Thursday, December 23, 2010

ಪಾಡ್ ಕಾಸ್ಟ್: ರಾಮ್ ಗೋಪಾಲ್ ವರ್ಮಾ ರಕ್ತಚರಿತಾ ಹಾಗೂ ಬಂಡಿಟ್ ಕ್ವೀನ್!

ನಾವು ಸಿನೆಮಾ ನಿರ್ಮಿಸುವುದರ ಜೊತೆಗೆ, ನಿರ್ಮಾಣದ ಪ್ರಕ್ರಿಯೆಯನ್ನು ಸಹ ಹಂತ ಹಂತವಾಗಿ ದಾಖಲಿಸುತ್ತಾ ಹೋಗುವ ನಿರ್ಧಾರವನ್ನು ಯೋಜನೆಗೆ ತೊಡಗುವ ಮೊದಲು ಮಾಡಿಕೊಂಡಿದ್ದೆವು. ಸಿನೆಮ ತನ್ನ ಕಥಾವಸ್ತು, ಶೈಲಿ ಮೊದಲಾದ ತಾಂತ್ರಿಕ ವಿವರಗಳ ಜೊತೆಗೆ ತಾನು ನಿರ್ಮಾಣಗೊಳ್ಳಲು ಆಶ್ರಯಿಸುವ ಆರ್ಥಿಕತೆ, ವೃತ್ತಿಪರತೆಯ ಮಾದರಿ ಇವೆಲ್ಲವೂ ಮುಖ್ಯವಾಗುತ್ತವೆ ಎನ್ನುವ ಅರಿವಿನಿಂದ ನಾವು ಚಿತ್ರಕತೆ ತಯಾರಾಗುವ ಮುಂಚಿನಿಂದಲೇ ನಮ್ಮ ಚಟುವಟಿಕೆಗಳನ್ನು ದಾಖಲಿಸುವ ಉದ್ದೇಶದಿಂದ ‘ಭೂತಗನ್ನಡಿ’ ಬ್ಲಾಗ್ ತೆರೆದದ್ದು.


ಈ ನಿಟ್ಟಿನಲ್ಲಿ ಈಗಾಗಲೇ ನಾವು ನಮ್ಮ ತಂಡದ ಸದಸ್ಯರ ಪರಿಚಯ, ನಾವು ನಡೆಸಿದ ಭೇಟಿಗಳ ಕುರಿತ ಮಾಹಿತಿ. ನಮ್ಮ ಕೆಲಸದ ದಿಕ್ಕು ದೆಸೆ ಬಗ್ಗೆ ಬರೆದಿದ್ದೇವೆ.


ಈ ಪೋಸ್ಟಿನಿಂದ ನಮ್ಮ ಚರ್ಚೆಯ ಆಡಿಯೋ ಕ್ಲಿಪ್ಪಿಂಗುಗಳನ್ನು ಪಾಡ್ ಕಾಸ್ಟ್ ಮಾಡುತ್ತಿದ್ದೇವೆ. ಪಾಡ್ ಕಾಸ್ಟ್ ಸರಣಿಯ ಮೊದಲ ಭಾಗ ಇಲ್ಲಿದೆ:

(ಮಾತುಕತೆಯಲ್ಲಿ ಭಾಗಿಯಾದವರು:

ಶೇಖರ್ ಪೂರ್ಣ

ಸುಪ್ರೀತ್.ಕೆ.ಎಸ್

ಕಿರಣ್.ಎಂ

ಧ್ವನಿ ಮುದ್ರಣ, ಸಂಸ್ಕರಣೆ: ಸುಪ್ರೀತ್.ಕೆ.ಎಸ್)



Get this widget | Track details | eSnips Social DNA

Tuesday, December 14, 2010

ಹಳೆಯದೊಂದು ಸಿನೆಮಾ ಸ್ಕ್ರಿಪ್ಟ್

ಸಿನೆಮಾ ನಿರ್ಮಾಣದ ಪ್ರಕ್ರಿಯೆಯಲ್ಲಿ ನಾವೆಲ್ಲರೂ ವಿದ್ಯಾರ್ಥಿಗಳಾದುದರಿಂದ ಹಲವು ಹಂತಗಳಲ್ಲಿನ ಕೆಲಸವನ್ನು ನಾವು ಅಭ್ಯಾಸ ಎಂದು ಪರಿಗಣಿಸಿ ಪೂರೈಸಬೇಕಾಗುತ್ತದೆ. ಪೂರ್ಣ ಪ್ರಮಾಣದ ಚಿತ್ರಕತೆಯೊಂದನ್ನು ಪೂರೈಸಿ ಅದನ್ನು ತಾತ್ವಿಕ ಅಂತ್ಯದವರೆಗೆ ಕೊಂಡೊಯ್ದು ದೃಶ್ಯಗಳಾಗಿ ವಿಂಗಡಿಸಿ ಸಿದ್ಧಪಡಿಸಿದ ಸ್ಕ್ರಿಪ್ಟು ನಮ್ಮನ್ನು ಚಿತ್ರಕತೆ ಬರೆಯುವುದರಲ್ಲಿ ತರಬೇತುಗೊಳಿಸಿತೇ ವಿನಃ ಬದಲಾದ ನಮ್ಮ ಮನಸ್ಥಿತಿಗೆ ಹೊಂದದೆ ಅದನ್ನು ಕೈಬಿಡಬೇಕಾಯ್ತು.


ಸಿನೆಮಾ ನಿರ್ಮಾಣದ ಜೊತೆಗೆ ನಿರ್ಮಾಣದ ಪ್ರಕ್ರಿಯೆಯ ಕುರಿತೂ ದಾಖಲಿಸುತ್ತಾ ಹೋಗಬೇಕು ಎನ್ನುವ ಇರಾದೆ ಭೂತಗನ್ನಡಿಯದು. ಹೀಗಾಗಿ ಈ ಹಳೆಯ ಸ್ಕ್ರಿಪ್ಟನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಈ ಸ್ಕ್ರಿಪ್ಟ್ ಬರೆದವರು: ಸುಪ್ರೀತ್.ಕೆ.ಎಸ್


ದೃಶ್ಯ ೧:


ಹಗಲು

ಕಾಡು

ಪೊಲೀಸ್ ಮಾಹಿತಿದಾರ

ಗನ್ ಫೈರ್ ಆದ ಸದ್ದು ಕೇಳುತ್ತೆ - ಮಾಹಿತಿದಾರ ಶವವನ್ನು ಕಂಡು ಎಸ್ ಐಗೆ ಫೋನ್ ಮಾಡಿ ಮಾಹಿತಿ ತಿಳಿಸ್ತಾನೆ


ದೃಶ್ಯ :

ಹಗಲು

ಮನೆಯೊಳಗೆ

ಎಸ್ ಐ, ಹೆಂಡತಿ

ಮೇಲಧಿಕಾರಿಗಳಿಗೆ ಫೋನ್ ಮಾಡಿ ಸಮಾಲೋಚನೆ ನಡೆಸುತ್ತಾನೆ, ನಕ್ಸಲ್ ಸಾವನ್ನು ಎನ್ ಕೌಂಟರ್ ಎಂದು ಬಿಂಬಿಸುವುದಕ್ಕೆ instructions ಸಿಕ್ಕುತ್ತವೆ


ದೃಶ್ಯ

ಹಗಲು

ಪೊಲೀಸ್ ಸ್ಟೇಷನ್

ಎಸ್ ಐ

ಪೇದೆಗಳು

ಅದಾಗಲೇ ಸತ್ತಿರುವ ನಕ್ಸಲ್ ನಾಯಕಿ ಕಾಡಿನಲ್ಲಿ ಓಡಾಡಿಕೊಂಡಿರುವ ಮಾಹಿತಿ ಸಿಕ್ಕಂತೆ ನಟಿಸಿ ಶೂಟರ್ ಗಳನ್ನ ಹೊರಡಿಸಿಕೊಂಡು ಹೋಗ್ತಾನೆ


ದೃಶ್ಯ

ಹಗಲು

ಕಾಡು

ಎಸ್ ಐ, ಶೂಟರ್, ಮಾಹಿತಿ ದಾರ

ಗುಂಡಿನ ಚಕಮಕಿಯಾದ ಸದ್ದು - ಎನ್ ಕೌಂಟರ್ ನಡೆದಂತೆ ಸಾಕ್ಷ್ಯಗಳ ಸ್ಥಾಪನೆ ನಡೆಯುತ್ತೆ


ದೃಶ್ಯ

ಹಗಲು

ಪೊಲೀಸ್ ಸ್ಟೇಷನ್ ಆವರಣ

ಮಾಧ್ಯಮದವರು

ಎನ್ ಕೌಂಟರ್ ಹೇಗಾಯಿತೆಂಬುದಕ್ಕೆ ಮಾಧ್ಯಮದಲ್ಲಿ ಹೇಳಿಕೆಯನ್ನು ನೀಡುತ್ತಾನೆ- ಕುಖ್ಯಾತ ನಕ್ಸಲ್ ನಾಯಕಿಯ ಎನ್ ಕೌಂಟರ್ ಎಂದು ಟಿವಿ ಚಾನೆಲ್ ಗಳು ವರದಿ ಮಾಡುತ್ತವೆ


ದೃಶ್ಯ

ಹಗಲು

ಮನೆಯೊಳಗೆ

ಜರ್ನಲಿಸ್ಟ್

ಟಿವಿಯಲ್ಲಿ ಬಿತ್ತರವಾದ ವರದಿಯಲ್ಲಿ ಶುಭಾ ಎನ್ ಕೌಂಟರ್, ಹಿನ್ನೆಲ ಹಾಗೂ ರಾಜಕೀಯ ವಿದ್ಯಮಾನಗಳನ್ನು ಗಮನಿಸ್ತಾಳೆ- ಹೆಚ್ಚಿನದನ್ನ ತಿಳಿಯೋದಕ್ಕೆ ನಿಶ್ಚಿತಾರ್ಥವಾದ ಲೆಕ್ಚರರ್ ಗೆ ಫೋನ್ ಮಾಡ್ತಾಳೆ- ಪೊಲೀಸರು ಕೊಲ್ಡ್ ಬ್ಲಡೆಡ್ ಆಗಿ ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ಸಿಕ್ಕುತ್ತೆ- ವರದಿಗಾಗಿ ತಾನು ಭೇಟಿ ನೀಡಬಹುದು ಎನ್ನುತ್ತಾಳೆ


ದೃಶ್ಯ ೭


ಹಗಲು

ಆಫೀಸ್ ಕೊಠಡಿ

ಜರ್ನಲಿಸ್ಟ್, ಬಾಸ್

ಶುಭಾ ಸ್ಟೋರಿಯಲ್ಲಿರುವ ಮಾನವೀಯ ಅಂಶಗಳನ್ನು ಎಕ್ಸ್ ಪ್ಲಾಯ್ಟ್ ಮಾಡುವುದು ಹೇಗೆಂದು ಬಾಸ್ ವಿವರಿಸುತ್ತಾನೆ- ಹಿಂದಿನ ಓಡಾಟಗಳಲ್ಲಿ ಲೆಕ್ಚರ್ ಹೇಳಿದ ಕತೆಗಳಿಂದ ಶುಭಾ ಇಂಟರೆಸ್ಟಿಂಗ್ ಪಾತ್ರವಾಗಿ ಜರ್ನಲಿಸ್ಟಿಗೆ ಕಾಣುತ್ತಾಳೆ


ದೃಶ್ಯ

ರಾತ್ರಿ

ಪೊಲೀಸ್ ಸ್ಟೇಷನ್

ಜರ್ನಲಿಸ್ಟ್, ಎಸ್ ಐ, ಕೆಮರಾಮನ್

ತನ್ನ ಭೇಟಿ ಉದ್ದೇಶ ತಿಳಿಸಿ ವರದಿಗಾರಿಕೆಗಾಗಿ ಎಲ್ಲೆಲ್ಲಿ ತಾನು ಹೋಗುತ್ತಿದ್ದೇನೆಂದು ಪೊಲೀಸರಿಗೆ ತಿಳಿಸುತ್ತಾಳೆ- ಲೆಕ್ಚರ್ ಜೊತೆ ನಿಶ್ಚಿತಾರ್ಥವಾಗಿರುವ ರಿಪೋರ್ಟರ್ ಕುರಿತು ಎಸ್ ಐ ಅಸಹನೆ ವ್ಯಕ್ತ ಪಡಿಸುತ್ತಾನೆ


ದೃಶ್ಯ

ರಾತ್ರಿ

ಮನೆಯ ಆವರಣ

ಜರ್ನಲಿಸ್ಟ್, ಲೆಕ್ಚರರ್

ವಯಕ್ತಿಕ ವಿಚಾರಗಳನ್ನು ಮಾತಾಡಿಕೊಳ್ಳುತ್ತಾರೆ- ಶುಭಾಳ ಪ್ರಸ್ತಾಪದಿಂದ ಸಣ್ಣಗೆ ಚರ್ಚೆ ಶುರುವಾಗುತ್ತೆ- ಲೆಕ್ಚರ್ ಮಾತುಗಳಿಂದ ಪ್ರಭಾವಿತಳಾದ ಜರ್ನಲಿಸ್ಟ್ ತನ್ನ ವರದಿಯ ರೂಪು ರೇಖೆ ಹೇಗಿರಬೇಕೆಂದು ನಿರ್ಧರಿಸುತ್ತಾಳೆ


ದೃಶ್ಯ ೧೦

ಹಗಲು

ಮನೆಯ ಆವರಣ

ಜರ್ನಲಿಸ್ಟ್, ಕೆಮರಾಮನ್, ಶುಭಾಳ ತಂದೆ

ಮಗಳ ಸಾವಿನ ಬಗ್ಗೆ ತಂದೆ ಏನನ್ನುತ್ತಾನೆ ಎಂದು ವರದಿ ಮಾಡುತ್ತಾಳೆ


ದೃಶ್ಯ ೧೧

ಹಗಲು

ಕಾಲೇಜು ಆವರಣ

ಲೆಕ್ಚರ್, ಮಾನವ ಹಕ್ಕುಗಳ ಹೋರಾಟಗಾರರು

ಶುಭಾ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿರುತ್ತೆ- ಅಲ್ಲಿನ ವರದಿ- ಲೆಕ್ಚರರ್ ಶುಭಾ ಬಗ್ಗೆ ಮಾತನಾಡುತ್ತಾನೆ - ಪೋಸ್ಟ್ ಮಾರ್ಟಂ ಬೆಂಗಳೂರಲ್ಲಿ ಆಗಬೇಕೆಂದು ಆಗ್ರಹಿಸುತ್ತಾರೆ


ದೃಶ್ಯ ೧೨

ಹಗಲು

ಹೊರಗೆ

ಜರ್ನಲಿಸ್ಟ್, ಲೆಕ್ಚರ್

ಮದುವೆಯಾಗಲಿರುವ ಜೋಡಿ ಪಿಕ್ನಿಕ್ ಎಂದು ಒಂದು ಜಾಗಕ್ಕೆ ಹೋಗಿರ್ತಾರೆ- ಕಾಡುಗಳಲ್ಲಿ ನಡೆದಾಡುತ್ತ ಲೆಕ್ಚರ್ ನಕ್ಸಲ್ ಬದುಕು ಹೇಗಿರುತ್ತದೆಂಬುದನ್ನು ವಿವರಿಸ್ತಾನೆ


ದೃಶ್ಯ ೧೩

ಹಗಲು

ಮನೆಯೊಳಗೆ

ಜರ್ನಲಿಸ್ಟ್,ಲೆಕ್ಚರ್,ಲೆಕ್ಚರ್ ತಂದೆ

ವಾರ ಕಳೆದ ನಂತರ ಅರ್ಚಕನ ಕುಟುಂಬದಲ್ಲಿ ಕೋಲ ನಡೆಸಲು ತೀರ್ಮಾನಿಸಿರುವ ವಿಷಯ ಲೆಕ್ಚರ್ ತಂದೆ ತಿಳಿಸ್ತಾನೆ. ಅಮೇರಿಕಾದಲ್ಲಿದ್ದ ಅರ್ಚಕನ ಮಗಳು ಹಿಂದಿನ ರಾತ್ರಿ ಬಂದಿರುವುದಾಗಿ ತಿಳಿಯುತ್ತೆ - ಕೋಲದ ಉದ್ದೇಶದ ಚರ್ಚೆಯಾಗುತ್ತೆ- ನಕ್ಸಲ್ ನಾಯಕಿಯ ಮೋಹಕ್ಕೊಳಗಾಗಿ ಕಾಡು ಸೇರಿದ್ದ ಮಗನಿಗೆ ಆಕೆಯ ಮೋಹ ಬಿಟ್ಟರೆ ಕೋಲ ಎನ್ನುವ ಹರಕೆಯಿದ್ದಿರಬಹುದು ಎನ್ನುವ ಮಾತು ಹಳ್ಳಿಯಲ್ಲಿ ಓಡಾಡುತ್ತಿದೆ ಎನ್ನುವುದು ತಿಳಿಯುತ್ತೆ-


ದೃಶ್ಯ ೧೪

ಹಗಲು

ಮನೆ ಹೊರಗೆ

ಜರ್ನಲಿ, ಲೆಕ್ಚರ್

ಕೋಲವನ್ನು ನೋಡಬೇಕೆಂದು- ಚಿತ್ರೀಕರಿಸಿಕೊಳ್ಳಬೇಕೆಂದು ಕೆಮರಾಮನ್ ಜೊತೆ ವಾಣಿ (ಜರ್ನಲಿಸ್ಟ್) ಮಾತನಾಡಿಕೊಂಡು- ಕೋಲದ ಬಗ್ಗೆ ಮಾತನಾಡುತ್ತಾ ಆತ ಕೋಲ್ಡ್ ರೀಡಿಂಗ್ ಇರಬಹುದು ಅನ್ನುವನು - ವಾಣಿ ನಮ್ಮದಷ್ಟಕ್ಕೆ ಸೀಮಿತವಲ್ಲ ಎಂದು ವಿದೇಶದಲ್ಲಿ ಜನಪ್ರಿಯವಾದ ಮೀಡಿಯಮ್ ಟಾಕ್ ಬಗ್ಗೆ ಹೇಳುವಳು


ದೃಶ್ಯ ೧೬

ಹಗಲು

ಮನೆಯ ಹೊರಗೆ

ವಾಣಿ, ಆನಂದ್, ಕೆಮರಾ ಮನ್

ಆನಂದನ ಸ್ಟೂಡೆಂಟ್ ಆಗಿದ್ದ ಶುಭಾ- ನಕ್ಸಲ್ ಆದ ಮೇಲೆ- ಆಕೆಯ ಜ್ಯೂನಿಯರ್ ಹಾಗೂ ಅಭಿಮಾನಿ ಜಗದೀಶ್ ಅಬ್ಸ್ಕಾಂಡ್ ಆದ ಅವರಿಬ್ಬರೂ ಮದುವೆಯಾಗಿದ್ದಿರಬಹುದು ಎಂದು ಪೊಲೀಸರು ಹೇಳಿದ್ದು- ಒಳ್ಳೇ ಡೈಮೆನ್ಷನ್ ಸಿಕ್ಕಬಹುದು ಅಂತ - ಆಗ ಅವರಿಬ್ಬರು ಗಂಡ ಹೆಂಡತಿಯೇ ಆಗಿರಬೇಕೆಂಬ ಕಂಡೀಷನ್ ಏನಕ್ಕೆ?


ದೃಶ್ಯ ೧೫

ಹಗಲು

ಮನೆಯೊಳಗೆ

ಅರ್ಚಕ, ಮಗಳು,ಮಗ,ಅಜ್ಜಿ

ಪ್ರಯಾಣದ ಬಗ್ಗೆ ಮಗಳ ಜೊತೆ ಮಾತು- ಕೋಲದ ವ್ಯವಸ್ಥೆ ಬಗ್ಗೆ ಮಗನೊಂದಿಗೆ ಚರ್ಚೆ- ಪೀಡೆ ತೊಲಗಿತೆಂಬ - ಅಣ್ಣ ಮನೆಗೆ ವಾಪಸ್ಸಾಗಬಹುದು ಎನ್ನುವ ಉತ್ಸಾಹ ಮಗಳದು- ಅಜ್ಜಿ ಆತ ಓದಿ ಹಾಳಾಗಿದ್ದು ಎನ್ನುವಳು - ಕೋಲ ನಡೆಸಲು ಅವರಿಗೆ ನಿಜವಾದ ಕಾರಣ ಸ್ಪಷ್ಟವಾಗುತ್ತೆ


ದೃಶ್ಯ ೧೬

ಸಂಜೆ

ಮನೆಯ ಹಿತ್ತಲು, ಕೋಲದ ಪಾತ್ರಿ, ಊರಿನ ಜನ

ಕೋಲದ ತಯಾರಿ- ಪಾಡ್ದನ- ಉನ್ಮಾದಕ್ಕಾಗಿ ಕುಣಿತ - ನಿಮ್ಮ ಮಗನು ಮೋಹದಿಂದ ಹೊರ ಬಂದಿದಾನೆ ಎನ್ನುವ ಪಾತ್ರಿ- ನಾನಾ ಹೇಳಿಕೆಗಳನ್ನು ನೀಡಿದ ನಂತರ - ಲೆಕ್ಚರ್ ಬಳಿ ಬಂದು ಬ್ರಾಹ್ಮಣ ಶಿಶುವನ್ನು ಕೊಂದ ದೋಷವಿರುವುದಾಗಿ ಹೇಳಿ ಪರಿಹಾರ


ದೃಶ್ಯ ೧೭

ರಾತ್ರಿ

ಮನೆಯೊಳಗೆ

ವಾಣಿ,ಆನಂದ್ (ಲೆಕ್ಚರ್)

ಕೋಲದಲ್ಲಿ ತಿಳಿದ ವಿಷಯದ ಬಗ್ಗೆ ವಾಣಿ ಪ್ರಶ್ನಿಸಿ ಜಗಳವೆಬ್ಬಿಸುತ್ತಾಳೆ- ಲೆಕ್ಚರ್ ನಿಗೆ ಅಕ್ರಮ ಸಂಬಂಧವಿರಬಹುದು - ತನಗೆ ಮೋಸ ಮಾಡಿದ್ದಾನೆಂದು ಆಕೆಯಲ್ಲಿ ಸಂಶಯ ಮೂಡುತ್ತೆ


ದೃಶ್ಯ ೧೮

ಗಲು

ಮನೆಯೊಳಗೆ

ವಾಣಿ,

ಲ್ಯಾಪ್ ಟಾಪಿನಲ್ಲಿ ಮೇಲ್ ಚೆಕ್ ಮಾಡುತ್ತಿರುತ್ತಾಳೆ - ನಕ್ಸಲ್ ಸಂಘಟನೆಯಿಂದ ಇ ಮೇಲ್ ಬಂದಿರುತ್ತೆ- ಅದರಲ್ಲಿ ಶುಭಾಳನ್ನ ಹುತಾತ್ಮ ನಾಯಕಿಯಾಗಿ - ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿ- ದೈಹಿಕವಾಗಿ ಬಳಸಲ್ಪಟ್ಟು- ಬರ್ಬರವಾಗಿ ಕೊಲೆಯಾಗಿರುವಳು ಎನ್ನುವುದಾಗಿ ವಿವರಿಸಿರುತ್ತಾರೆ- ಬೆಂಗಳೂರಿನಲ್ಲಿ ಅಟೋಪ್ಸಿಯಾದರೆ ಸತ್ಯ ಬಯಲಾಗುತ್ತೆ


ದೃಶ್ಯ ೧೯

ಹಗಲು

ದೇವಸ್ಥಾನ

ವಾಣಿ,ಅರ್ಚಕ,ಅರ್ಚಕನ ಮಗಳು


ತಮ್ಮ ಮಗನಿಗೂ ಶುಭಾಳಿಗೂ ಇದ್ದ ಸಂಬಂಧದ ಬಗ್ಗೆ ಮಾತು ಕತೆಯಾಗುತ್ತೆ. ಸೌಂದರ್ಯವತಿಯಾಗಿದ್ದ ಶುಭಾ ಸಾಕಷ್ಟು ಮಂದಿಯನ್ನು ಮರಳು ಮಾಡಿದ್ದಳು. ಆಕೆಯ ಶೀಲದ ಬಗ್ಗೆ ಅರ್ಚಕನ ಮಗಳು ಸಂಶಯ ವ್ಯಕ್ತ ಪಡಿಸ್ತಾಳೆ. ಕಾಲೇಜು ದಿನಗಳಲ್ಲೂ ಹೋರಾಟ ಅಂತ ಹಳ್ಳಿಗಳಲ್ಲಿ ತಿರುಗುತ್ತಿದ್ದಳು. ಎಲ್ಲೆಲ್ಲೋ ಮಲಗುತ್ತಿದ್ದಳು. ಲೆಕ್ಚರ್ ಆನಂದನಿಗೂ ಮೋಡಿ ಹಾಕಿದ್ದಳು. ಎನ್ನುವಳು


ದೃಶ್ಯ ೨೦

ರಾತ್ರಿ

ಲೆಕ್ಚರ್ ಕಾಲೇಜು ರೂಮಿನೊಳಗೆ

ವಾಣಿ,ಆನಂದ್,ಕೆಮರಾ ಮನ್


ನಕ್ಸಲ್ ಜಗದೀಶ್ ಹಾಗೂ ಶುಭಾ ಸಂಬಂಧ ಮೊದಲಾದವುಗಳ ಕುರಿತು ಒಂದು ಬೈಟ್ ಪಡೆಯುವುದಕ್ಕೆ ಆತನ ಕೋಣೆಗೆ ಬರ್ತಾಳೆ. ಆತನ ಕಸದ ಬುಟ್ಟಿಯಲ್ಲಿ ಕಾಗದ ಕಾಣುತ್ತೆ. ಆಜಾದ್ ಎಂಬ ಹೆಸರಿರುವ ಪತ್ರ. ಆಕೆಯ ಸಾವಿಗೆ ನೀನೇ ಕಾರಣ ಎಂದು ಇರುತ್ತೆ. ಬೈಟ್ ಆದ ನಂತರ ಕ್ಯಾಮರಾ ಮನ್ ಹೊರಟು ಹೋಗ್ತಾನೆ


ದೃಶ್ಯ ೨೧

ರಾತ್ರಿ

ಮನೆಯೊಳಗೆ

ವಾಣಿ

ಮೆಸೇಜ್ ಬರುತ್ತೆ ಕೆಮರಾಮನ್ ನಿಂದ. ಟಿವಿ ಹಾಕುತ್ತಾಳೆ. ಪ್ರತಿಸ್ಪರ್ಧಿ ಟಿವಿ ಚಾನೆಲ್ಲಿನಲ್ಲಿ ವರದಿ ಪ್ರಕಟವಾಗ್ತಿರುತ್ತೆ. ಶುಭಾ ಸತ್ತಾಗ ಪ್ರಗ್ನೆಂಟ್ ಆಗಿದ್ದಳು ಎಂದು. ಚರ್ಚೆ ನಡೆಯುತ್ತೆ, ನಕ್ಸಲರಲ್ಲಿ ಯಾರಾದರೂ ಅಪ್ಪ ಆಗಿರಬಹುದು ಎಂದು. ಜಗದೀಶ ಆಕೆ ಮದುವೆಯಾಗಿದ್ದರು ಎನ್ನುವ ಅಂಶವೂ ಚರ್ಚಿತವಾಗುತ್ತೆ,

ಬಾಸ್ ನಿಂದ ಫೋನ್... ಜಗದೀಶ್ ಪ್ರತಿಕ್ರಿಯೆ ಸಿಕ್ಕರೆ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಆಗುತ್ತೆ ಅಂತಾನೆ

ವಾಣಿ ಆನಂದನಿಗೆ ಜಗದೀಶನನ್ನು ಮೀಟ್ ಮಾಡೋಕೆ ಆಗುತ್ತ ಅಂತ ಕೇಳ್ತಾಳೆ. ಆತ ಅವಾಯ್ಡ್ ಮಾಡೋಕೆ ಟ್ರೈ ಮಾಡ್ತಾನೆ. ಆಕೆ ಪಟ್ಟು ಹಿಡಿದು ಕೇಳಿದಾಗ ಒಲ್ಲದ ಮನಸ್ಸಿನಿಂದ ಒಪ್ತಾನೆ.


ದೃಶ್ಯ ೨೨

ಹಗಲು

ಕಾಡಿನಲ್ಲಿ

ವಾಣಿ, ಆನಂದ್,ಜಗದೀಶ

ಮಾಧ್ಯಮಕ್ಕೆ ಹೇಳಿಕೆ ಎಂದು ನೀಡುವಾಗ ಜಗದೀಶ- ಜೊತೆಗಿದ್ದವರು- ಪೊಲೀಸರು ಆಕೆಯನ್ನು ಬಂಧಿಸಿಟ್ಟಿದ್ದರು- ಆಕೆಯನ್ನು ದೈಹಿಕವಾಗಿ ಬಳಸಿಕೊಂಡರು- ಅತ್ಯಾಚಾರದಿಂದಾಗಿ ಹುಟ್ಟಿದ ಮಗು- ಕಡೆಗೆ ಆಕೆಯನ್ನು ಗುಂಡಿಟ್ಟು ಕೊಂದು ಕಾಡಿನಲ್ಲಿ ಬಿಸಾಕಿದರು ಎನ್ನುವನು. ಪ್ರತೀಕಾರ ತೀರಿಸಿಕೊಳ್ಳುತ್ತದೆ ತಮ್ಮ ತಂಡ ಎನ್ನುವರು

ಜಗದೀಶನ ಜೊತೆ ತಿರುಗುತ್ತ ಮಾತನಾಡುವಾಗ ಆತನ ನೋಟ್ ಪುಸ್ತಕ ಓದ್ತಾಳೆ- ಆತನ ಹ್ಯಾಂಡ್ ರೈಟಿಂಗ್ ಪರಿಚಯ ಸಿಕ್ಕುತ್ತೆ ಆನಂದನಿಗೆ

ಪುಸ್ತಕ ಹಿಂದಿರುಗಿಸುವಾಗ ಶುಭಾಳ ಫೋಟೊ ಕೆಳಕ್ಕೆ ಬೀಳುತ್ತೆ - ಅದನ್ನು ಎತ್ತಿ ಜಗದೀಶನಿಗೆ ಕೊಡ್ತಾಳೆ- ಆತನ ಕಣ್ಣಲ್ಲಿ ನೀರಿರುತ್ತೆ


ದೃಶ್ಯ ೨೩

ಹಗಲು

ಕಾರಿನೊಳಗೆ ಹಿಂದಿರುಗುವಾಗ

ವಾಣಿ,ಆನಂದ್

ಆಕೆಯ ಮಗುವಿನ ತಂದೆ ಯಾರು ಎನ್ನುವ ಬಗ್ಗೆ ಚರ್ಚೆಯಾಗುತ್ತೆ. ಆಕೆಗೆ ಆದ ಅನ್ಯಾಯ ದೊಡ್ಡದು ಎಂದು ಈಕೆ ವಾದಿಸುತ್ತಾಳೆ. ಈತ ಆಕೆಯ ತಂದೆಯ ಹುಡುಕಾಟಕ್ಕೆ ಅರ್ಥವಿಲ್ಲ. ಆಕೆಯ ಸಾವನ್ನು ಬಳಸಿ ಸಿಂಪಥಿ ಗಿಟ್ಟಿಸಿಕೊಳ್ಳಬಹುದೆಂದು ವಿವರಿಸುವನು. ಆತ ಸಾಮಾಜಿಕ ಹೋರಾಟದಲ್ಲಿ ಇಂತಹ ಬಲಿದಾನ ಅಗತ್ಯ ಎನ್ನುವನು.

ಪತ್ರಕರ್ತನಿಗೆ ಸಾಮಾಜಿಕ ಕಾಳಜಿ ಮುಖ್ಯ ಎಂದು ತಿಳಿ ಹೇಳ್ತಾನೆ.


ದೃಶ್ಯ ೨೪

ರಾತ್ರಿ

ಮನೆಯೊಳಗೆ

ವಾಣಿ


ಬಾಸ್ ಜೊತೆ ಚಾಟ್ - ಆಕೆಯ ಮೇಲೆ ಅತ್ಯಾಚಾರವಾಗಿತ್ತು ಅದನ್ನ ಪರ್ಸನಲ್ ಸ್ಟೋರಿಯಾಗಿ ಮಾಡಬೇಕು. - ಬಾಸ್ ಹೇಳುತ್ತಾನೆ- ಪೋಸ್ಟ್ ಮಾರ್ಟೆಮ್ ರಿಪೋರ್ಟ್ ಅದನ್ನೇ ಆಕೆ ಗರ್ಭಿಣಿಯಾಗಿದ್ದಳೆಂದು ಹೇಳುತ್ತೆ ಅನ್ನುತ್ತಾನೆ- ಆದರೆ ಇದರಿಂದ ಪೊಲೀಸ್ ವರ್ಷನ್ ಸುಳ್ಳಾಗುತ್ತೆ- ನಕಲಿ ಎನ್ ಕೌಂಟರ್ ಎಂದಾಗುತ್ತೆ ಅಂತ- ಹೋಮ್ ಮಿನಿಸ್ಟರ್ ಕಡೆಯಿಂದ ಇನ್ಸ್ಟ್ರಕ್ಷನ್ ಬಂದಿದೆ- bury ಮಾಡ್ಬೇಕು ಅಂತ- ಸೋ ಫೈನಲ್ ಆಗಿ ರಿಪೋರ್ಟ್ ಕಳಿಸು- ಆನಂದ್ ಹೇಳಿಕೆ ರೆಕಾರ್ಡ್ ಮಾಡಿಸಿ-ವೀಕೆಂಡ್ ನಲ್ಲಿ ಕೆಮರಾಮನ್ ಕಳಿಸಿಕೊಡ್ತೀನಿ ಅಂತಾನೆ

ಕೂಡಲೇ ಆಕೆ ಬೌರಿಂಗ್ ಆಸ್ಪತ್ರೆಯ ಲೇಡಿ ಡಾಕ್ಟರ್ ಫ್ರೆಂಡ್ ಗೆ - ಈ ಮೇಲ್- ಶುಭಾಳ ಮಗು ಯಾರದೆಂದು ತಿಳಿಯಲು ಸಾಧ್ಯವಾ ಎಂದು ತಿಳಿಯುತ್ತಾಳೆ.

ಆಕೆ ಡಿ.ಎನ್.ಎ ಟೆಸ್ಟ್ ಮಾಡಬಹುದು ಅಂತಾಳೆ ಆದರೆ ಮ್ಯಾಚ್ ಮಾಡುವುದಕ್ಕೆ ಸ್ಯಾಂಪಲ್ಸ್ ಬೇಕು ಅಂತಾಳೆ

ಈಕೆ ಮಲಗುವಾಗ ಆನಂದನ ಬಾಚಣಿಕೆಯಲ್ಲಿನ ಕೂದಲು ಬಿಡಿಸಿ ಇಟ್ಟುಕೊಳ್ತಾಳೆ

ದೃಶ್ಯ ೨೫

ಹಗಲು

ಮನೆಯೊಳಗೆ

ವಾಣಿ,ಶುಭಾ ತಂದೆ


ಆಪ್ತವಾಗಿ ಮಾತಾಡಲು ಹೋಗ್ತಾಳೆ. ಮನೆಯಲ್ಲಿ ಓಡಾಡುವಾಗ ತಂದೆ ಆಕೆಯ ಬಗ್ಗೆ ಹೇಳ್ತಾನೆ. ಆಕೆ ಹಾಳಾದಳು ಅಂತ ದಯವಿಟ್ಟು ತೋರಿಸ್ಬೇಡಮ್ಮ ಅಂತ ಕೇಳ್ತಾನೆ. ಈಗ ಒಳ್ಳೆಯ ಹೆಸರು ಬಂದಿದೆ ಅವಳು ಸತ್ತು. ರಹಸ್ಯವಾಗಿಟ್ಟಿದ್ದ ಶುಭಾಳ ಪತ್ರಗಳನ್ನು ಕೊಡುತ್ತಾನೆ.

ಆಕೆಗೆ ಆನಂದನ ಮೇಲೆ ಪ್ರೀತಿ ಇದ್ದದ್ದು ತಿಳಿಯುತ್ತೆ.


ದೃಶ್ಯ ೨೬

ಸಂಜೆ

ತೋಟದಲ್ಲಿ

ವಾಣಿ,ಆನಂದ್,ಕೆಮರಾಮನ್


ಕಡೆಯ ರಿಪೋರ್ಟಿಗಾಗಿ ಬೈಟ್ ಪಡಿಯೋಕೆ ಕ್ಯಾಮರಾ ಇಡುವಾಗ ವಾಣಿಗೆ ಮೆಸೇಜ್ ಬರುತ್ತೆ. ಡಿ ಎನ್ ಎ ಮ್ಯಾಚ್ ಆಗಿದೆ ಅಂತ

ಆನಂದ ಮಾತನಾಡುತ್ತಾ ಶುಭಾಳ ಸಾವಿಗೆ ವ್ಯವಸ್ಥೆ ಹೇಗೆ ಕಾರಣ ಅಂತ ವಿವರಿಸ್ತಾನೆ.

ಸಂದರ್ಶನ ನಂತರ ತನಗೆ ಅರ್ಚಕರ ಮನೆಯಲ್ಲಿ ಕೆಲಸವಿದೆ. ಯಾವುದಕ್ಕೂ ಇರಲಿ ಶಾಂತಿ ಮಾಡಿಸು ಅಂತ ಅಪ್ಪ ಹೇಳಿದರು ಅನ್ನುತ್ತಾನೆ.

ಈಕೆ ಶೂಟಿಂಗ್ ಮುಗಿದ ನಂತರ. ಕ್ಯಾಮರಾ ಮನ್ ಗೆ ತಾನೂ ವಾಪಸ್ಸು ಬಂದು ಬಿಡುವುದಾಗಿ ಹೇಳ್ತಾಳೆ.

ದೃಶ್ಯ ೨೭

ರಾತ್ರಿ

ಮನೆಯೊಳಗೆ

ಆನಂದ್

ಮನೆಗೆ ಬಂದಾಗ ವಾಣಿ ಬೆಂಗಳೂರಿಗೆ ವಾಪಸ್ ಹೋಗಿರುವುದು ತಿಳಿಯುತ್ತೆ. ಟಿವಿ ಆನ್ ಮಾಡಿದಾಗ ವಾಣಿಯ ರಿಪೋರ್ಟ್ ಬರ್ತಿರುತ್ತೆ.

ಟಿಪಾಯ್ ಮೇಲೆ ಲಕೋಟೆಯೊಂದಿರುತ್ತೆ ಅದರಲ್ಲಿ ವಾಣಿಯ ಎಂಗೇಜ್ ಮೆಂಟ್ ರಿಂಗ್ ಇರುತ್ತೆ.

ಜೊತೆಗೆ ವಿದಾಯದ ಪತ್ರ.

Saturday, December 11, 2010

ವಾರಾಂತ್ಯದ ಭೇಟಿ 3

ಹಿಂದಿನ ಭೇಟಿಯ ಸಂದರ್ಭದಲ್ಲಿ ನಾವು ಚರ್ಚಿಸಿ ಒಪ್ಪಿಕೊಂಡಿದ್ದ ಕಥಾ ಹಂದರವನ್ನು ಒಂದು ಸಾಲಿನ ಸ್ಕ್ರಿಪ್ಟ್ ಆಗಿ ಕಟ್ಟಿಕೊಡಲಿಕ್ಕೆ ತುಂಬಾ ಕಷ್ಟ ಎನ್ನುವ ಅರಿವಾಯಿತು. ಎರಡು ಪಾತ್ರಗಳನ್ನು ಇಟ್ಟುಕೊಂಡು ಇಡೀ ಚಿತ್ರಕತೆಯನ್ನು ಹೆಣೆಯುವುದಾಗಿ ನಾವು ಯೋಜಿಸಿಕೊಂಡಿದ್ದೆವು. ಆದರೆ ಎರಡು ಪಾತ್ರಗಳು ಇಡೀ ಕ್ಯಾನ್ವಾಸನ್ನು ಆಕ್ರಮಿಸಿಕೊಳ್ಳುವಾಗ ನಮ್ಮ ಚಿತ್ರಕತೆ ವಿಪರೀತ ನಾಟಕೀಯವಾಗಿರಬೇಕಾದ ಅನಿವಾರ್ಯತೆ ಕಾಡುತ್ತದೆ. ನಾಟಕೀಯತೆ ಅತಿಯಾದಷ್ಟು ಚಿತ್ರಕತೆ ವಾಸ್ತವದಿಂದ ದೂರ ಹೋಗುತ್ತದೆ ಹಾಗೂ ಚಿತ್ರಕತೆ ಪೇಲವವಾಗುತ್ತದೆ ಎನ್ನಿಸಿತು. ಹೀಗಾಗಿ ನಾವು ಎರಡು ಪಾತ್ರಗಳ ಕತಾ ಹಂದರವನ್ನು ಕೈಬಿಟ್ಟು ವಿಸ್ತಾರವಾದ ಕ್ಯಾನ್ವಾಸ್ ಒದಗಿಸುವಂತಹ ಕತಾಹಂದರವನ್ನು ರೂಪಿಸಿಕೊಂಡಿದ್ದೇವೆ. ಹೆಚ್ಚು ಪಾತ್ರಗಳನ್ನು ಕಟ್ಟಿಕೊಂಡಿದ್ದೇವೆ.

ಹಿಂದಿನ ಭೇಟಿಯ ಸಂದರ್ಭದಲ್ಲಿ ನಾವು ಚರ್ಚಿಸಿದ ಹಾಗೂ ಈಗ ಕೈಬಿಟ್ಟ ಕತಾ ಹಂದರವನ್ನು ಭೂತಗನ್ನಡಿಯಲ್ಲಿ ದಾಖಲಿಸುತ್ತಿದ್ದೇವೆ.

ಮಾತೇ ಆಡದ ಪೊಲೀಸ್ ಅಧಿಕಾರಿಯ ಕಿಡ್ನಾಪ್ ಆಗುತ್ತದೆ. ವಿಪರೀತ ವಾಚಾಳಿ, ಸೈದ್ಧಾಂತಿಕವಾಗಿ ವಿಪರೀತ ಪ್ರಭಾವಿತನಾದ ನಕ್ಸಲೈಟ್ ಸುಪರ್ದಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಬಿಡಲಾಗುತ್ತದೆ. ಆತನ ಬಳಿ ಒಂದು ಮೊಬೈಲ್ ಫೋನ್ ಇರುತ್ತದೆ. ಆದರೆ ಅದಕ್ಕೆ ಇನ್ ಕಮಿಂಗ್ ಮಾತ್ರ ಇರುತ್ತದೆ.

ನಕ್ಸಲೈಟ್ ನಾಯಕರು ತಮ್ಮ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಪೊಲೀಸ್ ಅಧಿಕಾರಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ಸರಕಾರದ ಜೊತೆಗೆ ಮಾತುಕತೆ ನಡೆಸುತ್ತಿರುತ್ತದೆ. ಫೋನ್ ಮೂಲಕ ಸೂಚನೆಗಳನ್ನು ನೀಡುತ್ತಿರುತ್ತಾರೆ.

ಒಂದು ದಿನ ಚೆನ್ನಾಗಿ ನೋಡಿಕೊಳ್ಳುವ, ಹಿಂಸಿಸಿ ಬಾಯಿ ಬಿಡಿಸುವ, ಆತನ ಯೋಗಕ್ಷೇಮಕ್ಕಾಗಿ ಆಡಿಯೋ ಟೇಪ್, ವಿಡಿಯೋ ಫೂಟೇಜ್ ಕಳಿಸುವ ಸೂಚನೆ ಸಿಕ್ಕುತ್ತದೆ.

ವಾಚಾಳಿಯಾದ ನಕ್ಸಲೈಟ್ ಮಾತಾಡಲು ಯಾರೊಬ್ಬರೂ ಇರದೆ, ಮೊಬೈಲ್ ನಲ್ಲೂ ಮಾತಾಡುವ ಅವಕಾಶವಿಲ್ಲದೆ ಮೌನಿ ಪೊಲೀಸ್ ಅಧಿಕಾರಿಯನ್ನೇ ಮಾತಿಗೆಳೆಯುತ್ತಾನೆ, ಮಾತಾಡುತ್ತ ಮಾತಾಡುತ್ತ ಅವರಿಬ್ಬರ ನಡುವೆ ಸ್ನೇಹ ಬೆಳೆಯುತ್ತೆ.

ಹೀಗಿರುವಾಗ ಆ ಪೊಲೀಸ್ ಅಧಿಕಾರಿಯನ್ನು ಕೊಂದು ಬರುವ ಸೂಚನೆ ಮೊಬೈಲ್ ನಲ್ಲಿ ಇವನಿಗೆ ಸಿಕ್ಕುತ್ತೆ.

ಈ ವಾರದ ಭೇಟಿಯಲ್ಲಿ ನಿಷ್ಕರ್ಷಿಸಿದ ಹೊಸ ಕತಾ ಹಂದರದ ಮೇಲೆ ಕೆಲಸ ನಡೆಯುತ್ತಿದೆ. ಇನ್ನು ಎರಡುವಾರದಲ್ಲಿ ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರು ಮಾಡಬೇಕೆಂದು ಯೋಜನೆ ಹಾಕಿಕೊಳ್ಳಲಾಗಿದೆ.

Friday, December 3, 2010

ಭೇಟಿ ಮುಂದೂಡಿಕೆ

ಕಳೆದ ವಾರದ ಭೇಟಿಯಲ್ಲಿ ನಾವು ನಿಷ್ಕರ್ಷಿಸಿದ ಕತೆಯನ್ನು ಒಂದು ಸಾಲಿನ ಸ್ಕ್ರಿಪ್ಟ್ ಆಗಿ ಬರೆದುಕೊಂಡು ಬರುವುದಕ್ಕೆ ನಿರ್ಧರಿಸಲಾಗಿತ್ತು. ಆದರೆ ಕಾರ್ಯ ಬಾಹುಳ್ಯದಿಂದಾಗಿ ಅದು ಪೂರ್ಣವಾಗಿಲ್ಲ.

ಹೀಗಾಗಿ ಈ ಶನಿವಾರದ ಭೇಟಿಯನ್ನು ರದ್ದು ಪಡಿಸಿ ಮುಂದಿನ ಶನಿವಾರದೊಳಗೆ ಆ ಕೆಲಸವನ್ನು ಪೂರ್ಣಗೊಳಿಸಿ ಭೇಟಿಯಾಗುವುದಾಗಿ ತೀರ್ಮಾನಿಸಲಾಗಿದೆ.

ಡಿಸೆಂಬರ್ ಹನ್ನೊಂದನೆಯ ತಾರೀಖು ಭೇಟಿಯಾಗುವ ಸಂದರ್ಭದಲ್ಲಿ ಒಂದು ಸಾಲಿನ ಸ್ಕ್ರಿಪ್ಟ್ ರೆಡಿಯಾಗಿರಬೇಕು ಎಂದು ಈ ಮೂಲಕ ತಿಳಿಸಲಾಗುತ್ತಿದೆ.

Sunday, November 28, 2010

ನಮ್ಮ ತಂಡ

ಕೇಂದ್ರ ಸಮಿತಿಯ ಸದಸ್ಯರು:


ಕಿರಣ್.ಎಂ
ವಾಸ: ಬೆಂಗಳೂರು
ವೃತ್ತಿ: ಇಂಡಿಯಾ ಇನ್ಫೋ ಲೈನ್ ಉದ್ಯೋಗಿ
ಫೇಸ್ ಬುಕ್






Link

ಸುಪ್ರೀತ್.ಕೆ.ಎಸ್
ವಾಸ: ಬೆಂಗಳೂರು
ಇಂಜಿನಿಯರಿಂಗ್ ವಿದ್ಯಾರ್ಥಿ, ಯವಿಸಿಇ ಕಾಲೇಜು
ಫೇಸ್ ಬುಕ್









ರೂಪಲಕ್ಷ್ಮಿ.ಎಂ.ಎಸ್












ಮುಕುಂದ್













ಮಂಸೋರೆ


ವೃತ್ತಿ: ದೃಶ್ಯ ಕಲಾವಿದ
ಆಸಕ್ತಿ:
ಪ್ರತಿ ಮುಂದಿನ
ಕ್ಷಣ



ಹೇಮ ಪವಾರ್






















ಅವಿನಾಶ್.ಜಿ

Saturday, November 27, 2010

ವಾರಾಂತ್ಯದ ಭೇಟಿ 2

ಎರಡನೆಯ ವಾರಾಂತ್ಯದ ಭೇಟಿಯಲ್ಲಿ ಸೇರಿದ ಸದಸ್ಯರು:

ಸುಪ್ರೀತ್
ಕಿರಣ್
ರೂಪಲಕ್ಷ್ಮಿ
ಹೇಮಾ ಪವಾರ್
ಅವಿನಾಶ್.ಜಿ

ಸ್ಥಳ ಹಾಗೂ ಸಮಯ:

ಸಂಸ ಬಯಲು ರಂಗ ಮಂದಿರ, ಬೆಂಗಳೂರು
ಮಧ್ಯಾನ ಮೂರು ಗಂಟೆಯಿಂದ ಐದುವರೆವರೆಗೆ.

ಭೇಟಿಯ ಸಂದರ್ಭದಲ್ಲಿ ಚರ್ಚಿಸಿದ ವಿಷಯ:

ಪ್ರತಿಯೊಬ್ಬರೂ ತಾವು ಹಿಂದಿನ ವಾರ ತಯಾರು ಮಾಡಿದ ಕತಾ ಹಂದರವನ್ನು ಹಂಚಿಕೊಂಡರು.
ಪ್ರತಿಯೊಂದು ಕತೆಯ ತಪ್ಪು ಒಪ್ಪುಗಳು, ಶಕ್ತಿ, ಬಲಹೀನತೆಗಳನ್ನು ಚರ್ಚಿಸಲಾಯಿತು.
ಚಿತ್ರೀಕರಣದಲ್ಲಿ ನಮಗೆ ಎದುರಾಗಬಹುದಾದ ಸಂಪನ್ಮೂಲದ ಮಿತಿ, ನಮ್ಮ ಸಾಮರ್ಥ್ಯವನ್ನು ಕುರಿತು ಆಲೋಚಿಸಿ ಕತೆಯನ್ನು ಆಯ್ಕೆ ಮಾಡುವುದೆಂದು ತೀರ್ಮಾನಿಸಲಾಯ್ತು.
ಸರ್ವಾನುಮತದ ಮೂಲಕ ಕಿರಣ್ ಬಿಡಿಸಿಟ್ಟ ಕತಾ ಹಂದರವನ್ನು ಒಪ್ಪಿಕೊಳ್ಳಲಾಯ್ತು.

ಎರಡು ಸದೃಢವಾದ ಪಾತ್ರಗಳ ಸುತ್ತ ಸುತ್ತುವ ಕತೆಯನ್ನು ಕಿರಣ್ ಮತ್ತೊಮ್ಮೆ ಸದಸ್ಯರಿಗೆಲ್ಲ ಹೇಳಿದರು. ಸ್ಥಳದಲ್ಲೇ ಉಳಿದವರೆಲ್ಲ ಆ ಕತೆಯನ್ನು ನಾಲ್ಕೈದು ಸಾಲುಗಳಲ್ಲಿ ತಮ್ಮ ಗ್ರಹಿಕೆಗೆ ತಕ್ಕಂತೆ ಟಿಪ್ಪಣಿ ಮಾಡಿಕೊಂಡರು.

ಮುಂದಿನ ವಾರಾಂತ್ಯದ ಭೇಟಿಯ ವೇಳೆಗೆ ಸ್ಕ್ರಿಪ್ಟ್ ಜವಾಬ್ದಾರಿಯನ್ನು ಹೊತ್ತಿರುವ ಸದಸ್ಯರು ದೃಶ್ಯಗಳಾಗಿ ವಿಂಗಡಿಸಿದ ಒಂದು ಸಾಲಿನ ಕತೆಯನ್ನು ತಯಾರು ಮಾಡಿಕೊಳ್ಳಬೇಕು ಎಂದು ನಿರ್ಧರಿಸಲಾಯ್ತು.

ಸದ್ಯ ಸರ್ವರ ಒಪ್ಪಿಗೆಯನ್ನು ಪಡೆದ ಕತಾ ಹಂದರದ ಚಿಕ್ಕ ತುಣುಕನ್ನು ಕೇಂದ್ರ ಸಮಿತಿಯ ಸದಸ್ಯರ ವೈಯಕ್ತಿಕ ಮೇಲ್ ಐಡಿಗಳಿಗೆ ಕಳಿಸಲಾಗುವುದು. ಕತೆ ಒಪ್ಪಿತವಾಗಿ ಚಿತ್ರಕತೆಯ ಮೊದಲ ಡ್ರಾಫ್ಟ್ ತಯಾರಾದಾಗ ಕತಾ ಹಂದರವನ್ನು ಇಡಿಯಾಗಿ ‘ಭೂತಗನ್ನಡಿ’ ಬ್ಲಾಗಿನಲ್ಲಿ ಪ್ರಕಟಿಸಲಾಗುವುದು.

ನಮ್ಮ ಕೆಲಸದ ಕುರಿತ ಅಪ್ ಡೇಟ್ ಗಳಿಗಾಗಿ ನಮ್ಮನ್ನು ಟ್ವಿಟರ್ ನಲ್ಲಿ ಫಾಲೋ ಮಾಡಬಹುದು.
ಫೇಸ್ ಬುಕ್ಕಿನಲ್ಲಿ ನಮ್ಮ ಪುಟಕ್ಕೆ ಸಂದರ್ಶಿಸಿ ಸಂಪರ್ಕದಲ್ಲಿರಬಹುದು.

Friday, November 26, 2010

ಕತಾ ಹಂದರದ ಚರ್ಚೆ

ಕಳೆದ ವಾರದ ಭೇಟಿಯಲ್ಲಿ ನಾವು ಕೇಂದ್ರ ಸಮಿತಿಯನ್ನು ಒಟ್ಟುಗೂಡಿಸಿ ಹಲವು ನಿಬಂಧನೆಗಳನ್ನು ಚರ್ಚಿಸಿದ್ದೆವು. ಈ ಸಭೆಯಲ್ಲಿ ಮುಂದಿನ ವಾರ ಕತೆಯ ರೂಪು ರೇಷೆ ಹಾಗೂ ಕಥಾವಸ್ತುವನ್ನು ಕುರಿತು ಸಿದ್ಧತೆ ನಡೆಸಿಕೊಂಡು ಬರಬೇಕೆಂದು ತೀರ್ಮಾನಿಸಲಾಗಿತ್ತು.

ಈ ನಿಟ್ಟಿನಲ್ಲಿ ನಾಳೆ ಶನಿವಾರ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ಬಳಿ ನಮ್ಮ ತಂಡವು ಭೇಟಿಯಾಗಲಿದೆ.

ಭಾಗವಹಿಸುತ್ತಿರುವವರು:

ಕಿರಣ್
ಸುಪ್ರೀತ್.ಕೆ.ಎಸ್
ರೂಪಲಕ್ಷ್ಮಿ.ಎಂ.ಎಸ್
ಮುಕುಂದ್

ಭೇಟಿಯ ಆಗುಹೋಗುಗಳನ್ನು ಹಾಗೂ ಒಟ್ಟು ನಿರ್ಧಾರಗಳನ್ನು ಟ್ವಿಟರಿನಲ್ಲಿ ಅಪ್ಡೇಟ್ ಮಾಡಲಾಗುವುದು.

Saturday, November 20, 2010

ಕೇಂದ್ರ ಸಮಿತಿಯ ಘೋಷಣೆ ಹಾಗೂ ನಿಬಂಧನೆಗಳು

ಸಿನೆಮಾ ನಿರ್ಮಾಣ ತಂಡದ ಕೇಂದ್ರ ಸಮಿತಿಯಲ್ಲಿರುವ ಸದಸ್ಯರ ಪಟ್ಟಿ ಹೀಗಿದೆ:

ಮಂಜುನಾಥ್.ಎಸ್

ಕಿರಣ್.ಎಂ

ರೂಪಾ ರಾಜೀವ್

ಹೇಮಾ ಪವಾರ್

ಸುಪ್ರೀತ್.ಕೆ.ಎಸ್

ಅವಿನಾಶ್.ಜಿ

ಮುಕುಂದ್

ಕೇಂದ್ರ ಸಮಿತಿಯ ಸದಸ್ಯರ ಕರ್ತವ್ಯ ಹಾಗೂ ಅಧಿಕಾರಗಳು:

* ವೃತ್ತಿ, ವೈಯಕ್ತಿಕ, ಸಾಂಸಾರಿಕ ಜವಾಬ್ದಾರಿಗಳನ್ನು ಹೊರತುಪಡಿಸಿ ಪ್ರಾಜೆಕ್ಟ್ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಪಕ್ಷ ಆರು ತಿಂಗಳು ಬದ್ಧವಾಗಿರಬೇಕು.

* ತಂಡದಿಂದ ಹೊರಹೋಗುವ ಸಂದರ್ಭದಲ್ಲಿ ಸೂಕ್ತವಾದ ಬದಲಿ ವ್ಯಕ್ತಿಯನ್ನು ವ್ಯವಸ್ಥೆ ಮಾಡಿಯೇ ಹೊರಡಬೇಕು.

* ತಂಡದ ವತಿಯಿಂದ ತೆರೆದ ಬ್ಯಾಂಕ್ ಖಾತೆಯನ್ನು ತೆರೆದು ಪ್ರತಿ ಸದಸ್ಯರು ತಲಾ ಹತ್ತು ಸಾವಿರ ರುಪಾಯಿಗಳನ್ನು ಠೇವಣಿಯಾಗಿ ಇಡಬೇಕು. ಈ ಮೊತ್ತವನ್ನು ಯಾವುದೇ ಕಾರಣಕ್ಕೆ ಹಿಂದಿರುಗಿಸಲಾಗುವುದಿಲ್ಲ.

* ವೈಯಕ್ತಿಕ ದೋಷಾರೋಪಣೆ, ಮನಸ್ಥಾಪ, ಜಗಳಗಳ ಕಾರಣ ಮುಂದೊಡ್ಡಿ ಪ್ರಾಜೆಕ್ಟಿನಿಂದ ಹೊರಹೋಗುವುದಿಲ್ಲ ಎಂದು ಲಿಖಿತ ಹೇಳಿಕೆಯ ಮೂಲಕ ದೃಢಪಡಿಸಬೇಕು.

* ಸಮಿತಿಯ ಕಲಾಪಗಳಲ್ಲಿ ಚರ್ಚಿಸಿ ವಿಂಗಡಿಸಿ, ಅಂಗೀಕರಿಸಿದ ಕರ್ತವ್ಯ/ಕೆಲಸಗಳನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಸರ್ವರೂ ಸಮ್ಮತಿಸಿದ ಹೈರಾರ್ಕಿಗೆ ಚ್ಯುತಿ ಬರದ ಹಾಗೆ ಜವಾಬ್ದಾರಿ ಹಾಗೂ ಅಧಿಕಾರ ಅರಿತು ಕೆಲಸ ಮಾಡಬೇಕು.

* ಈ ಎಲ್ಲಾ ಚಟುವಟಿಕೆಗಳು ದೃಶ್ಯ ಸಂಸ್ಕೃತಿಗೆ ಮಾತ್ರ ಸಂಬಂಧ ಪಟ್ಟಿರುವಂತೆ ಎಚ್ಚರವಹಿಸಬೇಕು. ಸಾಹಿತ್ಯ ಮೊದಲಾದ ಬೇರಾವ ಸಂಗತಿಯೂ ಇದರಲ್ಲಿ ಮಿಶ್ರಣವಾಗಬಾರದು.

* ಕೇಂದ್ರ ಸಮಿತಿಯ ಸದಸ್ಯರಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಬೇಧ ಮಾಡಿದಾಗ ನಿರ್ಣಾಯಕ ಅಭಿಪ್ರಾಯವನ್ನು ಕೊಡುವ ಅಧಿಕಾರವನ್ನು ಶ್ರೀ ಶೇಖರ್ ಪೂರ್ಣರಿಗೆ ವಹಿಸಲಾಗಿದೆ. ಅವರ ತೀರ್ಮಾನವೇ ಅಂತಿಮ ಎಂದು ಪರಿಗಣಿಸಬೇಕು. ಅದಕ್ಕೆ ಬದ್ಧರಾಗಿರಬೇಕು.

* ಎಲ್ಲಾ ಚಟುವಟಿಕೆಗಳು ಸಂವಾದ ಡಾಟ್ ಕಾಮ್ ಆಶಯದಡಿಯಲ್ಲಿ ನಡೆಯುವುದು. ನಮ್ಮ ತಂಡದ ಪ್ರಾಡಕ್ಟ್ ಸಂವಾದ ಡಾಟ್ ಕಾಮ್ ನ ಆಸ್ತಿಯಾಗಿರುತ್ತದೆ.

Friday, November 19, 2010

ವಾರಾಂತ್ಯದ ಭೇಟಿ

ಕೆಲಸದ ಒತ್ತಡಗಳಿಂದಾಗಿ ಹಲವು ದಿನಗಳಿಂದ ಭೂತಗನ್ನಡಿ ಬ್ಲಾಗ್ ನ್ನು ಅಪ್ ಡೇಟ್ ಮಾಡಲಾಗಿಲ್ಲ.

ಹಿಂದಿನ ಪೋಸ್ಟಿನಲ್ಲಿ ಪಟ್ಟಿ ಮಾಡಿದ ಬರಹಗಳು ಶೀಘ್ರವೇ ಪ್ರಕಟವಾಗಲಿವೆ.

ಈ ಶನಿವಾರ ಸಂಜೆ ನಮ್ಮ ತಂಡ ಭೇಟಿಯಾಗಿ ಮುಂದಿನ ಕಾರ್ಯ ಕಲಾಪಗಳ ಕುರಿತು ಯೋಜನೆ ಹಾಕಿಕೊಳ್ಳಲಿದೆ. ಈ ಭೇಟಿಯಲ್ಲಿನ ವಿದ್ಯಮಾನಗಳ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಟ್ವಿಟರ್ ನಲ್ಲಿ ಅಪ್ ಡೇಟುಗಳನ್ನು ಪ್ರಕಟಿಸಲಾಗುವುದು. ಟ್ವಿಟರ್ ಸಂದೇಶಗಳನ್ನು ಪಡೆಯುವುದಕ್ಕೆ ಭೂತಗನ್ನಡಿಯ ಟ್ವಿಟರ್ ಪುಟಕ್ಕೆ ಭೇಟಿ ನೀಡಿ.

Thursday, August 12, 2010

ಮುಂದಿನ ಬದಲಾವಣೆ...

ಸಂಪಾದಕ


ಅನುಭವವಿಲ್ಲದ ನಾವೊಂದಿಷ್ಟು ಮಂದಿ ಸೇರಿಕೊಂಡು ಸಿನೆಮಾ ಮಾಡಬೇಕೆಂಬ ಹಂಬಲ ಬಲವಾದದ್ದು ಹೇಗೆ? ಯಾವ ಉದ್ದೇಶದಿಂದಾಗಿ ನಮ್ಮ ತಂಡವು ಒಂದುಗೂಡಿತು? ಮೊದಲ ಭೇಟಿಯ ಚರ್ಚೆಯಲ್ಲಿ ಬಂದು ಹೋದ ವಿಷಯಗಳೇನು ಎನ್ನುವ ವಿವರಗಳನ್ನು ದಾಖಲಿಸುವ ಬರಹವನ್ನು ಸಧ್ಯದಲ್ಲಿಯೇ ಪೋಸ್ಟ್ ಮಾಡಲಾಗುತ್ತದೆ. ಅದರ ನೆರವಿನಿಂದ ನಮ್ಮ ಕೆಲಸದ ಪ್ರೇರಣೆಯೇನು, ನಮ್ಮ ತಂಡದ ದೃಷ್ಟಿಕೋನವೇನೆಂಬುದು ಸಂಪೂರ್ಣವಾಗಿಯಲ್ಲದಿದ್ದರೂ ತಕ್ಕಮಟ್ಟಿಗೆ ದಾಖಲಿಸಿದ ಹಾಗಾಗುತ್ತದೆ.

ಸಿನೆಮಾ ಮಾಡಬೇಕೆಂಬ ತೀರ್ಮಾನವನ್ನು ಮಾಡಿದ ನಂತರ ಹಲವು ಬಾರಿ ಭೇಟಿಯಾಗಿ ನಮ್ಮ ತಂಡ ಚರ್ಚೆಗಳನ್ನು ನಡೆಸುತ್ತಿತ್ತು. ಟೌನ್ ಹಾಲಿನ ಬದಿಯ ಕಲ್ಲು ಹಾಸುಗಳು, ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನಿನ ಕಲ್ಲು ಕಟ್ಟೆಗಳು ನಮ್ಮ ಮಾತುಕತೆ, ಹರಟೆ, ವಾದಗಳಿಗೆ ಸಾಕ್ಷಿಯಾಗಿವೆ. ಅನಂತರ ಮಾಡುವ ಕೆಲಸದ ಬಗ್ಗೆ ಸ್ವಲ್ಪ ಸ್ಪಷ್ಟತೆ ಸಿಕ್ಕನಂತರ ಸ್ಥೂಲವಾಗಿ ಕಟ್ಟಿಕೊಂಡಿದ್ದ ವಿಷಯಕ್ಕೆ ಪೂರಕವಾದ ವಸ್ತುವನ್ನು ಹುಡುಕಿಕೊಂಡು ಮೂರು ದಿನಗಳ ಪ್ರವಾಸವನ್ನು ಕೈಗೊಂಡೆವು. ತೀರ್ಥಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ತಿರುಗಾಡಿ ಅಲ್ಲಿನ ಜನರನ್ನು, ಬಿರು ಮಳೆಯನ್ನು, ಹಸಿರು ಕಾಡನ್ನು, ಸೇತುವೆ, ನದಿಗಳನ್ನು ಮಾತನಾಡಿಸಿಕೊಂಡು ಹಿಂದಿರುಗಿದೆವು. ಈ ಪ್ರವಾಸದ ಕುರಿತಾದ ಟಿಪ್ಪಣಿಯೂ ಸಹ ಮುಂದಿನ ದಿನಗಳಲ್ಲಿ ಈ ಬ್ಲಾಗಿನಲ್ಲಿ ಪ್ರಕಟವಾಗುತ್ತದೆ.

ವಸ್ತುವಿನ ಕುರಿತು ಸ್ಪಷ್ಟತೆ ಸಿಕ್ಕಿತು ಎಂಬ ಭ್ರಮೆ ಒಂದಿಬ್ಬರಿಗೆ ಆವರಿಸಿಕೊಂಡ ಕಾವಿನಲ್ಲೇ ಕತೆಯನ್ನು ಹೆಣೆಯುವ ಕಾಯಕಕ್ಕೆ ಮುಂದಾದೆವು. ಅಲ್ಲಿಯವರೆಗೆ ಕತೆಗೂ ಚಿತ್ರಕತೆಗೂ ಹೆಚ್ಚೆಂದರೆ ಎರಡು ಅಕ್ಷರಗಳ ವ್ಯತ್ಯಾಸವಿದೆ ಎಂದಷ್ಟೇ ಭಾವಿಸಿದ್ದ ನಮಗೆ ಅವುಗಳ ನಡುವಿನ ಅಂತರ ಭೂಮಿ ಆಕಾಶದಷ್ಟು ಎನ್ನುವ ಸತ್ಯ ಗೋಚರವಾಗ್ತಾ ಹೋಯ್ತು. ಬರೆಯಲು ತೊಡಗಿದರೆ ಪಾತ್ರಗಳ ಒಳತೋಟಿ, ಮನೋವ್ಯಾಪಾರಕ್ಕೇ ಪೆನ್ನು ಸಿಲುಕಿಸಿಕೊಂಡು ಒದ್ದಾಡುವ ಸಮಸ್ಯೆ ಕೆಲವೇ ದಿನಗಳಲ್ಲಿ ನಮ್ಮೆಲ್ಲರ ಗಮನಕ್ಕೆ ಬಂದಿತು. ಕಾದಂಬರಿ, ಕತೆಗಳನ್ನು ಓದಿಕೊಂಡವರಿಗಂತೂ ಸಿನೆಮಾ ಸ್ರ್ಕೀನ್ ಪ್ಲೇ ಓದುವುದು ಧರ್ಮಸ್ಥಳದ ಬಸ್ಸಲ್ಲಿ ಕೂತು ಪ್ಯಾರಿಸಿನ ರೇಲ್ವೇ ಟೈಮ್ ಟೇಬಲ್ ಓದಿದಂತಾಗುತ್ತಿತ್ತು. ಶುಷ್ಕವಾದ ಭಾಷೆಯಲ್ಲಿ ಚಿತ್ರಕತೆಯನ್ನು ಬರೆಯುವುದೇ ಸವಾಲಾಗಿ ಹೋಗಿತ್ತು. ಈ ಅನುಭವದ ನಿರೂಪಣೆಯ ಬರಹವೂ ಸಹ ಸಧ್ಯದಲ್ಲೇ ಪ್ರಕಟಿಸಲಿದ್ದೇವೆ.

ಅನನುಭವಿಗಳಾದ ಅಮೆಚ್ಯೂರ್ ಗಳ ತಂಡ ಯಾವುದಕ್ಕೇ ಕೈ ಹಾಕಿದರೂ ಒಂದು ಅಪಾಯ ಕಟ್ಟಿಟ್ಟ ಬುತ್ತಿ. ನಾವು ಯಾವ ಸ್ಥಾಪಿತ ಕ್ಷೇತ್ರದ ನಿಯಮಾವಳಿಗಳನ್ನು ಮುರಿಯ ಹೊರಟಿದ್ದೇವೆಯೋ, ಯಾವ ಸ್ಟೀರಿಯೋಟೈಪುಗಳಿಂದ ರೋಸು ಹೋಗಿ ಹೊಸ ಸಾಹಸಕ್ಕೆ ಕೈಹಾಕಿದ್ದೇವೆಯೋ, ತಾವುದರಿಂದ ತಪ್ಪಿಸಿಕೊಳ್ಳಲೆಂದು ಓಡುತ್ತಿದ್ದೇವೆಯೋ ಅದೇ ಗುಂಡಿಗೆ ಬಂದು ಬೀಳುವುದು... ಅಮೆಚ್ಯೂರ್ ಗಳಾದವರು ಅನುಕರಣೆಯ ಸಂಕೋಲೆಗೆ ಸಿಲುಕಿಕೊಂಡು ಬಿಡುವುದು. ಹೀಗಾಗದಿರುವುದಕ್ಕೆ ಟೀಮ್ ಲೀಡರ್ ಆಗಾಗ ಅಂಟಿಕೊಂಡ ತುಕ್ಕನ್ನು ಕೆರೆದು ತೆಗೆಯುತ್ತಿರಬೇಕಾಗುವುದು. ಶೇಖರ್ ಪೂರ್ಣರೊಂದಿಗೆ ಪ್ರತಿ ಬಾರಿ ಮಾತನಾಡುವಾಗಲೂ ನಾವು ಹೀಗೆ ಸ್ವಯಾರ್ಜಿತವಾಗಿ ಸಂಪಾದಿಸಿದ ತುಕ್ಕು ಕೆರೆದು ತೆಗೆಸಿಕೊಂಡ ಅನುಭವವಾಗುತ್ತಿತ್ತು. ಈ ಕೆಲಸದಲ್ಲಿ ತೊಡಗಿಕೊಂಡಾಗಿನಿಂದ ನಮ್ಮ ಗ್ರಹಿಕೆ, ದೃಷ್ಟಿಕೋನಗಳಲ್ಲಿ ಆದ ಬದಲಾವಣೆಗಳನ್ನೆಲ್ಲಾ ದಾಖಲಿಸಬೇಕೆನ್ನುವ ಉದ್ದೇಶದಿಂದ ಗೀಚಿದ ಟಿಪ್ಪಣಿಗಳೂ ಸಹ ಪ್ರಕಟವಾಗಲಿವೆ.

Saturday, July 31, 2010

ಭೂತಗನ್ನಡಿ ಶುರುವಾದದ್ದು ಹೀಗೆ...

ಸುಪ್ರೀತ್.ಕೆ.ಎಸ್


ದಿನೇದಿನೇ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ನಾನಾ ಅವಕಾಶಗಳು ತೆರೆದುಕೊಳ್ಳುತ್ತಿವೆ. ಹಿಂದೆಂದೂ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಕೆಲಸಗಳು ಇಂದು ಮಾಹಿತಿ ತಂತ್ರಜ್ಞಾನದ ನೆರವಿನಿಂದ ಸಾಧ್ಯವಾಗುವಂತಾಗಿದೆ. ಈ ಬೆಳವಣಿಗೆಯನ್ನು ಬಳಸಿಕೊಂಡು ವ್ಯಾಪಾರ ವ್ಯವಹಾರ ಬೆಳೆದಂತೆಯೇ ಕಲೆ ಹಾಗೂ ಅಭಿವ್ಯಕ್ತಿಯೂ ಬೆಳೆಯುತ್ತಿದೆ. ಇಪ್ಪತ್ತೊಂದು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಸಚಿನ್ ತೆಂಡೂಲ್ಕರ್‌ಗೆ ಸಹ ಟ್ವಿಟರ್ ಬೇಕಾಗುತ್ತದೆ, ನಲವತ್ತು ವರ್ಷಗಳಿಗಿಂತ ಹೆಚ್ಚುಕಾಲ ಸಿನೆಮಾ ರಂಗದಲ್ಲಿ ಸಕ್ರಿಯವಾಗಿರುವ ಅಮಿತಾಭ್ ಸಹ ಬ್ಲಾಗ್ ಬರೆಯಲು ತೊಡಗುತ್ತಾರೆ.

ಹೀಗೆ ಹೊಸ ತಂತ್ರಜ್ಞಾನದ ಆವಿಷ್ಕಾರದಿಂದ ಎಲ್ಲಾ ಕ್ಷೇತ್ರಗಳಲ್ಲು ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಹಿಂದೆ ಬರಹಗಾರರು ತಮ್ಮದೊಂದು ಕತೆಯೋ, ಕವನವೋ ಪ್ರಕಟವಾಗಬೇಕೆಂದಿದ್ದರೆ ಪತ್ರಿಕೆಗಳ ಕಛೇರಿಗಳಿಗೆ ಎಡತಾಕಬೇಕಾಗುತ್ತಿತ್ತು. ಅದು ಪ್ರಕಟವಾಗುವ ದಿನಕ್ಕಾಗಿ ಎದುರು ನೋಡುತ್ತಾ ಕೂರಬೇಕಾಗಿತ್ತು. ಪ್ರಕಟಣೆಗೆ ಅರ್ಹವಲ್ಲ ಎಂಬ ಸುಳ್ಳು ವಿಷಾದಭರಿತ ಮರು ಓಲೆಯನ್ನು ಪಡೆದು ನಿರಾಶೆ ಪಡಬೇಕಾಗಿತ್ತು. ಎಲ್ಲೆಡೆ ಸಂಪಾದಕರ ತೀರ್ಮಾನವೇ ಅಂತಿಮ. ಆದರೆ ಈಗ ಪರಿಸ್ಥಿತಿ ಬಹಳ ಬದಲಾಗಿದೆ. ಅಂತರ್ಜಾಲದಲ್ಲಿ ಯಾರು ಬೇಕಾದರೂ ತಮ್ಮ ಸ್ವಂತ ಬ್ಲಾಗುಗಳನ್ನು ಚಿಕ್ಕಾಸು ಖರ್ಚು ಮಾಡದೆ ತೆರೆಯಬಹುದು. ಮನಸ್ಸಿಗೆ ಬಂದದ್ದನ್ನು ಬರೆದು ಕ್ಷಣಾರ್ಧದಲ್ಲಿ ಪ್ರಕಟಿಸಬಹುದು. ಜಗತ್ತಿನಾದ್ಯಂತ ಇರುವ ಓದುಗರು ಅದನ್ನು ಓದಬಹುದು, ನೇರವಾಗಿ ಪ್ರತಿಕ್ರಿಯೆ ನೀಡಬಹುದು. ಲೇಖಕನೊಂದಿಗೆ ಸೆಣೆಸಾಡಬಹುದು. ಅಂತರ್ಜಾಲದಿಂದಾಗಿ ಬರವಣಿಗೆ, ಓದು, ಸುದ್ದಿ ಪ್ರಸಾರದ ಚಹರೆ ಅದೆಷ್ಟರ ಮಟ್ಟಿಗೆ ಬದಲಾಗಿದೆಯೆಂದರೆ ಬ್ಲಾಗುಗಳಲ್ಲಿ ಪ್ರಕಟವಾದ ಬರಹಗಳನ್ನು ರಾಜ್ಯ ಮಟ್ಟದ ಪತ್ರಿಕೆಗಳು ಪ್ರಕಟಿಸುತ್ತವೆ. ಬ್ಲಾಗುಗಳಲ್ಲಿ ಬಂದ ಅಭಿಪ್ರಾಯಕ್ಕೆ ದಿನ ಪತ್ರಿಕೆಗಳಲ್ಲಿ ಪ್ರತಿಕ್ರಿಯೆ ಪ್ರಕಟವಾಗುತ್ತದೆ.

ವಿಶ್ವದಲ್ಲಿ ಅಂತರ್ಜಾಲ, ಸುಲಭಕ್ಕೆ ಲಭ್ಯವಿರುವ ತಂತ್ರಜ್ಞಾನ, ಯಂತ್ರೋಪಕರಣಗಳ ಲಭ್ಯತೆಯಿಂದ ಹಲವರು ತಮ್ಮ ಕನಸಿಗೆ ಅಡ್ಡಿಯಾಗಿದ್ದ ಅನೇಕ ಅಡತಡೆಗಳನ್ನು ದಾಟಿಕೊಂಡು ಮುನ್ನುಗ್ಗುತ್ತಿದ್ದಾರೆ. ಸಿನೆಮಾ ಎಂಬ ಕಲಾಕ್ಷೇತ್ರದಲ್ಲಂತೂ ಪ್ರವಾಹೋಪಾದಿಯಲ್ಲಿ ಹೊಸ ಪ್ರಯೋಗಗಳಾಗುತ್ತಿವೆ. ಇಂದು ಪ್ರತಿಯೊಬ್ಬರ ಕಿಸೆಯಲ್ಲಿರುವ ಮೊಬೈಲ್ ಫೋನ್ ನಲ್ಲಿ ಕ್ಯಾಮರಾಗಳಿವೆ. ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಇದ್ದ ಮೂವಿ ಕ್ಯಾಮರಾಗಳಿಗಿಂತ ಹೆಚ್ಚಿನ ಗುಣ ಮಟ್ಟದ ವಿಡಿಯೋ ಚಿತ್ರೀಕರಣ ನಡೆಸಬಹುದಾದ ಕ್ಯಾಮರಾಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿವೆ. ಕಂಪ್ಯೂಟರ್ ನೆರವಿನಿಂದ ಎಡಿಟಿಂಗ್ ಮೊದಲಾದ ಕೆಲಸಗಳು ಸಾಕಷ್ಟು ಸುಲಭವಾಗಿ ನಡೆದುಹೋಗುತ್ತವೆ, ಈ ಸವಲತ್ತುಗಳನ್ನು ಬಳಸಿಕೊಂಡು ಅನೇಕ ಮಂದಿ ಪ್ರತಿಭಾವಂತರು, ಕನಸುಗಾರರು ನಿರ್ಮಾಪಕರ ಮರ್ಜಿಗೆ ಬೀಳದೆ, ಮಾರುಕಟ್ಟೆಯ ಲೆಕ್ಕಾಚಾರದ ಮುಲಾಜಿಲ್ಲದೆ ಚಿತ್ರಗಳನ್ನು ನಿರ್ಮಿಸಿ ತೋರಿದ್ದಾರೆ.

ಥಿಯೇಟರಿನಲ್ಲಿ ಬಿಡುಗಡೆಯಾಗದಿದ್ದರೂ ಜನರಿಗೆ ತಲುಪಬಲ್ಲ ಅನೇಕ ಮಾರ್ಗಗಳನ್ನು ಚಿತ್ರ ನಿರ್ಮಾಪಕರು ಕಂಡುಕೊಳ್ಳುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ನಿರ್ದೇಶಿಸಿದ ಸಿನೆಮಾಗಳು ಯುಟ್ಯೂಬ್ ಮೊದಲಾದ ವೇದಿಕೆಗಳಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ‘ಥಿಯೇಟರು’ಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿವೆ.

ಇಂತಹ ಪವಾಡ ಕಣ್ಣೆದುರಿಗೆ ಜರುಗುತ್ತಿದ್ದರೂ ಕನ್ನಡಿಗರಾದ ನಾವು ಏನಾದರೂ ಮಾಡಬೇಡವೇ? ಸಿನೆಮಾ ಎನ್ನುವುದು ಮನರಂಜನೆಯ ಹಂತವನ್ನೂ ದಾಟಿ ಕಲಾಪ್ರಕಾರವಾಗಿ ಬೆಳೆಯುವುದಕ್ಕೆ, ಕಾದಂಬರಿ, ದಿನ ಪತ್ರಿಕೆಗಳನ್ನು ಓದಲು ಕಲಿತ ಜನರು ಸಿನೆಮಾವನ್ನು ‘ಓದು’ವುದಕ್ಕೆ ಕಲಿಯುವಂತಾಗಲು ದುಡಿಯುವುದು ಬೇಡವೇ? ಹೀಗೆಲ್ಲಾ ಯೋಚಿಸಿದ ನಂತರ ಶುರುವಾದದ್ದು ‘ಭೂತಗನ್ನಡಿ’.

ಸಣ್ಣ ತಂಡವೊಂದನ್ನು ಕಟ್ಟಿಕೊಂಡು ಅಲ್ಪ ಖರ್ಚಿನಲ್ಲಿಯೇ ಸಿನೆಮಾ ಒಂದನ್ನು ನಿರ್ಮಿಸಲು ಹೊರಟಿದ್ದೇವೆ. ಈ ಪಯಣದದಲ್ಲಿ ನಿಮ್ಮನ್ನೂ ಹೆಜ್ಜೆ ಹಾಕಿಸುವ ಉದ್ದೇಶದಿಂದ ತೆರೆದಿರುವುದು ಈ ಬ್ಲಾಗ್.

Friday, July 30, 2010

ನನಗ್ಯಾಕೆ ಸಿನೆಮಾದ ಗುಂಗು?

ರೂಪ ರಾಜೀವ್

ನನಗೆಂದೂ ಸಿನೆಮಾ ಅಷ್ಟೊಂದು ಎಫೆಕ್ಟಿವ್ ಅನ್ನಿಸಿರಲೇ ಇಲ್ಲ. ಯಾವಾಗಲೋ ಒಮ್ಮೆ ಹಿಂದಿ ಸಿನೆಮಾಗಳ ಸಿಡಿ ತಂದು ಮನೆಯಲ್ಲಿ ನೋಡಿಬಿಟ್ಟರೆ ಮುಗಿಯಿತು. ಇನ್ನೂ ಕನ್ನಡ ಸಿನೆಮಾಗಳೋ, ನಮ್ಮ ಥಿಯೇಟರ್ ಗಳಲ್ಲಿ ತುಂಬಾ ದಿವಸಗಳು ಇದ್ದರೆ ಮಾತ್ರ ಒತ್ತಾಯಕ್ಕೆ ಹೋಗಿಬರುತ್ತಿದ್ದದಷ್ಟೆ.


‘ಮುಂಗಾರು ಮಳೆ’ ಸಿನೆಮಾವನ್ನು ನಾನು ನೋಡಿದ್ದು, ‘ಸುಧಾ’ ವಾರಪತ್ರಿಕೆಯಲ್ಲಿ ಯೋಗರಾಜ್ ಭಟ್ಟರ ಸಿನೆಮಾ ಮೇಕಿಂಗ್ ಬಗೆಗಿನ ಆರ್ಟಿಕಲ್ ಓದಿ, ಅವರ ಬರಹದ ಶೈಲಿಯಿಂದ ಪ್ರಭಾವಿತಳಾಗಿ! ಟೈಟಲ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಎಷ್ಟೋ ಕನ್ನಡ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದ್ದರೂ ನಾನು ನೋಡೇ ಇಲ್ಲ. ಎಷ್ಟೋ ಬಾರಿ ಟಿವಿಗಳಲ್ಲಿ ಬರೇ ಸಿನೆಮಾದ ಬಗ್ಗೆಯೇ ಬಂದಾಗ ಬೇಜಾರಾಗಿ ಟಿವಿ ಆರಿಸಿದ್ದು ಕೂಡ ಉಂಟು.


ನಮ್ಮ ಕನ್ನಡದ ಹೆಸರಾಂತ ನಟರ ಸಿನೆಮಾಗಳನ್ನು ನೋಡಿದಾಗ ಇಷ್ಟು ಸಿಲ್ಲಿ ಸಿನೆಮಾಗಳನ್ನು ಏಕೆ ಮಾಡುತ್ತಾರೆ? ಕಥೆ ಓದಿರುವುದಿಲ್ಲವೇ? ಸಿನೆಮಾದ ಬಗ್ಗೆ ಏನೂ ಗೊತ್ತಿಲ್ಲದ ನನಗೆ ಇದರ ಹುಳುಕುಗಳು ಕಂಡಾಗ, ಇವರಿಗೆಲ್ಲಾ ಗೊತ್ತಾಗುವುದಿಲ್ಲವೇ? ಇವರೆಲ್ಲಾ ಏಕೆ ಹೀಗೆ? ಇಷ್ಟೇ ನನ್ನ ಆಲೋಚನೆಗಳು. ನಂತರ ನನಗ್ಯಾಕೆ? ಎಂದು ಮರೆತುಬಿಡುತ್ತಿದ್ದೆ.


ಹೀಗಿದ್ದ ನಾನು, ಸಿನೆಮಾ ಮೇಕಿಂಗ್ ನ ಗಂಧಗಾಳಿಯೂ ಇಲ್ಲದ, ಇಂತಹ ನಾನು ಈ ಸಿನೆಮಾದ ಗುಂಗು ಹಿಡಿಸಿಕೊಂಡಿದ್ದು ಹೇಗೆ? ಏಕೆ?


ಶೇಖರ್ ಪೂರ್ಣರವರನ್ನು ಭೇಟಿ ಮಾಡುವವರೆಗೂ ನನ್ನ ಆಲೋಚನೆಗಳು ಇಷ್ಟಕ್ಕೆ ಸೀಮಿತವಾಗಿದ್ದವು. ಅವರು ಸಿನೆಮಾಗಳನ್ನು ವಿಮರ್ಶಿಸುವ ರೀತಿ, ಶೈಲಿ ಬಹಳವಾಗಿ ಹಿಡಿಸಿತು. ನಾನು ಇವರ ಹಾಗೇ ಎಲ್ಲಾ ಸಿನೆಮಾಗಳನ್ನು ನೋಡಿಯೇಬಿಡಬೇಕೆಂಬ ಆಸೆ ಕೂಡ ಮೂಡಿಸಿತು. ಅದುವರೆವಿಗೂ ಸಿನೆಮಾ ಅನ್ನೋದು ಮನರಂಜನೆಗಾಗಿ ಮಾತ್ರ ಅನ್ನುವ ಅನಿಸಿಕೆ ನನ್ನಲ್ಲಿ ಬಲವಾಗಿತ್ತು. ನಮ್ಮ ಸಿನೆಮಾಗಳು ಎಷ್ಟು ಕಮರ್ಷಿಯಲೈಸ್ ಆಗಿಬಿಟ್ಟಿವೆ, ನಿರ್ಮಾಪಕನೊಬ್ಬ ಹೆಸರಾಂತ ನಟನಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು (ಕಥೆಯನ್ನು ಕೂಡ ಕೇಳದೆ!) ಖರ್ಚು ಮಾಡಲು ರೆಡಿ ಇರುತ್ತಾನೆ. ಮೊದಲಿಗೆ ನಟ / ನಟಿಯರನ್ನು ಗೊತ್ತು ಮಾಡಿಕೊಂಡು, ಅವರಿಗೆ ಸೂಕ್ತವಾದಂತಹ ಅದೇ ಹಳೆಯ ಫಾರ್ಮುಲಾ ಉಳ್ಳ ಕಥೆಗಳು! ಮಚ್ಚು, ಲಾಂಗ್, ಐಟಮ್ ಸಾಂಗ್, ಒಂದೇ ರೀತಿಯ ಕ್ಯಾಮೆರಾ ವರ್ಕ್, ಎಲ್ಲವೂ ಸ್ಟಿರಿಯೋ ಟೈಪ್ಡ್. ಯಾವುದಾದರೊಂದು ಸಿನೆಮಾ ಯಶಸ್ವಿಯಾಗಿ ಓಡಿಬಿಟ್ಟರೆ, ಅದೇ ಧಾಟಿಯುಳ್ಳ ಹಲವಾರು ಸಿನೆಮಾಗಳು...


ಇದೆಲ್ಲಾ ನಮ್ಮ ಮೊದಲ ಭೇಟಿಯಲ್ಲಿ ಚರ್ಚೆಯಾದಂತಹ ವಿಷಯಗಳು. ಬೇರೆ ಎಲ್ಲಾ ಭಾಷೆಗಳಲ್ಲಿಯೂ ಸಿನೆಮಾಗಳಲ್ಲಿ ಅಷ್ಟೊಂದು ಪ್ರಯೋಗ ನಡೀತಿರಬೇಕಾದರೆ, ಏಕೆ ನಮ್ಮ ಕನ್ನಡ ಸಿನೆಮಾ ಆ ನಿಟ್ಟಿನಲ್ಲಿ ಆಲೋಚಿಸುತ್ತಿಲ್ಲ? ಕನ್ನಡದಲ್ಲಿ ಪ್ರಜ್ಞಾವಂತ ಸಿನೆಮಾ ನೋಡುಗರಿಲ್ಲವೇ? ಸಿನೆಮಾ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಕಾಲಾನುಕಾಲದಿಂದ ಹಾಸುಹೊಕ್ಕಾಗಿವೆ ಹಾಗೂ ಬೇರೆ ಎಲ್ಲಾ ಕಲಾ ಪ್ರಕಾರಗಳಿಗಿಂತ ಹೆಚ್ಚು ಜನರನ್ನು ತಟ್ಟುತ್ತವೆ. ಒಬ್ಬ ವ್ಯಕ್ತಿ ಸಿನೆಮಾ ನೋಡಲು ಸುಮಾರು ೧೦೦ ರೂಗಳನ್ನು ಕೊಟ್ಟು ನೋಡುತ್ತಾನೆಂದರೆ, ಅದನ್ನು ನಾವು ಬರೇ ಮನರಂಜನೆ ಕೊಡುವ ಉದ್ದೇಶ ಇಟ್ಟುಕೊಂಡ್ರೆ ಸಾಲದು. ನಮಗೆ ಆ ಒಬ್ಬೊಬ್ಬ ವ್ಯಕ್ತಿಯ ೧೦೦ ರೂ.ಗಳ ಜವಾಬ್ದಾರಿಯ ಅರಿವಿರಬೇಕು. ನಮ್ಮ ಸಿನೆಮಾದಲ್ಲಿನ ವಸ್ತು (ಕಂಟೆಂಟ್) ಪ್ರತಿಯೊಬ್ಬರನ್ನೂ ಚಿಂತನೆಗೀಡಾಗುವಂತೆ ಮಾಡಬೇಕು. ಸಿನೆಮಾ ನೋಡಿ, ವಾಪಾಸ್ಸು ಹೋಗುವಾಗ ಈ ವಿಷಯ ಜನರನ್ನು ಕಾಡಬೇಕು. ವಾದಗಳಾಗಬೇಕು, ಚರ್ಚೆಗಳಾಗಬೇಕು. ನಮ್ಮ ಮುಂದಿನ ಪೀಳಿಗೆಗೆ ಇದೆಲ್ಲವನ್ನೂ ದಾಖಲಿಸಬೇಕು. ಇದು ಅವರ ಆಶಯವಾಗಿತ್ತು.


ಕೇಳುತ್ತಾ, ಚರ್ಚಿಸುತ್ತಾ ಹೋದಂತೆ ಇದೆಲ್ಲವೂ ನಮ್ಮೆಲ್ಲರ ಆಶಯವಾಗಿ ಬದಲಾಗಿತ್ತು.


Saturday, July 24, 2010

ಸಿನೆಮಾ- ಯಾಕೆ?

ಸಂವಾದ ಹುಟ್ಟಿದ್ದು ಗುರುಪ್ರಸಾದರ ಮಠದಲ್ಲಿ! ಈ ಚಿತ್ರವನ್ನ ನಾವು ನೋಡಿದಾಗ ಮುಖ್ಯವಾಹಿನಿಯ ಲಾಭವನ್ನೇ ಉದ್ದೇಶವಾಗಿಸಿಟ್ಟುಕೊಂಡ ಚಿತ್ರದಂತಿದ್ದ ಇದರಲ್ಲೂ ಕ್ರಿಯಾಶೀಲ ದಿಗ್ದರ್ಶಕನೊಬ್ಬನ ಸಮರ್ಥ ಅಭಿವ್ಯಕ್ತಿಯನ್ನೂ ಕಾಣಬಹುದಿತ್ತು.ಅದನ್ನ ಸೋ ಕಾಲ್ಡ್ ಆರ್ಟ್ ಮತ್ತು ಕಮರ್ಷಿಯಲ್ ಸಿನೆಮಾಗಳ ನಡುವಿನ ಬ್ರಿಡ್ಜ್ ಸಿನೆಮಾ ಎಂದಾದರೂ ಕರೆಯಬಹುದು.

ವಿಭಿನ್ನ ನಿರೂಪಣಾ ತಂತ್ರ ಮತ್ತು ಸೂಕ್ಷ್ಮ ಕಥಾವಸ್ತುವನ್ನ ಹೊಂದಿದ್ದ ಮಠದಂತಹ ಸಿನೆಮಾದ ವಿಶಿಷ್ಠತೆಯನ್ನ ನಮ್ಮ ಮಾಧ್ಯಮಗಳು ಗುರುತಿಸದೇ ಇದ್ದದ್ದು ಸಂವಾದ ಡಾಟ್ ಕಾಂ ರೂಪು ತಳೆಯಲು ಕಾರಣವಾಯಿತು. ಸಿನೆಮಾ ಒಂದಕ್ಕೆ ರೆಫರೆನ್ಸ್ ಟೆಕ್ಸ್ಟ್ ಇರಬೇಕು, ಸಾಹಿತ್ಯ-ಸಂಗೀತದಲ್ಲಿ ಇರುವಷ್ಟು ಅಕಾಡೆಮಿಕ್ ಟೆಕ್ಸ್ಟ್ ನಮ್ಮ ಸಿನೆಮಾಗಳಲ್ಲಿ ಇಲ್ಲ ಎನ್ನುವ ಬೇಸರ, ನಮ್ಮ ಮಣ್ಣಿನ ಗುಣವಿಲ್ಲದ ಕನ್ನಡ ಸಿನೆಮಾಗಳು.. ಹೀಗೆ ಹತ್ತಾರು ಸಂಕಟಗಳನ್ನ ಒಡಲಲ್ಲಿಟ್ಟುಕೊಂಡು ಹುಟ್ಟಿದ್ದು ಸಂವಾದ.


ಈಗ ನಾವೇ ಸಿನೆಮಾ ಮಾಡಲು ಹೊರಟಿದ್ದೇಕೆ? ಎಂಬ ಪ್ರಶ್ನೆಗೆ ಪೊಳ್ಳು ಕಾರಣಗಳನ್ನ ಆರೋಪಿಸಿಕೊಳ್ಳುವುದು ಬೇಡ. ಇದಕ್ಕೆ ಅಂಥ ಘನ ಉದ್ದೇಶಗಳೇನೂ ಇಲ್ಲ. ಆದರೂ ಕೆಲವೊಂದು ಅಂಶಗಳನ್ನ ಈ ಭೂತಗನ್ನಡಿಯೊಳಗೆ ದಾಖಲಿಸಿಡೋಣ:

೧. ನಮಗೆ ಸಿನೆಮಾ ಎಂದರೆ ತೆವಲು.
೨. ಕ್ಯಾಮೆರಾ ಹಿಡಿಯುವುದು ಹೇಗೆ? ಸೀನ್ ಅಂದರೆ ಏನು? ಏಡಿಟಿಂಗ್ ಹೇಗೆ ಮಾಡುವುದು? ಕಥೆಯೊಂದು ಸ್ಕ್ರಿಪ್ಟ್ ಆಗಿ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಬಿದ್ದ ಮೇಲೆ ಎಡಿಟಿಂಗ್ ಟೇಬಲ್ ಮೇಲೆ ಹುಟ್ಟುವುದು ಏನು? ಇಂಥಹ ಅಚ್ಚರಿಗಳನ್ನೆಲ್ಲ ಅನುಭವಿಸುವುದು ಬೇಡವೇ?


ಮನುಷ್ಯನಿಗೆ ಹೊಸ ಹೊಸ ಹುಚ್ಚು ಹಿಡಿದಷ್ಟು ಆತ ಜೀವಂತವಾಗಿರುತ್ತಾನೆ. ಹರಿವ ನದಿಯಾಗುತ್ತಾನೆ. ಇಷ್ಟು ದಿನ ಸಿನೆಮಾ ನೋಡುವ, ಅದರ ಬಗ್ಗೆ ಬರೆಯುವ ಹುಚ್ಚಿದ್ದ ನಮಗೆ, ಈಗ ಹೊಸ ತೆವಲೊಂದು ಸಿಕ್ಕಿಹಾಕಿಕೊಂಡಿದೆ. ಅದೇ ಮೇಕಿಂಗ್ ಆಫ್ ಸಿನೆಮಾ.

ಸಿನೆಮಾ ಮಾಡುತ್ತೆವೆಯೋ ಬಿಡುತ್ತೆವೆಯೋ, ಮಾಡಲು ಹೊರಟಿರುವುದಂತೂ ಹೌದು. ಸಿನೆಮಾ ಮಾಡಿದ ತೃಪ್ತಿಗಿಂತ, ಸಿನೆಮಾ ಮೇಕಿಂಗ್ ನ ಪಯಣದಲ್ಲೇ ಸಾಕಷ್ಟು ಅನುಭವ ನಮ್ಮದಾಗಿರುತ್ತದೆ, ಅನ್ನುವದಂತೂ ಸತ್ಯ.

ಆಕ್ಷನ್..