
ಕನ್ನಡದ ಪರಿಸರದಲ್ಲಿ ದೃಶ್ಯ ಮಾಧ್ಯಮಕ್ಕೊಂದು ಗಂಭೀರವಾದ ನೆಲೆಗಟ್ಟು ಒದಗಿಸಿಕೊಡಬೇಕು ಎನ್ನುವುದು ಸಂವಾದ ಡಾಟ್ ಕಾಂನ ಆಶಯ. ದೃಶ್ಯ ಮಾಧ್ಯಮಗಳಾದ ಸಿನೆಮ, ದೂರದರ್ಶನ, ಫೊಟೊಗ್ರಫಿ, ಚಿತ್ರಕಲೆ, ರಂಗಭೂಮಿ- ಇವುಗಳಲ್ಲಿ ಕನ್ನಡಿಗರು ಹೊಸ ಸಾಧ್ಯತೆಗಳನ್ನು ಅನ್ವೇಷಿಸಲಿ, ನವೀನ ಪ್ರಯತ್ನಗಳು ಮೂಡಿ ಬರಲಿ ಎನ್ನುವುದು ನಮ್ಮ ಹಾರೈಕೆ.
ಈ ದಿಸೆಯಲ್ಲಿ ನಾವು ಕೈಗೆತ್ತಿಕೊಂಡಿರುವ ಅನೇಕ ಯೋಜನೆಗಳಲ್ಲಿ ಕಿರುಚಿತ್ರ ನಿರ್ಮಾಣ ಕೂಡ ಒಂದು. ಕಳೆದ ವಾರಾಂತ್ಯದಲ್ಲಿ ‘ಸುಳಿ’ ಎನ್ನುವ ಕಿರುಚಿತ್ರವೊಂದರ ಚಿತ್ರೀಕರಣ ನಡೆಯಿತು. ಶೇ. ೭೦ರಷ್ಟು ಚಿತ್ರೀಕರಣ ಮುಗಿದಿರುವ ಈ ಕಿರುಚಿತ್ರದಲ್ಲಿ ಕೆಲಸ ಮಾಡಿದ ನಟರು ಹಾಗೂ ತಂತ್ರಜ್ಞರು ಎಲ್ಲರೂ ಹವ್ಯಾಸಿಗಳು. ಎಲ್ಲರಿಗೂ ಇದು ಮೊದಲ ಪ್ರಾಜೆಕ್ಟ್.
ನಾವು ನಿರ್ಮಿಸುವ ಚಿತ್ರದಷ್ಟೇ ಚಿತ್ರ ನಿರ್ಮಾಣದ ಪ್ರಕ್ರಿಯೆಯೆಡೆಗಿನ ನಮ್ಮ ಅಪ್ರೋಚ್ ಕೂಡ ಮುಖ್ಯ. ಗುರಿಯಷ್ಟೇ ಹಾದಿಯೂ ಮುಖ್ಯ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ಚಿತ್ರ ನಿರ್ಮಾಣದಲ್ಲಿ ನಾವು ತೊಡಗಿಕೊಂಡಿರುವ ರೀತಿ, ನಾವು ಬಳಸುವ ಸಂಪನ್ಮೂಲಗಳು, ನಮ್ಮ ಆಯ್ಕೆಗಳು, ಮಿತಿಗಳು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತೇವೆ.
‘ಸುಳಿ’ ಕಿರುಚಿತ್ರದ ಚಿತ್ರೀಕರಣ ಕುರಿತಾದ ವಿವರಗಳು ಇಂತಿವೆ:
ಕಿರುಚಿತ್ರದ ಶೀರ್ಷಿಕೆ: ಸುಳಿ
ಚಿತ್ರದ ಅವಧಿ: ೧೫-೨೦ ನಿಮಿಷ
ನಟವರ್ಗ:
ಶಶಿಭಟ್
ಅನಿರುದ್ಧ ಭಟ್ ಇನ್ನಂಜೆ
ಕಾಂತಿ ಹೆಗಡೆ
ಶಿವಕುಮಾರ್
ವೆಂಕಿ ಹೊನ್ನಾವರ್
ಹೇಮ ಪವಾರ್
ಸೀತಾ ಚಂದ್ರಶೇಖರ್
ತಂತ್ರಜ್ಞರು:
ಚಿತ್ರಕತೆ, ನಿರ್ದೇಶನ, ಕೆಮರಾ: ಸುಪ್ರೀತ್.ಕೆ.ಎಸ್
ಸಹ ನಿರ್ದೇಶನ: ಶಿವಕುಮಾರ್.ಪಿ
ನಿರ್ಮಾಣ ನಿರ್ವಹಣೆ: ಹೇಮ ಪವಾರ್
ಸಲಕರಣೆಗಳು:
ಕೆಮರಾ: Canon 550D, SLR camera
ಲೆನ್ಸುಗಳು: 15mm, 18-55mm, 55-250mm,
ಬೆಳಕು: ಒಂದು ೧೦೦೦ ವ್ಯಾಟ್ ಫ್ಲಡ್ ಲೈಟ್, ಎಲ್ ಇ ಡಿ ಬಲ್ಬುಗಳು, ಸಿ.ಎಫ್.ಎಲ್ ಲ್ಯಾಂಪ್
ಬಜೆಟ್:
ಸಿನೆಮ ಬಜೆಟನ್ನು ನಿಖರವಾದ ಅಂಕಿಅಂಶಗಳಿಗೆ ಇಳಿಸುವುದು ತೊಡಕಿನ ವಿಚಾರ. ಈ ಪ್ರಾಜೆಕ್ಟಿನಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ತಮ್ಮ ಓಡಾಟ, ಊಟ ತಿಂಡಿ, ಕಾಸ್ಟ್ಯೂಂಗಳನ್ನು ತಾವೇ ನೋಡಿಕೊಂಡಿರುತ್ತಾರೆ. ಹೀಗಾಗಿ ಇವೆಲ್ಲ ಬಜೆಟ್ ಒಳಗೆ ಸೇರುವುದಿಲ್ಲ. ಇನ್ನು ಕೆಮರ, ಲೈಟುಗಳು ನಮಗೆ ಉಚಿತವಾಗಿ ಲಭ್ಯವಾದ್ದರಿಂದ ಅವುಗಳಿಂದ ಖರ್ಚಾಗಲಿಲ್ಲ.
ಶೂಟಿಂಗ್ ಸಂಬಂಧಿಸಿದ ಪರಿಕರಗಳ ಮೇಲೆ ಖರ್ಚು ಮಾಡಬೇಕಾಗಿ ಬಂದಿತು. ಶೂಟಿಂಗ್ ಎಲ್ಲ ಮುಗಿದು ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ತಂತ್ರಜ್ಞರಿಗೆ ಸಂಭಾವನೆ ಕೊಡುವ ಸಂದರ್ಭ ಬಂದರೆ ಬಜೆಟ್ ಏರಬಹುದು.
ಸುಮಾರು ಎರಡರಿಂದ ಎರಡುವರೆ ಸಾವಿರ ರುಪಾಯಿಗಳನ್ನು ನಾವು ಬಜೆಟ್ ಎಂದು ಈ ಕಿರುಚಿತ್ರಕ್ಕೆ ತೆಗೆದಿರಿಸಿದ್ದೇವೆ. ಮುಂದಿನ ವರದಿಗಳಲ್ಲಿ ನಿಖರವಾದ ಅಂಕಿ ಅಂಶಗಳನ್ನು ನೀಡುತ್ತೇವೆ.