ ನಾವು ಏನಾದರೂ ಮಾಡಬೇಡವೇ? ಸಿನೆಮಾ ಎನ್ನುವುದು ಮನರಂಜನೆಯ ಹಂತವನ್ನೂ ದಾಟಿ ಕಲಾಪ್ರಕಾರವಾಗಿ ಬೆಳೆಯುವುದಕ್ಕೆ, ಕಾದಂಬರಿ, ದಿನ ಪತ್ರಿಕೆಗಳನ್ನು ಓದಲು ಕಲಿತ ಜನರು ಸಿನೆಮಾವನ್ನು ‘ಓದು’ವುದಕ್ಕೆ ಕಲಿಯುವಂತಾಗಲು ದುಡಿಯುವುದು ಬೇಡವೇ? ಹೀಗೆಲ್ಲಾ ಯೋಚಿಸಿದ ನಂತರ ಶುರುವಾದದ್ದು ‘ಭೂತಗನ್ನಡಿ’.
ಸಣ್ಣ ತಂಡವೊಂದನ್ನು ಕಟ್ಟಿಕೊಂಡು ಅಲ್ಪ ಖರ್ಚಿನಲ್ಲಿಯೇ ಸಿನೆಮಾ ಒಂದನ್ನು ನಿರ್ಮಿಸಲು ಹೊರಟಿದ್ದೇವೆ. ಈ ಪಯಣದದಲ್ಲಿ ನಿಮ್ಮನ್ನೂ ಹೆಜ್ಜೆ ಹಾಕಿಸುವ ಉದ್ದೇಶದಿಂದ ತೆರೆದಿರುವುದು ಈ ಬ್ಲಾಗ್.
All the best Sureet.:-) ನಿಮ್ಮ ತಂಡ ಕೈಗೊಂಡ ಎಲ್ಲ ಸದುದ್ದೇಶದ ಕಾರ್ಯಗಳೂ ಯಶಸ್ಸು ಕಾಣಲಿ.
ReplyDeleteಧನ್ಯವಾದಗಳು ಮೇಡಂ
ReplyDelete