Showing posts with label ವಾರಾಂತ್ಯದ ಭೇಟಿ. Show all posts
Showing posts with label ವಾರಾಂತ್ಯದ ಭೇಟಿ. Show all posts

Saturday, December 11, 2010

ವಾರಾಂತ್ಯದ ಭೇಟಿ 3

ಹಿಂದಿನ ಭೇಟಿಯ ಸಂದರ್ಭದಲ್ಲಿ ನಾವು ಚರ್ಚಿಸಿ ಒಪ್ಪಿಕೊಂಡಿದ್ದ ಕಥಾ ಹಂದರವನ್ನು ಒಂದು ಸಾಲಿನ ಸ್ಕ್ರಿಪ್ಟ್ ಆಗಿ ಕಟ್ಟಿಕೊಡಲಿಕ್ಕೆ ತುಂಬಾ ಕಷ್ಟ ಎನ್ನುವ ಅರಿವಾಯಿತು. ಎರಡು ಪಾತ್ರಗಳನ್ನು ಇಟ್ಟುಕೊಂಡು ಇಡೀ ಚಿತ್ರಕತೆಯನ್ನು ಹೆಣೆಯುವುದಾಗಿ ನಾವು ಯೋಜಿಸಿಕೊಂಡಿದ್ದೆವು. ಆದರೆ ಎರಡು ಪಾತ್ರಗಳು ಇಡೀ ಕ್ಯಾನ್ವಾಸನ್ನು ಆಕ್ರಮಿಸಿಕೊಳ್ಳುವಾಗ ನಮ್ಮ ಚಿತ್ರಕತೆ ವಿಪರೀತ ನಾಟಕೀಯವಾಗಿರಬೇಕಾದ ಅನಿವಾರ್ಯತೆ ಕಾಡುತ್ತದೆ. ನಾಟಕೀಯತೆ ಅತಿಯಾದಷ್ಟು ಚಿತ್ರಕತೆ ವಾಸ್ತವದಿಂದ ದೂರ ಹೋಗುತ್ತದೆ ಹಾಗೂ ಚಿತ್ರಕತೆ ಪೇಲವವಾಗುತ್ತದೆ ಎನ್ನಿಸಿತು. ಹೀಗಾಗಿ ನಾವು ಎರಡು ಪಾತ್ರಗಳ ಕತಾ ಹಂದರವನ್ನು ಕೈಬಿಟ್ಟು ವಿಸ್ತಾರವಾದ ಕ್ಯಾನ್ವಾಸ್ ಒದಗಿಸುವಂತಹ ಕತಾಹಂದರವನ್ನು ರೂಪಿಸಿಕೊಂಡಿದ್ದೇವೆ. ಹೆಚ್ಚು ಪಾತ್ರಗಳನ್ನು ಕಟ್ಟಿಕೊಂಡಿದ್ದೇವೆ.

ಹಿಂದಿನ ಭೇಟಿಯ ಸಂದರ್ಭದಲ್ಲಿ ನಾವು ಚರ್ಚಿಸಿದ ಹಾಗೂ ಈಗ ಕೈಬಿಟ್ಟ ಕತಾ ಹಂದರವನ್ನು ಭೂತಗನ್ನಡಿಯಲ್ಲಿ ದಾಖಲಿಸುತ್ತಿದ್ದೇವೆ.

ಮಾತೇ ಆಡದ ಪೊಲೀಸ್ ಅಧಿಕಾರಿಯ ಕಿಡ್ನಾಪ್ ಆಗುತ್ತದೆ. ವಿಪರೀತ ವಾಚಾಳಿ, ಸೈದ್ಧಾಂತಿಕವಾಗಿ ವಿಪರೀತ ಪ್ರಭಾವಿತನಾದ ನಕ್ಸಲೈಟ್ ಸುಪರ್ದಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಬಿಡಲಾಗುತ್ತದೆ. ಆತನ ಬಳಿ ಒಂದು ಮೊಬೈಲ್ ಫೋನ್ ಇರುತ್ತದೆ. ಆದರೆ ಅದಕ್ಕೆ ಇನ್ ಕಮಿಂಗ್ ಮಾತ್ರ ಇರುತ್ತದೆ.

ನಕ್ಸಲೈಟ್ ನಾಯಕರು ತಮ್ಮ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಪೊಲೀಸ್ ಅಧಿಕಾರಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಸರಕಾರದ ಜೊತೆಗೆ ಮಾತುಕತೆ ನಡೆಸುತ್ತಿರುತ್ತದೆ. ಫೋನ್ ಮೂಲಕ ಸೂಚನೆಗಳನ್ನು ನೀಡುತ್ತಿರುತ್ತಾರೆ.

ಒಂದು ದಿನ ಚೆನ್ನಾಗಿ ನೋಡಿಕೊಳ್ಳುವ, ಹಿಂಸಿಸಿ ಬಾಯಿ ಬಿಡಿಸುವ, ಆತನ ಯೋಗಕ್ಷೇಮಕ್ಕಾಗಿ ಆಡಿಯೋ ಟೇಪ್, ವಿಡಿಯೋ ಫೂಟೇಜ್ ಕಳಿಸುವ ಸೂಚನೆ ಸಿಕ್ಕುತ್ತದೆ.

ವಾಚಾಳಿಯಾದ ನಕ್ಸಲೈಟ್ ಮಾತಾಡಲು ಯಾರೊಬ್ಬರೂ ಇರದೆ, ಮೊಬೈಲ್ ನಲ್ಲೂ ಮಾತಾಡುವ ಅವಕಾಶವಿಲ್ಲದೆ ಮೌನಿ ಪೊಲೀಸ್ ಅಧಿಕಾರಿಯನ್ನೇ ಮಾತಿಗೆಳೆಯುತ್ತಾನೆ, ಮಾತಾಡುತ್ತ ಮಾತಾಡುತ್ತ ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತೆ.

ಹೀಗಿರುವಾಗ ಆ ಪೊಲೀಸ್ ಅಧಿಕಾರಿಯನ್ನು ಕೊಂದು ಬರುವ ಸೂಚನೆ ಮೊಬೈಲ್ ನಲ್ಲಿ ಇವನಿಗೆ ಸಿಕ್ಕುತ್ತೆ.

ಈ ವಾರದ ಭೇಟಿಯಲ್ಲಿ ನಿಷ್ಕರ್ಷಿಸಿದ ಹೊಸ ಕತಾ ಹಂದರದ ಮೇಲೆ ಕೆಲಸ ನಡೆಯುತ್ತಿದೆ. ಇನ್ನು ಎರಡುವಾರದಲ್ಲಿ ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರು ಮಾಡಬೇಕೆಂದು ಯೋಜನೆ ಹಾಕಿಕೊಳ್ಳಲಾಗಿದೆ.

Friday, December 3, 2010

ಭೇಟಿ ಮುಂದೂಡಿಕೆ

ಕಳೆದ ವಾರದ ಭೇಟಿಯಲ್ಲಿ ನಾವು ನಿಷ್ಕರ್ಷಿಸಿದ ಕತೆಯನ್ನು ಒಂದು ಸಾಲಿನ ಸ್ಕ್ರಿಪ್ಟ್ ಆಗಿ ಬರೆದುಕೊಂಡು ಬರುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ ಕಾರ್ಯ ಬಾಹುಳ್ಯದಿಂದಾಗಿ ಅದು ಪೂರ್ಣವಾಗಿಲ್ಲ.

ಹೀಗಾಗಿ ಈ ಶನಿವಾರದ ಭೇಟಿಯನ್ನು ರದ್ದು ಪಡಿಸಿ ಮುಂದಿನ ಶನಿವಾರದೊಳಗೆ ಆ ಕೆಲಸವನ್ನು ಪೂರ್ಣಗೊಳಿಸಿ ಭೇಟಿಯಾಗುವುದಾಗಿ ತೀರ್ಮಾನಿಸಲಾಗಿದೆ.

ಡಿಸೆಂಬರ್ ಹನ್ನೊಂದನೆಯ ತಾರೀಖು ಭೇಟಿಯಾಗುವ ಸಂದರ್ಭದಲ್ಲಿ ಒಂದು ಸಾಲಿನ ಸ್ಕ್ರಿಪ್ಟ್ ರೆಡಿಯಾಗಿರಬೇಕು ಎಂದು ಈ ಮೂಲಕ ತಿಳಿಸಲಾಗುತ್ತಿದೆ.

Saturday, November 27, 2010

ವಾರಾಂತ್ಯದ ಭೇಟಿ 2

ಎರಡನೆಯ ವಾರಾಂತ್ಯದ ಭೇಟಿಯಲ್ಲಿ ಸೇರಿದ ಸದಸ್ಯರು:

ಸುಪ್ರೀತ್
ಕಿರಣ್
ರೂಪಲಕ್ಷ್ಮಿ
ಹೇಮಾ ಪವಾರ್
ಅವಿನಾಶ್.ಜಿ

ಸ್ಥಳ ಹಾಗೂ ಸಮಯ:

ಸಂಸ ಬಯಲು ರಂಗ ಮಂದಿರ, ಬೆಂಗಳೂರು
ಮಧ್ಯಾನ ಮೂರು ಗಂಟೆಯಿಂದ ಐದುವರೆವರೆಗೆ.

ಭೇಟಿಯ ಸಂದರ್ಭದಲ್ಲಿ ಚರ್ಚಿಸಿದ ವಿಷಯ:

ಪ್ರತಿಯೊಬ್ಬರೂ ತಾವು ಹಿಂದಿನ ವಾರ ತಯಾರು ಮಾಡಿದ ಕತಾ ಹಂದರವನ್ನು ಹಂಚಿಕೊಂಡರು.
ಪ್ರತಿಯೊಂದು ಕತೆಯ ತಪ್ಪು ಒಪ್ಪುಗಳು, ಶಕ್ತಿ, ಬಲಹೀನತೆಗಳನ್ನು ಚರ್ಚಿಸಲಾಯಿತು.
ಚಿತ್ರೀಕರಣದಲ್ಲಿ ನಮಗೆ ಎದುರಾಗಬಹುದಾದ ಸಂಪನ್ಮೂಲದ ಮಿತಿ, ನಮ್ಮ ಸಾಮರ್ಥ್ಯವನ್ನು ಕುರಿತು ಆಲೋಚಿಸಿ ಕತೆಯನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯ್ತು.
ಸರ್ವಾನುಮತದ ಮೂಲಕ ಕಿರಣ್ ಬಿಡಿಸಿಟ್ಟ ಕತಾ ಹಂದರವನ್ನು ಒಪ್ಪಿಕೊಳ್ಳಲಾಯ್ತು.

ಎರಡು ಸದೃಢವಾದ ಪಾತ್ರಗಳ ಸುತ್ತ ಸುತ್ತುವ ಕತೆಯನ್ನು ಕಿರಣ್ ಮತ್ತೊಮ್ಮೆ ಸದಸ್ಯರಿಗೆಲ್ಲ ಹೇಳಿದರು. ಸ್ಥಳದಲ್ಲೇ ಉಳಿದವರೆಲ್ಲ ಆ ಕತೆಯನ್ನು ನಾಲ್ಕೈದು ಸಾಲುಗಳಲ್ಲಿ ತಮ್ಮ ಗ್ರಹಿಕೆಗೆ ತಕ್ಕಂತೆ ಟಿಪ್ಪಣಿ ಮಾಡಿಕೊಂಡರು.

ಮುಂದಿನ ವಾರಾಂತ್ಯದ ಭೇಟಿಯ ವೇಳೆಗೆ ಸ್ಕ್ರಿಪ್ಟ್ ಜವಾಬ್ದಾರಿಯನ್ನು ಹೊತ್ತಿರುವ ಸದಸ್ಯರು ದೃಶ್ಯಗಳಾಗಿ ವಿಂಗಡಿಸಿದ ಒಂದು ಸಾಲಿನ ಕತೆಯನ್ನು ತಯಾರು ಮಾಡಿಕೊಳ್ಳಬೇಕು ಎಂದು ನಿರ್ಧರಿಸಲಾಯ್ತು.

ಸದ್ಯ ಸರ್ವರ ಒಪ್ಪಿಗೆಯನ್ನು ಪಡೆದ ಕತಾ ಹಂದರದ ಚಿಕ್ಕ ತುಣುಕನ್ನು ಕೇಂದ್ರ ಸಮಿತಿಯ ಸದಸ್ಯರ ವೈಯಕ್ತಿಕ ಮೇಲ್ ಐಡಿಗಳಿಗೆ ಕಳಿಸಲಾಗುವುದು. ಕತೆ ಒಪ್ಪಿತವಾಗಿ ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರಾದಾಗ ಕತಾ ಹಂದರವನ್ನು ಇಡಿಯಾಗಿ ‘ಭೂತಗನ್ನಡಿ’ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು.

ನಮ್ಮ ಕೆಲಸದ ಕುರಿತ ಅಪ್ ಡೇಟ್ ಗಳಿಗಾಗಿ ನಮ್ಮನ್ನು ಟ್ವಿಟರ್ ನಲ್ಲಿ ಫಾಲೋ ಮಾಡಬಹುದು.
ಫೇಸ್ ಬುಕ್ಕಿನಲ್ಲಿ ನಮ್ಮ ಪುಟಕ್ಕೆ ಸಂದರ್ಶಿಸಿ ಸಂಪರ್ಕದಲ್ಲಿರಬಹುದು.