Monday, September 19, 2011

ಲೈಫು ಇಷ್ಟೇನೆ: ನನ್ನ ರೀಡಿಂಗ್

ಪವನ್ ಕುಮಾರ್ ನಿರ್ದೇಶನದ ಲೈಫು ಇಷ್ಟೇನೇ ಸಿನೆಮ ನನಗೆ ಮೆಚ್ಚುಗೆಯಾಗುವುದಕ್ಕೆ ಅನೇಕ ಕಾರಣಗಳಿವೆ. ಈ ಬರಹವನ್ನು ಸಿನೆಮ ವಿಮರ್ಶೆಯಾಗಿಸದೆ ಸಿನೆಮವನ್ನು ನಾನು ಓದಿಕೊಂಡ (ಹೌದು ಓದಿಕೊಂಡ) ಬಗೆಯನ್ನು ವಿವರಿಸಲು ಬಳಸುವೆ.

೧. ಯೋಗರಾಜ್ ಭಟ್ಟರ ಗರಡಿಯಲ್ಲಿ ಬೆಳೆದು ನಿರ್ದೇಶಕರಾದರೂ ಪವನ್ ಕುಮಾರ್ ಯೋಗರಾಜ್ ಭಟ್ಟರು ಈಗಿನ ಯುವಕರನ್ನು ಗಮನದಲ್ಲಿಟ್ಟುಕೊಂಡು ಸಿನೆಮ ಮಾಡುವ ಹಳೆ ತಲೆಮಾರಿನ ನಿರ್ದೇಶಕರು ಎಂದು ಸಾಬೀತು ಪಡಿಸಿದ್ದಾರೆ. ಚಿತ್ರಕತೆಯಲ್ಲಿ ಅವರು ತೊಡಗಿಸಿರುವ ಶ್ರದ್ಧೆ ಅಪಾರ. ಬುದ್ಧಿವಂತಿಕೆಯ ಮಾತುಗಾರಿಕೆ, ಕಚಗುಳಿಯಿಡುವ ಡೈಲಾಗುಗಳು, ನವಿರೆನಿಸುವ ದೃಶ್ಯ ಸಂಯೋಜನೆಗಳಲ್ಲಿ ಸಿನೆಮ ತೂಗಿಸುವ ಭಟ್ಟರ ಕೆಲವೇ ಕೆಲವು ದೌರ್ಬಲ್ಯಗಳ ನೆರಳೂ ಪವನ್ ಸಿನೆಮಾದ ಮೇಲೆ ಬಿದ್ದಿಲ್ಲ.

ಕೊಚ್ಚೆಗುಂಡಿಯಲ್ಲಿ ಪ್ರಾರಂಭವಾದ ಪ್ರೀತಿ ಜೋಗದ ಗುಂಡಿಯಲ್ಲಿ ಮಣ್ಣಾಗುವ ಮುಂಗಾರು ಮಳೆ, ನೀರಿನ ಸೆಳವಿನಲ್ಲಿ ಕೈ ಹಿಡಿದು ಒಂದಾಗುವ, ಗೇಲಿ ಮಾಡಿ ನಗುವ ಬೀದಿಯ ಜನದ ನಡುವೆ ಕೈ ಹಿಡಿದು ನಡೆವ ಗಾಳಿ ಪಟ- ಮನಸಾರೆ, ಪ್ರೀತಿ ಪ್ರೇಮ, ಮದುವೆ ಮಕ್ಕಳು ಸಂಸಾರ, ಅಪ್ಪ ಅಮ್ಮ ಎಲ್ಲವೂ ಏಕತ್ರವಾಗಿ ಕೇವಲ ವಸ್ತು'ಗಳು' ಆಗಿ ಕಾಣುವ ವೇದಾಂತದ ಕಣ್ಣಿರುವ ನಾಯಕ, ನೂರು ಮಂದಿ ಹುಡುಗರ ಪ್ರಪೋಸಲ್ ಪಡೆದು ಮತ್ತೊಮ್ಮೆ ಡಿಟೇಲ್ ಆಗಿ ಲವ್ ಮಾಡುವ ವ್ಯವಧಾವಿಲ್ಲದೆ ಮದುವೆಗೆ ಪ್ರಪೋಸ್ ಮಾಡುವ ಹುಡುಗಿಯರ ಪಂಚರಂಗಿ - ಹೀಗೆ ಭಟ್ಟರ ಸಿನೆಮಾಗಳಲ್ಲಿ ಹಾಗೂ ಹೀಗೂ ಹುಡುಗ ಹುಡುಗಿ ಒಂದಾಗಿಯೇ ಆಗುತ್ತಾರೆ. ಸಂತೆಯೆಲ್ಲ ಸುತ್ತಿ ಬಂದು ಕಾಲು ತೊಳೆದು ಮನೆ ಸೇರಿಕೊಂಡಂತೆ. ಆದರೆ ಈ ತಲೆಮಾರಿನ ತಲ್ಲಣಗಳ ಪ್ರತ್ಯಕ್ಷ ಅನುಭವ ಇರಬಹುದಾದ ಪವನ್ ಕುಮಾರ್ ನಾಯಕ ನಾಯಕಿ ಒಂದಾಗುವುದು ಇಲ್ಲವೇ ಬೇರೆಯಾಗುವುದು ಮುಖ್ಯವೇ ಅಲ್ಲ ಎನ್ನುವಂತೆ ಸಿನೆಮ ಕಟ್ಟಿಕೊಡುತ್ತಾರೆ.

೨. ಸಿನೆಮದ ಧ್ವನಿ ಶಕ್ತಿ. ಸಂಭಾಷಣೆಯ ಆತ್ಮವಿಶ್ವಾಸದಲ್ಲಿ ಸಿನೆಮ ಸೋರಗದಂತೆ ನೋಡಿಕೊಂಡಿರುವುದು ಪವನ್ ಬಳಸಿರುವ ಹತ್ತಾರು ಸಜೇಶನ್ ಗಳ ಮೂಲಕ.ಇವುಗಳಲ್ಲಿ ಕೆಲವು ನಾನು ಗುರುತಿಸಿದಂತವು: ನಾಯಕನ ಏಕಾಂತದ ಖಾಸಗಿ ಕ್ಷಣಗಳಲ್ಲಿ ಕಾಣಿಸಿಕೊಳ್ಳುವ ನಾಲ್ಕು ಮಂದಿ. ನಾಯಕ ದುಃಖದಲ್ಲಿರುವಾಗ ಬೇಸರವಾಗುವ, ಗೊಂದಲದಲ್ಲಿದ್ದಾಗ ಸಂತೈಸುವ, ಕೆಲವೊಮ್ಮೆ  ಅವನ ಹುಡುಗಿಗೆ ದಾರಿ ತೋರಿಸುವ, ಇವನು ಖುಶಿಯಲ್ಲಿದ್ದಾಗ ವಯೋಲಿನ್ ನುಡಿಸುವ, ಪ್ಯಾಥೋ ಹಾಡುವಾಗ ತಲೆ ಒರಗಲು ಭುಜ ನೀಡುವ, ಜೂನಿಯರ್ ದೇವ್ ದಾಸನ ಹುಡುಗಿಯಾಗಿ ಬರುವ ಹೊಸ ಪ್ರೇಯಸಿಯ ಆಗಮನವನ್ನು ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಆದರೆ ಇಡೀ ಸಿನೆಮದಲ್ಲಿ ಎಲ್ಲೂ ಒಂದೂ ಮಾತಾಡದ ಆ ನಾಲ್ಕು ಮಂದಿ. ಮುಂದೆ ನಾನು ಹೇಳಲಿರುವ ಎರಡನೆಯ ಸಜೆಶನ್ ಆಧಾರದಲ್ಲಿ ಹೇಳುವುದಾದರೆ ಈ ನಾಲ್ಕು ಮಂದಿ ವಯೋಲಿನ್ ನುಡಿಸುವ, ನೃತ್ಯ ಮಾಡುವ ಕಲಾವಿದರು. ಸಂಗೀತ, ನೃತ್ಯ ಎನ್ನುವ ಎಲಿಮೆಂಟುಗಳು ನಾಯಕನ ಖಾಸಗಿ ಕ್ಷಣಗಳನ್ನು ಆವರಿಸಿ ಸಂತೈಸುವ, ಸಂಭ್ರಮಿಸುವ ಪಾತ್ರಗಳಾಗುವವು.

ಎರಡನೆಯದು, ಸಿನೆಮಾದಲ್ಲಿ ಸಿನೆಮಗಳನ್ನು ಸಜೆಶನ್ ಗಳಾಗಿ ಬಳಸಿರುವುದು. ಇದು ಹೊಸ ತಂತ್ರವೇನಲ್ಲ. ಗಿರೀಶ್ ಕಾಸರವಳ್ಳಿ ತಮ್ಮ `ಮನೆ' ಚಿತ್ರದಲ್ಲಿ ಫ್ರೆಡ್ರಿಕೊ ಫೆಲಿನಿಯ "Eight and Half" ಚಿತ್ರದ ಮ್ಯೂಸಿಕ್ ಬಿಟ್ ಒಂದನ್ನು ಬಳಸುತ್ತಾರೆ. ಇಂತಹ ಪ್ರಯತ್ನ ಕೆಲವೊಮ್ಮೆ ಕೇವಲ ಪ್ರಭಾವವನ್ನು ನೆನೆಯುವಲ್ಲಿ, ಅರ್ಪಣೆಯಾಗಿಸುವಲ್ಲಿ ಬಳಕೆಯಾಗುತ್ತದೆ. ಆದರೆ ಚಿತ್ರಕತೆಯಲ್ಲಿ ಇವುಗಳು ಸಂವಾದ ನಡೆಸುವ ಅಂಶಗಳಾಗುವುದು ಲೈಫು ಇಷ್ಟೇನೆ ಚಿತ್ರಕಥೆಯ ಹೆಚ್ಚುಗಾರಿಕೆ. ಮೊದಲ ನಾಯಕಿ ಕೈ ಕೊಟ್ಟ ದುಃಖದಲ್ಲಿ ಆಕೆಯ ಫೊಟೊಗಳಿಗೆ ಅಪ್ಪ ಕೊಟ್ಟ ಲೈಟರಿನಲ್ಲಿ ಬೆಂಕಿ ಹೊತ್ತಿಸುವಾಗ ಹಿನ್ನೆಲೆಯ ಟಿವಿಯಲ್ಲಿ ಮುಂಗಾರು ಮಳೆಯ "ಇವನು ಗೆಳೆಯನಲ್ಲ" ದೃಶ್ಯ ಕಾಣಿಸುವುದು, ಗಣೇಶ್ ಪ್ರೀತಿಯನ್ನು ಮಣ್ಣು ಮಾಡಿ ತ್ಯಾಗ ಮಾಡಿದ ಉದಾತ್ತ ಭಾವದಲ್ಲಿ ಜೋಗದ ತುದಿಯಲ್ಲಿ ನಿಲ್ಲುವುದನ್ನು ಗೇಲಿ ಮಾಡುವಂತೆ ಈತ ನೆನಪುಗಳನ್ನು ಸುಡುವುದು, ಇವನನ್ನು ಬಿಟ್ಟು ಇನ್ನೊಬ್ಬನನ್ನು ಮದುವೆಯಾಗುವ ಹುಡುಗಿಯ ಹೆಸರು "ನಂದಿನಿ" ಯೇ (ಮುಂಗಾರು ಮಳೆ ನೆನಪಿಸಿಕೊಳ್ಳಿ) ಆಗಿರುವುದು ಆಕಸ್ಮಿಕವಲ್ಲ.

ಹುಡುಗಿ ಕೈಕೊಟ್ಟ ದುಃಖದಲ್ಲಿ ತಲೆ ಕೆಡಿಸಿಕೊಂಡವನನ್ನು ಗುಜರಿ ಅಂಗಡಿಯ 'ಅಜ್ಜ'ನ ಬಳಿಗೆ ಸೆಲೂನ್ ಅಂಗಡಿಯವನು ಕೊಂಡೊಯ್ಯುವುದು, ಅಜ್ಜ ನೆನಪು ಅಳಿಸುತ್ತೇನೆಂದು ಎಣ್ಣೆ ಮಾಲಿಶ್ ಮಾಡುವುದು ಒಂದು ಶಕ್ತಿಶಾಲಿ ಸಜೆಶನ್. ಇದರ ಅರ್ಥ ಗ್ರಹಿಸುವುದಕ್ಕೆ ನನಗೆ ಒಂದು ವೀಕ್ಷಣೆಯಲ್ಲಿ ಸಾಧ್ಯವಾಗಿಲ್ಲ.

೩. ಸಿನೆಮದ ಚಿತ್ರಕಥೆಯನ್ನು ಕಟ್ಟಿರುವ ಬಿಗಿ ಹಾಗೂ ಸಂಯಮ. ಸಿನೆಮವನ್ನು ವಿವರಿಸಿಬಿಡಬೇಕೆಂಬ ಧಾವಂತ ನಿರ್ದೇಶಕರಿಗಿಲ್ಲ. ಇಡೀ ಸಿನೆಮಾ ತುಂಬಾ ವ್ಯಕ್ತಿ, ವಿಚಾರಗಳಿಗೆಲ್ಲ 'ಗಳು' ಸೇರಿಸಿ ಸಂಬೋಧಿಸುವ ಪಂಚರಂಗಿಯ ನಾಯಕ ಸಿನೆಮಾದ ಅಂತ್ಯದಲ್ಲಿ ಇಡೀ ಸಿನೆಮಾದಲ್ಲಿರುವ ಈ ಸಜೆಶನ್ ಜನರಿಗೆಲ್ಲಿ ಅರ್ಥವಾಗದೆ ವ್ಯರ್ಥವಾಗುವುದೋ ಎನ್ನುವಂತೆ ಅದಕ್ಕೆ ಪೇಲವವಾದ ಅರ್ಥವಿವರಣೆಯನ್ನು ನೀಡುತ್ತಾನೆ. ಆದರೆ ಲೈಫು ಇಷ್ಟೇನೆ ನಲ್ಲಿ ಕುಣಿಯುವ, ವಯೋಲಿನ್ ನುಡಿಸುವ ವ್ಯಕ್ತಿಗಳು ಯಾರು, ನಂದಿನಿ ತಂದೆಗೆ ಹೆದರಿದಳಾ ಅಥವಾ ಕೆಲಸ ಸೇರಲು ಬಯಸದ ನಾಯಕನಿಂದ ಬೇಸತ್ತು ದೂರವಾದಳಾ, ಎರಡನೆಯದಾಗಿ ಬರುವ ನಾಯಕಿ ಯಾವ ಕಾರಣಕ್ಕೆ ತಂದೆಯನ್ನು ಬಿಟ್ಟು ಹೋಗಿರುತ್ತಾಳೆ?ಇಬ್ಬರು ಸೇರಿ ಅಪ್ಪನ ಸ್ಕೂಟರನ್ನು ತೊಳೆದಿರಿಸಿದ್ದು ಏಕೆ? ಕಡೆಗೆ ನಾಯಕ ಏನೆಂದು ತೀರ್ಮಾನಿಸುತ್ತಾನೆ ಎನ್ನುವ ಸಂಗತಿಗಳು ವಿವರಣೆಯ ಚಪ್ಪಡಿ ಕಲ್ಲು ಎಳೆಸಿಕೊಳ್ಳದೆ ಹಲವು ಬಗೆಯ ಇಂಟರ್ ಪ್ರಿಟೇಶ ಗಳಿಗೆ ತೆರೆದುಕೊಂಡಂತೆ ಇವೆ.

ಬಾಲ್ಯದಲ್ಲಿ ಆಕರ್ಷಣೆಯಾಗಿ ಮನಸ್ಸಲ್ಲಿ ನಾಟಿದ ಪೆಂಡ್ಯುಲಮ್ ನಂತೆ ಓಲಾಡುವ  ಜುಮುಕಿ, ಮುಂದೆಯೂ ಅವನ ಸ್ಮೃತಿ ಪಟಲದಲ್ಲಿ ಉಳಿಯುವುದು, ಜುಮುಕಿ ಕಾಣುವ ಮೊದಲ ಸೀನ್ ನಲ್ಲಿ ಟೀಚರ್ ಪೆಂಡುಲಮ್ ಬರೆಯುವುದು ಎಷ್ಟು ಅಪ್ರಯತ್ನ ಪೂರ್ವಕವಾಗಿ ಬೆರೆತು ಹೋಗಿವೆ! ಹಾಗೆಯೇ ನಾಯಕನ ಗೆಳೆಯ ನಾಯಕನ ಮನಸ್ಸು ಪಬ್ಲಿಕ್ ಟಾಯ್ಲೆಟ್ ಆಗಿದೆ ಎಂದು ಹೇಳುವ ಸನ್ನಿವೇಶ ಎಷ್ಟು ಸಹಜವಾಗಿ ಅವರಿಬ್ಬರು ಟಾಯ್ಲೆಟಿನಿಂದ ಹೊರ ಬಂದ ಸಂದರ್ಭದಲ್ಲಿ ಜರುಗುತ್ತದೆ! ಮೊದಲ ಹುಡುಗಿಯೊಂದಿಗಿನ ಡ್ಯುಯೆಟ್ ನಲ್ಲಿ ದಿಗಂತ್ ನಾಯಕಿಯ ಕಣ್ಣಿಗೆ ಮುತ್ತಿಟ್ಟರೆ ಎರಡನೆಯ ಹುಡುಗಿಯೊಂದಿಗೆನ ಡ್ಯುಯೆಟ್ ನಲ್ಲಿ ಸರಿಸುಮಾರು ಅದೇ ಕೆಮರಾ ಆಂಗಲ್ ನಲ್ಲಿ ಹುಡುಗಿ ದಿಗಂತ್ ಕೆಣ್ಣಿಗೆ ಮುತ್ತಿಡುತ್ತಾಳೆ  - ಇವೆಲ್ಲ ಸ್ಕ್ರೀನ್ ಪ್ಲೇ ಹಿಂದಿರುವ ಶ್ರದ್ಧೆಯನ್ನು ಬಿಂಬಿಸುತ್ತವೆ.

೪. ಇಡೀ ಸಿನೆಮ ಬೆನ್ನು ಮೂಳೆಯಿಲ್ಲದ, ಫುಟ್ ಬಾಲಿನಂತೆ ಒದೆಸಿಕೊಳ್ಳುತ್ತ ಜೀವನದ ಪಾಠ ಕಲಿಯುತ್ತ ಹೋಗುವ ಯುವಕ ತನ್ನ ಜೀವನವನು ನಿರೂಪಿಸುತ್ತಾ ಹೋಗುವ ಶೈಲಿಯಲ್ಲಿದೆ. ಹೀಗೆ ಆತನದೇ ನಿರೂಪಣೆಯಲ್ಲಿ ಚಿತ್ರ ಸಾಗುವುದು ದೊಡ್ಡ ಹೈಲೈಟ್. ಏಕೆಂದರೆ ಚಿತ್ರದ ನಿರೂಪಣೆಯಲ್ಲಿ  ನಾವು ಕಾಣುವ ಉಡಾಫೆ, ಬೇಜವಾಬ್ದಾರಿತನ, ಜಗತ್ತನ್ನು, ವ್ಯಕ್ತಿಗಳನ್ನು ನೋಡುವ ಕ್ರಮ ಎಲ್ಲ ನಾಯಕನ ದೃಷ್ಟಿಕೋನವಾಗಿ ಸಿನೆಮ ಅರ್ಥೈಸಿಕೊಳ್ಳುವುದಕ್ಕೆ ಹೊಸತೊಂದು ಆಯಾಮ ದೊರಕಿಸಿಕೊಡುತ್ತದೆ. ಇಲ್ಲವಾದರೆ ಉಡಾಫೆ, ಬೇಜವಾಬ್ದಾರಿತನ ನಿರ್ದೇಶಕ ಸಿನೆಮದ ಮೇಲೆ ಹೇರಿದ ವೈಯಕ್ತಿಕ `ಸ್ಟೈಲ್' ಆಗುತ್ತದೆ.

ಸಿನೆಮ ಹುಡುಗರ ವೀವ್ ಪಾಯಿಂಟ್ ನಲ್ಲಿದೆ ಅದಕ್ಕೆ ಹುಡುಗರಿಗೆಲ್ಲ ಇಷ್ಟವಾಗುತ್ತದೆ. ಹುಡುಗೀರ ವೀವ್ ಪಾಯಿಂಟ್ ನಿಂದ ಏನನ್ನು ತೋರಿಸಿಲ್ಲ ಎನ್ನುವ ಕೆಲವು ಅಭಿಪ್ರಾಯಗಳಿಗೆ ನಾಯಕನೇ ನಿರೂಪಕನಾಗಿರುವ ಅಂಶ ಉತ್ತರವಾಗಬಲ್ಲದು.

೫. ಪ್ರೀತಿ ಪ್ರೇಮದಲ್ಲಿ ಭಾವನೆಗಳ ಪಾತಳಿಯಾಗಿ ಬಳಕೆಯಾಗುವುದು ಹುಡುಗಿಯ ಮನಸ್ಸು. ಹುಡುಗ, ಗಂಡು ಹೊಡೆದಾಡಿ ರಕ್ಷಿಸುವ, ಇಲ್ಲ ಹೊಡೆದಾಡಿ ಪ್ರಾಣ ಕೊಡುವ, ಡಮ್ಮಿ ಪಾತ್ರವಷ್ಟೇ ಆಗಿರುತ್ತಾನೆ. ಅನೇಕ ವೇಳೆ ಗಂಡಸರು ಟಿಕೆಟ್, ಪಾಪ್ ಕಾರ್ನ್ ಕೊಂಡು ಪ್ರೇಯಸಿ/ಹೆಂಡತಿಯರನ್ನು  ಬೈಕಿನಲ್ಲಿ ಥಿಯೇಟರಿಗೆ ಕರೆದುಕೊಂಡು ಬರುವ ಡಮ್ಮಿ ಯಷ್ಟೇ ಆಗಿರುವುದರಿಂದ ಸಿನೆಮಾ ಪ್ರೀತಿಯನ್ನು ಹೆಣ್ಣಿನ ಅಂತರಂಗದ ಸಾಕ್ಷಿಯಲ್ಲಿ ವ್ಯಾಖ್ಯಾನಿಸುತ್ತದೆ. ಈ ಸಿನೆಮಾದಲ್ಲಿ ಪ್ರೀತಿ ಎನ್ನುವುದನ್ನು ಹುಡಗರು ಗ್ರಹಿಸುವ, ವ್ಯಾಖ್ಯಾನಿಸಿಕೊಳ್ಳುವ, 'ಫೀಲ್ ಮಾಡುವ' ಬಗೆಯನ್ನು ಅನ್ವೇಷಿಸುತ್ತದೆ.

೬. ಸಿನೆಮ ನಾಯಕನ ಪ್ರೀತಿ, ವೈಫಲ್ಯಗಳನ್ನೇ ಕಥೆಯಾಗಿಸಿಕೊಂಡರೂ ಅದು ಮೂಲ ಕಥೆ ಎನ್ನಿಸುವುದೇ ಇಲ್ಲ. ಮೂಲ ಕಥೆಯಾಗಬಹುದಾದ ಗುಣ ಹೊಂದಿರುವುದು - ಗೆಳೆಯರ ಖರ್ಚನ್ನೆಲ್ಲ ಭರಿಸುವ ಎಂ ಎಲ್ ಎ ಮಗ,  ಹಳ್ಳಿಯ ಹಿನ್ನೆಲೆಯ, ಬಡತನದಲ್ಲಿಂದ ಬಂದ, ಎಂ ಎಲ್ ಎ ಮಗನನ್ನು ಲಜ್ಜೆಯಿಲ್ಲದೆ ಹೊಗಳುವ ಸತೀಶ್ ಪಾತ್ರ, ಮಧ್ಯಮ ವರ್ಗದ ನಾಯಕ - ಇವರ ಗೆಳೆತನ. ಬಿಲ್ಲು ಭರಿಸುತ್ತ, ಗೆಳೆಯರಿಗೆ ಸಹಾಯ ಮಾಡುತ್ತ ಇರುವ ಎಂ ಎಲ್ ಎ ಮಗ ಮುನ್ನೆಲೆಗೆ ಬರುವುದೇ ಇಲ್ಲ. ಆದರೆ ಸತೀಶ್ ಪಾತ್ರ ಹಾಗೂ ನಾಯಕ ಒಬ್ಬರ ಬದುಕನ್ನು ಮತ್ತೊಬ್ಬರು ವ್ಯಾಖ್ಯಾನಿಸುತ್ತ, ವಿಮರ್ಶಿಸುತ್ತ, ಮೌಲ್ಯ ಮಾಪನ ಮಾಡುತ್ತ, ನಿರ್ದೇಶಿಸುತ್ತ ಇರುತ್ತವೆ. ತೀರಾ ವರ್ಗ ಸಂಘರ್ಷದ ಥಿಯರಿ ಎಳೆದು ತರುವ ಅವಶ್ಯಕತೆ ಇಲ್ಲದಿದ್ದರೂ ಈ ರೀತಿ ಒಂದು ವರ್ಗ ಇನ್ನೊಂದು ವರ್ಗದೊಂದಿಗೆ ಸಂವಾದಿಯಾಗಲಿಕ್ಕೆ , ಒಬ್ಬನನ್ನು ಇನ್ನೊಬ್ಬನು ಪ್ರಾಣಕ್ಕಿಂತ ಹೆಚ್ಚು ಮೆಚ್ಚುವುದಕ್ಕೆ ನಗರ ಕೇಂದ್ರಿತ ಉನ್ನತ ಶಿಕ್ಷಣ, ಅದು ದೊರಕಿಸಿಕೊಟ್ಟ  ಉದ್ಯೋಗಗಳು ಕಾರಣವಾಗುವವೇ ಎನ್ನುವ ಕುತೂಹಲಕರ ಆಯಾಮ ಸಿನೆಮಾಗೆ ಒದಗಿ ಬರುತ್ತದೆ.

೭. ಇನ್ನು ಸಿನೆಮ ಹೇಳುವುದು ಏನನ್ನು? ಹೇಳಬೇಕಿರುವುದನ್ನು ಉಪಸಂಹಾರದ ಹಾಗೆ ಕಡೆಯಲ್ಲೇ ಹೇಳಬೇಕೆಂದಿಲ್ಲ. ಚಿತ್ರ ಕಡೆಯಲ್ಲಿ ಬದುಕನ್ನು ಪೂರ್ತಿಯಾಗಿ ಅನುಭವಿಸು ಎನ್ನುವ abstract ಸಂದೇಶ ನೀಡಿದಂತೆ ಕಾಣುತ್ತದೆ. ಆದರೆ ನೆನಪಿಡಿ ಇದು ಸಿನೆಮಾ ನಿರೂಪಿಸುತ್ತಿರುವ ನಾಯಕ ಇಡೀ ಕಥನಕ್ಕೆ ನೀಡುವ ಉಪಸಂಹಾರವಷ್ಟೇ ಆಗುವ ಸಾಧ್ಯತೆಯಿದೆ.

ನನಗೆ ಕಂಡಂತೆ ಸಿನೆಮ ಹೇಳುವುದು: ಆಧುನಿಕ ಸಮಾಜ ನಾಗರೀಕವಾಗುತ್ತ, ನಾಗರೀಕವಾಗುವ ಪ್ರಕ್ರಿಯೆಯನ್ನು ಸೂಕ್ಷ್ಮ, ಅತಿ ಸೂಕ್ಷ್ಮವಾಗಿಸುತ್ತಿದೆ. ಈ ನಾಗರೀಕತೆ ನಿರ್ಮಿಸುತ್ತಿರುವ ಯುವಕರು ಎಷ್ಟು ನಾಜೂಕೆಂದರೆ  ರಸ್ತೆ ಮಧ್ಯೆ ನಿಂತು ಎತ್ತರಿಸಿದ ದನಿಯಲ್ಲಿ ಜಗಳ ಆಡಲಾರರು, ಅವಾಚ್ಯ ಶಬ್ಧವನ್ನು ಬಳಸಲಿಕ್ಕೇ ಆಗದವರು, ಕೈ ಎತ್ತಿ ಯಾರನ್ನಾದರೂ ಹೊಡೆಯುವುದು ಎಂತಹ ಕೋಪದಲ್ಲೂ ಸಾಧ್ಯವಿಲ್ಲ.  ನಮ್ಮ ಪರಿಸರದಲ್ಲಿನ ಆಧುನಿಕ, ನಾಗರೀಕ ಎನ್ನಿಸುವ ವರ್ಗಕ್ಕೆ ಸೇರಿದ ಈ ನಾಯಕ (ಹಾಗೆ ನೋಡಿದರೆ ಪಂಚರಂಗಿಯ ಸಹೋದರರೂ) ವಿಪರೀತವಾಗಿ ನಾಗರೀಕರಾಗುತ್ತ ತಮ್ಮ ವ್ಯಕ್ತಿತ್ವದ ಮೂಲಭೂತವಾದ ಜೈವಿಕ (Biological) ಆಯಾಮವನ್ನೇ ಮರೆಯುತ್ತಿದ್ದಾರಾ?

ಈ ಒಳನೋಟವನ್ನು ದೊರಕಿಸಿಕೊಟ್ಟ ಪ್ರಸಂಗ ನಡೆದದ್ದು ಥಿಯೇಟರಿನಲ್ಲೇ. ಮೊದಲ ಹುಡುಗಿ ತಣ್ಣಗೆ ತನಗೆ ಇನ್ನೊಬ್ಬನೊಂದಿಗೆ ನಿಶ್ಚಿತಾರ್ಥವಾಗಿದೆ ಎಂದಾಗ ನಾಯಕ ತನಗುಂಟಾಗುವ ಭಾವ ತಲ್ಲಣವನ್ನು ಸಿನೆಮಾಗಳಲ್ಲಿ ಕ್ಲೀಶೆಯಾಗುವಷ್ಟು  ಬಳಸಿರುವ ಜ್ವಾಲಾಮುಖಿ ಸ್ಪೋಟ, ಗುಡುಗು, ಸಮುದ್ರದ ಅಲೆಗಳನ್ನು ನೆನಪಿಸಿಕೊಳ್ಳುವುದರ ಮೂಲಕ ವ್ಯಾಖ್ಯಾನಿಸುತ್ತಾನೆ! (ಮುಂದೆ ತನಗೆ ಯಾವುದೂ ಫ್ರೆಶ್ ಅನ್ನಿಸುತ್ತಿಲ್ಲ ಎಲ್ಲವೂ ಸೆಕೆಂಡ್ ಹ್ಯಾಂಡ್ ಅನ್ನಿಸುತ್ತಿದೆ ಎನ್ನುವ ನಾಯಕನದು ಮುಗ್ಧತೆ ಬಹು ಬೇಗ ಬಿಟ್ಟುಕೊಟ್ಟ ಈ ತಲೆಮಾರಿನ ಹುಡುಗ ಹುಡುಗಿಯರ ತಲ್ಲಣವೇ ಆಗಿದೆಯೇ?) ಹಾಗೆ ಹೇಳುತ್ತ ಆಕೆ ಅದನ್ನು ಹೇಳಿದಾಗ ತನಗೆ ಕೋಪ ಬಂದರೂ ಅವಳನ್ನು ಬೈಯಬೇಕು ಅನ್ನಿಸಲಿಲ್ಲ ಎನ್ನುತ್ತಾನೆ. ಈ ಸಮಯಕ್ಕೆ ಸರಿಯಾಗಿ ಥಿಯೇಟರಿನಲ್ಲಿದ್ದ ಹುಡುಗನೊಬ್ಬ "ಯಾಕಂದ್ರೆ ನೀನು ಗಂಡಸಲ್ಲ ಕಣೋ!" ಎಂದು ಕೂಗಿದ. ನಾಯಕನ ನಿರೂಪಣೆಯಲ್ಲಿರುವ ಇಡೀ ಸಿನೆಮಾಗೆ ಈ ಒಂದು ಪ್ರತಿಕ್ರಿಯೆಯೇ ಶಕ್ತಿಶಾಲಿ ರೀಡಿಂಗ್ ಒದಗಿಸಬಲ್ಲದು.

ಪಂಚರಂಗಿಯಲ್ಲಿ ಮದುವೆಯ ಬ್ರೋಕರ್ ಆದ ರಾಜು ತಾಳಿಕೋಟೆ "ಗಂಡು ಹೆಣ್ಣು, ಪಸೀನ ಪಸೀನ ಆಗಬೇಕು, ಮಕ್ಕಳು ಹುಟ್ಟಬೇಕು" ಎನ್ನುವುದು, ಲೈಫು ಇಷ್ಟೇನೆ ಸಿನೆಮಾದಲ್ಲಿ ಅದೇ ರಾಜು ತಾಳಿಕೋಟೆ ಪ್ರಾಯದ ಹುಡುಗೀರ ಹಾಸ್ಟೆಲಿನ ವಾಚ್ ಮನ್ ಆಗಿದ್ದು "ನಾವು ಹುಟ್ಟಿರೋದೆ ಇನ್ನೊಬ್ಬರನ್ನು ಹುಟ್ಟಿಸುವುದಕ್ಕೆ" ಎನ್ನುವುದು ಎಲ್ಲ ಕಾಕತಾಳೀಯವೇನೆಲ್ಲ. ತೀವ್ರವಾದ ಎಚ್ಚರದಿಂದ ಅಳವಡಿಸಿರುವ ಥೀಮ್ ಗಳು.

೮. ಕಡೆಯದಾಗಿ ಈ ಸಿನೆಮ ಪಂಚರಂಗಿಯ ವಿಸ್ತರಣೆಯಾಗಿ, ಅದಕ್ಕಿಂತಲೂ ಸ್ಪಷ್ಟವಾಗಿ ಇರುವುದಕ್ಕೆ ಕಾರಣದ ಅಂಶವೊಂದಿದೆ. ಈ ಸಿನೆಮಾ ಆಧುನಿಕ ಗಂಡಿನ virginity consciousness (ಕನ್ಯತ್ವ ಪ್ರಜ್ಞೆ ಎನ್ನಲಿಕ್ಕೆ ಸಾಧ್ಯವೇ?) ಗುರುತಿಸಿದ ಹಾಗೂ ಅದನ್ನು ಕುರಿತು ಮಾತಾಡಿದ ಮೊಟ್ಟ ಮೊದಲ ಕನ್ನಡ ಸಿನೆಮ ಆಗಿದೆ. ಸಿನೆಮಗಳಲ್ಲಿನ ಪ್ರೇಮ ಕಥಾನಕದ ದಿಕ್ಕನ್ನು ಬದಲಿಸುವಷ್ಟು ಸಮರ್ಥವಾದುದಾಗಿದೆ. ಆರು ಪ್ರೇಮ ಪ್ರಕರಣಗಳನ್ನು ಅನುಭವಿಸಿದ ನಾಯಕ ಏಳನೆಯ ಹುಡುಗಿಯ ಸಮ್ಮುಖದಲ್ಲಿ ತನಗೆ ಎಲ್ಲವೂ ಸೆಕೆಂಡ್ ಹ್ಯಾಂಡ್ ಆಗಿ ಕಾಣುತ್ತಿರುವುದು, ಪ್ರೀತಿ ಫ್ರೆಶ್ ಅನ್ನಿಸದೇ ಇರುವುದು, ಹಳೆಯ ನೆನಪುಗಳು ಹೊಸ ಅನುಭವದ ಸಂವೇದನೆಯನ್ನು ಮಂಕಾಗಿಸುವುದನ್ನು ಗ್ರಹಿಸುತ್ತಾನೆ. ದೈಹಿಕವಾಗಿ, ಮಾನಸಿಕವಾಗಿ ಪರಿಶುದ್ಧವಾಗಿರಬೇಕೆಂಬ ಅಪೇಕ್ಷೆಯ ಬಂಧವನ್ನು ಹೆಣ್ಣಿನ ಮೇಲಿಂದ ಸಡಿಲ ಗೊಳಿಸುತ್ತ ಆಧುನಿಕ ಗಂಡು ತನ್ನ ಮೇಲೆ ಹೇರಿಕೊಳ್ಳುತ್ತಿದ್ದಾನೆಯೇ? ತಾನೂ ಶುದ್ಧನಾಗಿರಬೇಕೆಂಬ ಪ್ರಜ್ಞೆ ಮೂಡಿದ ಹೊಸ ಗಂಡನ್ನು ವ್ಯಾಖ್ಯಾನಿಸುವ, ಮುಟ್ಟುವ, ಮಾತಾಡಿಸುವ ಕಥಾನಕಗಳು ಹುಟ್ಟಿಕೊಳ್ಳಬೇಕಾದ ಅವಶ್ಯಕತೆ ಇದೆಯೇ?ಲೈಫು ಇಷ್ಟೇನೆ ಸಿನೆಮಾವಂತೂ ಪ್ರಶ್ನೆಗಳನ್ನು ಸ್ಪಷ್ಟವಾಗಿ ಎತ್ತುತ್ತದೆ.

ಅಚ್ಚರಿಯೆಂದರೆ ಪಂಚರಂಗಿ ಹಾಗೂ ಲೈಫು ಇಷ್ಟೇನೆ ಸಿನೆಮಗಳೆರಡರಲ್ಲ್ಲೂ ಗೊಂದಲದಲ್ಲಿ ಬೀಳುವುದು, ಚಂಚಲರಾಗುವುದು, ಅಪ್ರಬುದ್ಧವಾದ ಜೀವನ ದೃಷ್ಟಿಯನ್ನು ಹೊಂದಿರುವುದು ಗಂಡು! ಪ್ರಬುದ್ಧವಾಗಿ ಯೋಚಿಸುವುದು (ನೀನು ಸುಮ್ಮನೆ ಎಲ್ಲವನ್ನು ಅನಲೈಸ್ ಮಾಡಬೇಡ ಎನ್ನುವ ಲೈಫು ಇಷ್ಟೇನೆ ನಾಯಕಿ) , ಮಾರ್ಗದರ್ಶನ ಮಾಡಲು ಮುಂದಾಗುವುದು ( ಬಾ ಬದುಕುವ ದಾರಿ ತೋರಿಸ್ತ್ತೇನೆ ಎನ್ನುವ ಪಂಚರಂಗಿ ನಾಯಕಿ), ಗಟ್ಟಿ ಹೆಗಲು ನೀಡುವುದು ಹೆಣ್ಣು! ಆಧುನಿಕ ದಾಂಪತ್ಯದಲ್ಲಿನ role reversal ಸೂಚನೆಯೇ ಇದು? 

Monday, May 2, 2011

“ಸುಳಿ” ಚಿತ್ರೀಕರಣ ಮುಂದಕ್ಕೆ

ಕಳೆದ ವಾರಾಂತ್ಯದಲ್ಲಿ ಯೋಜಿಸಿದ್ದ “ಸುಳಿ” ಕಿರುಚಿತ್ರದ ಚಿತ್ರೀಕರಣ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದೆ. ಮುಂದಿನ ಶೆಡ್ಯೂಲ್ ಕುರಿತ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಇದುವರೆಗೆ ನೀವು ತೋರಿರುವ ಆಸಕ್ತಿ ಹಾಗೂ ನೀಡಿದ ಬೆಂಬಲ ನಮ್ಮನ್ನು ಹುರಿದುಂಬಿಸುತ್ತಲಿದೆ. ಧನ್ಯವಾದಗಳು.

ಮತ್ತೊಂದು ಕಿರುಚಿತ್ರ!


ಭೂತಗನ್ನಡಿ ತಂಡದಲ್ಲಿ ವಿಪರೀತ ಚಟುವಟಿಕೆಯ ಸಮಯವಿದು. ಹಿಂದಿನ ವಾರವಿಡೀ “ಸುಳಿ” ಕಿರುಚಿತ್ರದ ಚಿತ್ರೀಕರಣದ ವಿವರಗಳನ್ನು ಓದಿದಿರಿ. ಅನಿವಾರ್ಯ ಕಾರಣಗಳಿಂದ ಕಳೆದ ವಾರಾಂತ್ಯದಲ್ಲಿ ಆ ಚಿತ್ರದ ಚಿತ್ರೀಕರಣದ ಎರಡನೆಯ ಭಾಗ ನಡೆಸುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ ಸುಮ್ಮನೆ ಕೂರುವ ಜಾಯಮಾನ ಭೂತಗನ್ನಡಿಯ ಸದಸ್ಯರಿಗೆ ಇಲ್ಲವೇ ಇಲ್ಲ.

ರೂಪಲಕ್ಷ್ಮಿಯವರ ಕತೆ, ಕಿರಣ್ ರ ಚಿತ್ರಕತೆ ಹೊಂದಿರುವ ಇನ್ನೂ ಹೆಸರಿಡದ ಎರಡನೆಯ ಕಿರುಚಿತ್ರದ ಚಿತ್ರೀಕರಣ ಕೈಗೆತ್ತಿಕೊಂಡೆವು. ಭಾರಿ ಮಳೆಯ ನಡುವೆಯೇ ಶನಿವಾರ ರಿಹರ್ಸಲ್ ನಡೆಸಿ ಭಾನುವಾರ ಬೆಳಗಿನಿಂದಲೇ ಒಳಾಂಗಣ ಸನ್ನಿವೇಶಗಳ ಚಿತ್ರೀಕರಣ ನಡೆಸಲಾಯ್ತು.

ಚಿತ್ರದ ಹಾಗೂ ಚಿತ್ರೀಕರಣದ ವಿವರಗಳು ಮುಂದಿನ ದಿನಗಳಲ್ಲಿ ಭೂತಗನ್ನಡಿಯಲ್ಲಿ ಮೂಡಿ ಬರಲಿವೆ.

ಕಳೆದ ವಾರಾಂತ್ಯದ ಚಿತ್ರೀಕರಣದ ಕೆಲವು ಫೋಟೊಗಳು ನಿಮಗಾಗಿ:






Wednesday, April 27, 2011

ಚಿತ್ರೀಕರಣದ ವಿವರಗಳು



ಕನ್ನಡದ ಪರಿಸರದಲ್ಲಿ ದೃಶ್ಯ ಮಾಧ್ಯಮಕ್ಕೊಂದು ಗಂಭೀರವಾದ ನೆಲೆಗಟ್ಟು ಒದಗಿಸಿಕೊಡಬೇಕು ಎನ್ನುವುದು ಸಂವಾದ ಡಾಟ್ ಕಾಂನ ಆಶಯ. ದೃಶ್ಯ ಮಾಧ್ಯಮಗಳಾದ ಸಿನೆಮ, ದೂರದರ್ಶನ, ಫೊಟೊಗ್ರಫಿ, ಚಿತ್ರಕಲೆ, ರಂಗಭೂಮಿ- ಇವುಗಳಲ್ಲಿ ಕನ್ನಡಿಗರು ಹೊಸ ಸಾಧ್ಯತೆಗಳನ್ನು ಅನ್ವೇಷಿಸಲಿ, ನವೀನ ಪ್ರಯತ್ನಗಳು ಮೂಡಿ ಬರಲಿ ಎನ್ನುವುದು ನಮ್ಮ ಹಾರೈಕೆ.

ಈ ದಿಸೆಯಲ್ಲಿ ನಾವು ಕೈಗೆತ್ತಿಕೊಂಡಿರುವ ಅನೇಕ ಯೋಜನೆಗಳಲ್ಲಿ ಕಿರುಚಿತ್ರ ನಿರ್ಮಾಣ ಕೂಡ ಒಂದು. ಕಳೆದ ವಾರಾಂತ್ಯದಲ್ಲಿ ‘ಸುಳಿ’ ಎನ್ನುವ ಕಿರುಚಿತ್ರವೊಂದರ ಚಿತ್ರೀಕರಣ ನಡೆಯಿತು. ಶೇ. ೭೦ರಷ್ಟು ಚಿತ್ರೀಕರಣ ಮುಗಿದಿರುವ ಈ ಕಿರುಚಿತ್ರದಲ್ಲಿ ಕೆಲಸ ಮಾಡಿದ ನಟರು ಹಾಗೂ ತಂತ್ರಜ್ಞರು ಎಲ್ಲರೂ ಹವ್ಯಾಸಿಗಳು. ಎಲ್ಲರಿಗೂ ಇದು ಮೊದಲ ಪ್ರಾಜೆಕ್ಟ್.

ನಾವು ನಿರ್ಮಿಸುವ ಚಿತ್ರದಷ್ಟೇ ಚಿತ್ರ ನಿರ್ಮಾಣದ ಪ್ರಕ್ರಿಯೆಯೆಡೆಗಿನ ನಮ್ಮ ಅಪ್ರೋಚ್ ಕೂಡ ಮುಖ್ಯ. ಗುರಿಯಷ್ಟೇ ಹಾದಿಯೂ ಮುಖ್ಯ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ಚಿತ್ರ ನಿರ್ಮಾಣದಲ್ಲಿ ನಾವು ತೊಡಗಿಕೊಂಡಿರುವ ರೀತಿ, ನಾವು ಬಳಸುವ ಸಂಪನ್ಮೂಲಗಳು, ನಮ್ಮ ಆಯ್ಕೆಗಳು, ಮಿತಿಗಳು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತೇವೆ.

‘ಸುಳಿ’ ಕಿರುಚಿತ್ರದ ಚಿತ್ರೀಕರಣ ಕುರಿತಾದ ವಿವರಗಳು ಇಂತಿವೆ:

ಕಿರುಚಿತ್ರದ ಶೀರ್ಷಿಕೆ: ಸುಳಿ

ಚಿತ್ರದ ಅವಧಿ: ೧೫-೨೦ ನಿಮಿಷ
ನಟವರ್ಗ:

ಶಶಿಭಟ್
ಅನಿರುದ್ಧ ಭಟ್ ಇನ್ನಂಜೆ
ಕಾಂತಿ ಹೆಗಡೆ
ಶಿವಕುಮಾರ್
ವೆಂಕಿ ಹೊನ್ನಾವರ್
ಹೇಮ ಪವಾರ್
ಸೀತಾ ಚಂದ್ರಶೇಖರ್
ತಂತ್ರಜ್ಞರು:

ಚಿತ್ರಕತೆ, ನಿರ್ದೇಶನ, ಕೆಮರಾ: ಸುಪ್ರೀತ್.ಕೆ.ಎಸ್
ಸಹ ನಿರ್ದೇಶನ: ಶಿವಕುಮಾರ್.ಪಿ
ನಿರ್ಮಾಣ ನಿರ್ವಹಣೆ: ಹೇಮ ಪವಾರ್

ಸಲಕರಣೆಗಳು:

ಕೆಮರಾ: Canon 550D, SLR camera
ಲೆನ್ಸುಗಳು: 15mm, 18-55mm, 55-250mm,
ಬೆಳಕು: ಒಂದು ೧೦೦೦ ವ್ಯಾಟ್ ಫ್ಲಡ್ ಲೈಟ್, ಎಲ್ ಇ ಡಿ ಬಲ್ಬುಗಳು, ಸಿ.ಎಫ್.ಎಲ್ ಲ್ಯಾಂಪ್


ಬಜೆಟ್:
ಸಿನೆಮ ಬಜೆಟನ್ನು ನಿಖರವಾದ ಅಂಕಿಅಂಶಗಳಿಗೆ ಇಳಿಸುವುದು ತೊಡಕಿನ ವಿಚಾರ. ಈ ಪ್ರಾಜೆಕ್ಟಿನಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ತಮ್ಮ ಓಡಾಟ, ಊಟ ತಿಂಡಿ, ಕಾಸ್ಟ್ಯೂಂಗಳನ್ನು ತಾವೇ ನೋಡಿಕೊಂಡಿರುತ್ತಾರೆ. ಹೀಗಾಗಿ ಇವೆಲ್ಲ ಬಜೆಟ್ ಒಳಗೆ ಸೇರುವುದಿಲ್ಲ. ಇನ್ನು ಕೆಮರ, ಲೈಟುಗಳು ನಮಗೆ ಉಚಿತವಾಗಿ ಲಭ್ಯವಾದ್ದರಿಂದ ಅವುಗಳಿಂದ ಖರ್ಚಾಗಲಿಲ್ಲ.

ಶೂಟಿಂಗ್ ಸಂಬಂಧಿಸಿದ ಪರಿಕರಗಳ ಮೇಲೆ ಖರ್ಚು ಮಾಡಬೇಕಾಗಿ ಬಂದಿತು. ಶೂಟಿಂಗ್ ಎಲ್ಲ ಮುಗಿದು ಪೋಸ್ಟ್ ಪ್ರೊಡಕ್ಷನ್ ಸಮಯದಲ್ಲಿ ತಂತ್ರಜ್ಞರಿಗೆ ಸಂಭಾವನೆ ಕೊಡುವ ಸಂದರ್ಭ ಬಂದರೆ ಬಜೆಟ್ ಏರಬಹುದು.

ಸುಮಾರು ಎರಡರಿಂದ ಎರಡುವರೆ ಸಾವಿರ ರುಪಾಯಿಗಳನ್ನು ನಾವು ಬಜೆಟ್ ಎಂದು ಈ ಕಿರುಚಿತ್ರಕ್ಕೆ ತೆಗೆದಿರಿಸಿದ್ದೇವೆ. ಮುಂದಿನ ವರದಿಗಳಲ್ಲಿ ನಿಖರವಾದ ಅಂಕಿ ಅಂಶಗಳನ್ನು ನೀಡುತ್ತೇವೆ.

Tuesday, April 26, 2011

ಸುಳಿ ಚಿತ್ರದ ಮೊದಲ ಟೀಸರ್

"ಸುಳಿ" ಕಿರುಚಿತ್ರದ ಚಿತ್ರೀಕರಣ ಕಳೆದ ವಾರಾಂತ್ಯದಲ್ಲಿ ನಡೆಯಿತು. ನಾವು ನಿರ್ಮಿಸುವ ಚಿತ್ರದಷ್ಟೇ ಚಿತ್ರ ನಿರ್ಮಾಣದ ಪ್ರಕ್ರಿಯೆಯೆಡೆಗಿನ ನಮ್ಮ ಅಪ್ರೋಚ್ ಕೂಡ ಮುಖ್ಯ. ಗುರಿಯಷ್ಟೇ ಹಾದಿಯೂ ಮುಖ್ಯ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ಚಿತ್ರ ನಿರ್ಮಾಣದಲ್ಲಿ ನಾವು ತೊಡಗಿಕೊಂಡಿರುವ ರೀತಿ, ನಾವು ಬಳಸುವ ಸಂಪನ್ಮೂಲಗಳು, ನಮ್ಮ ಆಯ್ಕೆಗಳು, ಮಿತಿಗಳು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತೇವೆ.

ಈ ನಿಟ್ಟಿನಲ್ಲಿ ಮೂಡಿ ಬಂದಿರುವ ಮೊದಲ ಟೀಸರ್ ಇಲ್ಲಿದೆ, ನೋಡಿ ಆನಂದಿಸಿ:





Sunday, April 24, 2011

ಎರಡನೇ ದಿನದ ಯಶಸ್ವಿ ಚಿತ್ರೀಕರಣ

ಮೊದಲ ದಿನದ ಕಿರಿಕಿರಿ, ಕಷ್ಟ ಕಾರ್ಪಣ್ಯ, ಬೇಸರ, ಬಿಗುಮಾನಗಳಿಗೆ ಸಮಾಧಾನ ಎಂಬಂತೆ ಎರಡನೆಯ ದಿನದ ಚಿತ್ರೀಕರಣ ಸುಸೂತ್ರವಾಗಿ ನಡೆಯಿತು. ತಂಡದಲ್ಲಿ ನೆಲೆನಿಲ್ಲ ತೊಡಗಿದ್ದ ಗೆಳೆತನ, ಪ್ರಬುದ್ಧತೆಯಿಂದ ಪ್ರತಿಯೊಬ್ಬರ ಉತ್ಸಾಹ ಹೆಚ್ಚಿತ್ತು. ಬೆಳಿಗ್ಗೆ ಹನ್ನೊಂದರಿಂದ ಮೂರು ಗಂಟೆಯವರೆಗೆ ಸಮಯದ ಪರಿವೆಯೇ ಇಲ್ಲದೆ ಚಿತ್ರೀಕರಣ ನಡೆಯಿತು. ನಂತರ ನಾಲ್ಕರಿಂದ ರಾತ್ರಿ ಒಂಭತ್ತರವರೆಗೆ ಹೊರಾಂಗಣ ಚಿತ್ರೀಕರಣ ನೆಡೆಯಿತು. ದಿನದ ಅಂತ್ಯಕ್ಕೆ ನಮ್ಮೆಲ್ಲರಲಿ ಚೂರು ಪ್ರಗತಿ ಕಂಡ ನೆಮ್ಮದಿ ನೆಲೆಸಿತ್ತು.

‘ಸುಳಿ’ ಕಿರುಚಿತ್ರದ ಶೇ ೭೦ರಷ್ಟು ಭಾಗದ ಚಿತ್ರೀಕರಣ ಈ ವಾರಂತ್ಯದಲ್ಲಿ ನಡೆದಿದೆ. ಭಾಗಗಳ ಚಿತ್ರೀಕರಣ ಮುಂದಿನ ವಾರಾಂತ್ಯದಲ್ಲಿ ಪೂರೈಸುವ ಯೋಜನೆಯಿದೆ.

ಇಂದಿನ ಚಿತ್ರೀಕರಣದ ಕೆಲವು ಫೋಟೊಗಳು:


Saturday, April 23, 2011

ಮೊದಲ ದಿನದ ಚಿತ್ರೀಕರಣ


ಮೊದಲ ಚುಂಬನ ದಂತ ಭಗ್ನ! ಮೊದಲ ದಿನದ ಚಿತ್ರೀಕರಣ ಇದಕ್ಕಿಂತ ಹೊರತಾದ ಅನುಭವವೇನಾಗಿರಲಿಲ್ಲ. ಬೆಳಗಿನಿಂದಲೂ ಮೋಡದ ಮರೆಯಲ್ಲಿ ಅವಿತಿದ್ದ ಸೂರ್ಯ. ಹತ್ತು ಗಂಟೆಗೆ ಶುರುವಾಗಬೇಕಾಗಿದ್ದ ಚಿತ್ರೀಕರಣ ಶುರುವಾದದ್ದು ಒಂದು ಗಂಟೆಗೆ. ಮೂರು ಸೀನ್‌ಗಳು ಪೂರೈಸಬೇಕಿದ್ದ ಶೆಡ್ಯೂಲ್ ಗಾಳಿಗೆ ತೂರಲ್ಪಟ್ಟಿತು. ಚಿತ್ರೀಕರಣದ ಪ್ರಾಯೋಗಿಕ ಕಷ್ಟಗಳು, ಕಿರಿಕಿರಿಗಳು ಎಲ್ಲವನ್ನೂ ಇಂಚಿಂಚಾಗಿ ಅನುಭವಿಸುತ್ತ ಚಿತ್ರೀಕರಣ ನೆಡೆಸಲಾಯ್ತು. ಫ್ಲಾಶ್ ಬಲ್ಬ್ ಸುಟ್ಟು ಹೋಗುವವರೆಗೂ ನಮ್ಮ ಉತ್ಸಾಹವೂ ಸಾವಿರ ವ್ಯಾಟ್ ಗಳಷ್ಟು ಇತ್ತು.ಮಳೆಯ ಆರ್ಭಟವನ್ನು ಶಪಿಸುತ್ತ ನಾಳಿನ ಚಿತ್ರೀಕರಣಕ್ಕೆ ತಯಾರಿ ಶುರುವಾಗ್ತಿದೆ.

ಇಂದಿನ ಸಾಹಸದ ಕೆಲವು ಫೊಟೊಗಳು:







Friday, April 22, 2011

"ಸುಳಿ" ಚಿತ್ರದ ರಿಹರ್ಸಲ್ ವರದಿ

ಶನಿವಾರ, ಭಾನುವಾರದಂದು ಚಿತ್ರೀಕರಣ ನಿರ್ಧರಿತವಾಗಿರುವ "ಸುಳಿ" ಕಿರುಚಿತ್ರದ ಮುಖ್ಯ ಪಾತ್ರಗಳ ರಿಹರ್ಸಲ್ ಇಂದು ಯಶಸ್ವಿಯಾಗಿ ನಡೆಯಿತು.

ಕಿರುಚಿತ್ರದ ಬಹುಪಾಲು ಪೇಪರ್ ವರ್ಕ್ ಹಾಗೂ ಚಿತ್ರೀಕರಣದ ಶೆಡ್ಯೂಲ್ ತಯಾರು ಮಾಡಿಟ್ಟುಕೊಳ್ಳಲಾಯಿತು. ನಾಳೆ ಶನಿವಾರ ಬೆಳಗಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರೀಕರಣದ ಆಗುಹೋಗುಗಳನ್ನು ಟ್ವಿಟರಿನಲ್ಲಿ ಅಪ್ಲೋಡ್ ಮಾಡುತ್ತೇವೆ.

ರಿಹರ್ಸಲ್ ‌ನ ಒಂದೆರಡು ಫೋಟೊಗಳು ಇಲ್ಲಿವೆ:




Thursday, April 21, 2011

ಕಿರುಚಿತ್ರ ‘ಸುಳಿ’ ಚಿತ್ರೀಕರಣದಲ್ಲಿ...

ಸಂವಾದ ಡಾಟ್ ಕಾಂ ಆಶ್ರಯದಲ್ಲಿ ಪೂರ್ಣ ಪ್ರಮಾಣದ ಸಿನೆಮ ಒಂದನ್ನು ನಿರ್ಮಿಸಲು ನಾವು ತೊಡಗಿಕೊಂಡು ತುಂಬಾ ದಿನಗಳು ಕಳೆದವು. ಚಿತ್ರಕತೆಯ ಚರ್ಚೆಯಲ್ಲಿ ಹೆಚ್ಚಿನ ಸಮಯ ಕಳೆದ ನಮಗೆ ಪೂರ್ಣ ಪ್ರಮಾಣದ ಚಿತ್ರ ನಿರ್ಮಾಣದ ಸವಾಲುಗಳು ಒಂದೊಂದಾಗಿ ಎದುರಾದವು. ದೊಡ್ಡ ಪ್ರಯತ್ನಕ್ಕೆ ಮುನ್ನ ಕೆಲವು ಸಣ್ಣ ಯೋಜನೆಗಳನ್ನು ಪೂರೈಸಿ ಆತ್ಮವಿಶ್ವಾಸ ವೃದ್ಧಿಸಿಕೊಂಡರೆ ಒಳ್ಳೆಯದು ಎಂದು ನಮಗೆ ಕಂಡಿತು. ಅದಕ್ಕಾಗಿ ನಾಲ್ಕು ಕಿರು ಚಿತ್ರದ ಚಿತ್ರಕತೆಯನ್ನು ತಯಾರು ಮಾಡಿಟ್ಟುಕೊಂಡೆವು.


ಭೂತಗನ್ನಡಿ ಬ್ಲಾಗಿನ ಸದಸ್ಯರಾದ ಸುಪ್ರೀತ್.ಕೆ.ಎಸ್, ರೂಪ ಲಕ್ಷ್ಮಿ, ಕಿರಣ್.ಎಂ, ಮುಕುಂದ್ ಚಿತ್ರಕತೆಗಳನ್ನು ಬರೆದಿದ್ದಾರೆ. ಈ ಕಿರುಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಇರುವವರಿಗೆಂದು ಕಳೆದ ಭಾನುವಾರ ಒಂದು ಆಡಿಷನ್ ಹಮ್ಮಿಕೊಂಡಿದ್ದೆವು. ಸುಮಾರು ಐವತ್ತಕ್ಕು ಹೆಚ್ಚು ಮಂದಿ ಆಡಿಷನ್‌ನಲ್ಲಿ ಭಾಗವಹಿಸಿದರು. ನಟನೆಯಷ್ಟೇ ಅಲ್ಲದೆ ತೆರೆಯ ಹಿಂದಿನ ಕೆಲಸಗಳಲ್ಲಿ ಕೈಜೋಡಿಸಲು ಅನೇಕರು ಮುಂದೆ ಬಂದಿದ್ದಾರೆ. ಇವರೆಲ್ಲರ ಆಸಕ್ತಿ ಹಾಗೂ ಬೆಂಬಲ ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಿದೆ.

ಕಿರುಚಿತ್ರಗಳ ಚಿತ್ರೀಕರಣ ಮುಂದಿನ ದಿನಗಳಲ್ಲಿ ನಡೆಯಲಿದೆ. ಯೋಜನೆಯ ಮೊದಲ ಭಾಗವಾಗಿ ಸುಪ್ರೀತ್ ಬರೆದಿರುವ ಚಿತ್ರಕತೆಯ ಚಿತ್ರೀಕರಣ ಕೈಗೆತ್ತಿಕೊಳ್ಳಲಾಗಿದೆ. ನಟವರ್ಗವನ್ನು ತೀರ್ಮಾನಿಸಲಾಗಿದ್ದು ಈ ವಾರಾಂತ್ಯದಲ್ಲಿ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ.


ಚಿತ್ರದ ಕುರಿತ ಹೆಚ್ಚಿನ ಮಾಹಿತಿಯನ್ನು ಈ ಬ್ಲಾಗಿನಲ್ಲಿ ಹಾಗೂ ಟ್ವಿಟರ್ ಪೇಜಿನಲ್ಲಿ ಹಂಚಿಕೊಳ್ಳಲಾಗುವುದು. ಎಂದಿನಂತೆ ನಿಮ್ಮ ಸಹಕಾರ ಹಾಗೂ ಬೆಂಬಲದ ನಿರೀಕ್ಷೆಯಲ್ಲಿ


ಕಿರುಚಿತ್ರದ ಶೀರ್ಷಿಕೆ: ಸುಳಿ


ಚಿತ್ರದ ಅವಧಿ: -೨೦ ನಿಮಿಷ

ಕಿರುಚಿತ್ರದ ನಟವರ್ಗ ಇಂತಿದೆ:


ಪಾತ್ರ: ಅನೀಶ್, ಸಾಫ್ಟ್ ವೇರ್ ಇಂಜಿನಿಯರ್

ನಟ: ಶಶಿಭಟ್












ಪಾತ್ರ: ಉಮೇಶ್, ಟಿವಿ ಜರ್ನಲಿಸ್ಟ್

ನಟ: ಅನಿರುದ್ಧ











ಪಾತ್ರ: ವೀಣ, ಅನೀಶ್ ಮದುವೆಯಾಗಲಿರುವ ಹುಡುಗಿ

ನಟಿ: ಕಾಂತಿ.ಎಂ.ಜಿ









ಪಾತ್ರ: ಅನೀಶ್ ಆಫೀಸಿನ ಮ್ಯಾನೇಜರ್

ನಟ: ಶಿವಕುಮಾರ್ ಶೆಟ್ಟರ್








ಪಾತ್ರ: ಉಮೇಶ್ ಗೆಳೆಯ

ನಟ:ವೆಂಕಿ ಹೊನ್ನಾವರ್












ಪಾತ್ರ: ಶಿರಿನ್, ಅನೀಶ್ ಗೆಳತಿ

ನಟಿ (ಧ್ವನಿಯಲ್ಲಿ ): ಹೇಮ ಪವಾರ್










ಪಾತ್ರ: ಅನೀಶ್ ತಾಯಿ

ನಟಿ (ಧ್ವನಿಯಲ್ಲಿ): ಸೀತಾ ಚಂದ್ರಶೇಖರ್











ನಟನೇತರರ ತಂಡ:


ಕತೆ, ಚಿತ್ರಕತೆ, ನಿರ್ದೇಶನ: ಸುಪ್ರೀತ್.ಕೆ.ಎಸ್



ಸಹನಿರ್ದೇಶನ: ಶಿವಕುಮಾರ್.ಪಿ


ನಿರ್ಮಾಣ ನಿರ್ವಹಣೆ: ಹೇಮ ಪವಾರ್

Thursday, January 13, 2011

ಪಾಡ್‌ಕಾಸ್ಟ್ #3: ಚಿತ್ರಕತೆಯಲ್ಲಿ ಏನಿರಬೇಕು

ಚರ್ಚಿಸಲ್ಪಟ್ಟ ವಿಷಯಗಳು

೧. ಚಿತ್ರಕತೆಗೆ ಬೇಕಾದ ಸಂಘರ್ಷ ಹಾಗು ಚಿತ್ರ ತೆಗೆದುಕೊಳ್ಳಬೇಕಾದ ನಿಲುವು.
೨. ನಕ್ಸಲ್ ಚಟುವಟಿಕೆ ಕುರಿತ ಒಳನೋಟಗಳು
೩. ನಕ್ಸಲರ ಅಗತ್ಯಗಳು: ಆರ್.ಡಿ.ಎಕ್ಸ್ ಹಾಗೂ ಬಂದೂಕು

Get this widget | Track details | eSnips Social DNA




Podcast #3: The crust of a screenplay
> Elements to be present in the screenplay
> The area of conflict and the moral stand we are going to take
> The needs of naxals: RDX and Guns

URL : conversation #3

(ಮಾತುಕತೆಯಲ್ಲಿ ಭಾಗಿಯಾದವರು:
ಶೇಖರ್ ಪೂರ್ಣ
ಸುಪ್ರೀತ್.ಕೆ.ಎಸ್
ಕಿರಣ್.ಎಂ
ಧ್ವನಿ ಮುದ್ರಣ, ಸಂಸ್ಕರಣೆ: ಸುಪ್ರೀತ್.ಕೆ.ಎಸ್)

Sunday, January 9, 2011

ರೊಮ್ಯಾನ್ಸ್ ಕುರಿತ ಒಂದು ಚರ್ಚೆ

ಕಳೆದ ಪೋಸ್ಟಿನಲ್ಲಿ ಪ್ರಕಟಿಸಿದ ಪಾಡ್ ಕಾಸ್ಟಿನಲ್ಲಿ ನಡೆದ ಮಾತುಕತೆಯ ಕುರಿತು ಬಜ್‌ನಲ್ಲಿ ನಡೆದ ಚರ್ಚೆಯಿದು:

ranjith adiga - Yako avara anisike oppitavagalilla.. supreeth roo tamma endina chintana dhaatiyanu jebolagittu aalisadaru annisitu.

supreeth ks - @ranjit: ಯಾವ ಅನಿಸಿಕೆ ಏಕೆ ಒಪ್ಪಿತವಾಗಲಿಲ್ಲ ಎಂಬುದನ್ನು ಬ್ಲಾಗಿನಲ್ಲಿ ಕಮೆಂಟಿಸಿದರೆ ಚೆನ್ನ. ಇದು ಡಿಬೇಟ್ ಅಲ್ಲ, ಮಾತುಕತೆ. ಶೇಖರ್ ಪೂರ್ಣರನ್ನು ಆಲಿಸುವುದಕ್ಕೆಂದೇ ನಾವು ಅವರನ್ನು ಭೇಟಿ ಮಾಡುವುದು. ನಮ್ಮ ಅಭಿಪ್ರಾಯ ಹೇಳುವ ಮುನ್ನ ಮಾತನಾಡುವವರ ಅಭಿಪ್ರಾಯವನ್ನು ಶಾಂತಿಯಿಂದ ಕೇಳುವ ತಾಳ್ಮೆಯು ಬೇಕಲ್ಲವೇ?

hema powar - @ Supreet ಹಾಗಾದರೆ ಇದು ಒನ್ ಸೈಡ್ ಆರ್ಗ್ಯುಮೆಂಟ್ ಆಯಿತು, ನನಗೆ ತಿಳಿದ ಹಾಗೆ ಚರ್ಚೆ, ಮಾತುಕತೆ ಎಂದು ಮೊದಲೇ ಡಿಸೈಡ್ ಮಾಡಿ ಮಾತಾಡಲು ಬರದು, ಮಾತನಾಡತೊಡಗಿದರೆ ಎಲ್ಲವೂ ಅದಾಗೇ ಶುರುವಾಗುತ್ತದೆ. ನೀವು ಈ ಮಾತುಕತೆಯನ್ನು podcost ಮಾಡಲೆಂದೇ record ಮಾಡಿದ್ದ? ಇಲ್ಲವೆಂದಾದರೆ ನೀವು ಸುಮ್ಮನಿರುವುದನ್ನು ಜಸ್ಟಿಫಐ ಮಾಡಿಕೊಳ್ಳಲಾರಿರಿ :-)

supreeth ks - @hema ಚರ್ಚೆಗೆ ಮೊದಲೇ ವಿಷಯವನ್ನು ನಿಷ್ಕರ್ಷಿಸಿಕೊಂಡರೆ ಆಗ ಎರಡೂ ಬದಿಯ ವಾದಗಳ ಅವಶ್ಯಕತೆ ಇರುತ್ತದೆ. ಪಾಡ್ ಕಾಸ್ಟ್ ಮಾಡಲಿಕ್ಕೆಂದೆ ನಾವು ಮಾತಿಗೆ ಕೂತದ್ದಲ್ಲ. ಸಹಜವಾದ ಮಾತುಕತೆಯನ್ನು ರೆಕಾರ್ಡ್ ಮಾಡಿಟ್ಟುಕೊಂಡು ಪಾಡ್ ಕಾಸ್ಟ್ ಮಾಡಿದ್ದು.
ಎಲ್ಲರೂ ಮಾತಾಡುವುದೇ ಒಳ್ಳೆಯ ಚರ್ಚೆಯಲ್ಲ! ಎಲ್ಲಕ್ಕಿಂತ ಹೆಚ್ಚಾಗಿ, ಡಿಸೈಪಲ್ ಆದವನು ಮೊದಲು ಕೇಳುವುದನ್ನು ಕಲಿಯಬೇಕು ಎಂದು ನಂಬಿದವನು ನಾನು.

hema powar - ಉಹೂಂ ಎಲ್ಲರೂ ಮಾತಾಡುವುದೇ ಒಳ್ಳೆಯ ಚರ್ಚೆ ಎಂದು ನಾನೂ ಒಪ್ಪುವುದಿಲ್ಲ. ಸಹಜವಾದ ಮಾತುಕತೆಯಾದರೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ ಕೇಳುವ ಅವಶ್ಯಕತೆ ಏನಿತ್ತು? ಎನ್ನುವುದಷ್ಟೇ ಪ್ರಶ್ನೆ. ನಿಮ್ಮ ಅಭಿಪ್ರಾಯಗಳು ಕೂಡ ಪ್ರಸ್ತುತ ವಿಷಯವನ್ನು ಇನ್ನಷ್ಟು ಸ್ಪಷ್ಟವಾಗಿಸಲು ಸಹಕರಿಸುತ್ತಿತ್ತಲ್ಲವೇ?

supreeth ks - @ hema: ಮಾತುಕತೆಯಲ್ಲಿ ಮಾತಾಡುವ ವಿಷಯದ ಬಗ್ಗೆ ಏನೂ ತಿಳಿಯದೆ ಬಾಯಿ ಬಿಟ್ಟರೆ ಒಣ ಮಾತುಗಳು ಹೊರಬರುತ್ತವೆಯಷ್ಟೇ. ತಿಳಿದವರು ಮಾತಾಡುವಾಗ ಬಾಯಿ ಮುಚ್ಚಿರಬೇಕು, ಕಿವಿ ತೆರೆದಿರಬೇಕು ಅಲ್ಲವೇ? ನಿಮಗೆ ಯಾವ ವಿಷಯದ ಕುರಿತು ಹೆಚ್ಚಿನ ಸ್ಪಷ್ಟತೆ ಬೇಕು ಎನ್ನುವ ಬಗ್ಗೆ ಬ್ಲಾಗಿನಲ್ಲಿ ಕಮೆಂಟಿಸಿ ಪ್ರಶ್ನಿಸಬಹುದು.

ranjith adiga - ಪಾಡುಕಾಸ್ಟು ಕೇಳುತ್ತಿದ್ದ ನಿಮ್ಮ ಅಭಿಮಾನಿಗಳಾದ ನಮ್ಮಂಥವರಿಗೆ, ಅವರು ಅಂದಿದ್ದಕ್ಕೆ ನಿಮ್ಮದೂ ಒಪ್ಪಿಗೆಯಿತ್ತು ಅನ್ನುವ ಭಾವ ಉಂಟಾಗುತ್ತಿತ್ತು..

supreeth ks - @ranjith: ನಿಮಗೆ ಯಾವ ವಿಷಯಗಳ ಕುರಿತು ಒಪ್ಪಿಗೆಯಿಲ್ಲ ಎನ್ನುವುದನ್ನು ತಿಳಿಸಲೇ ಇಲ್ಲ

Roopa lakshmi - podcast nalli enayitho gottilla, illi olle charche nadeyuttide :-)

supreeth ks - >>> podcast nalli enayitho gottilla
yaake, kelalillave podcast?

ranjith adiga - ista aagadiddudu, indian films nalli romanticism ilve illa anno abhiprayada kuritu.

supreeth ks - @ ranjit: ನಿಮ್ಮ ಇಷ್ಟದ ಕುರಿತು ಏನೂ ಚರ್ಚೆ ನಡೆಸಲಾಗದು. ಅವರ ವಿಚಾರದ ಕುರಿತು ಆಕ್ಷೇಪ ಇದ್ದರೆ ಚರ್ಚೆ ನಡೆಸಬಹುದು.
ಸಿನೆಮಾ ಇರಲಿ, ಯಾವುದೇ ಕಲಾ ಪ್ರಕಾರದಲ್ಲಿಯೂ ರೊಮ್ಯಾನ್ಸ್ ಸ್ವತಂತ್ರವಾಗಿ ಇರುವುದಕ್ಕೆ ಸಾಧ್ಯವೇ ಇಲ್ಲ. ನೋಡಿ ನೀವು ಅತ್ಯುತ್ತಮ ರೊಮ್ಯಾನ್ಸ್ ಸಿನೆಮಾಗಳ ಅಥವಾ ಸಾಹಿತ್ಯದ ಪಟ್ಟಿ ಮಾಡಿ ಕೊಡಿ ಅದರಲ್ಲಿ ರೊಮ್ಯಾನ್ಸ್ ಎನ್ನುವುದು ಜಾತಿ ತಾರತಮ್ಯ, ವರ್ಗ ಸಂಘರ್ಷ, ಬಡತನ ಶ್ರೀಮಂತಿಕೆ, ಕೌಟುಂಬಿಕ ಕಲಹ ಇಂಥ ಎಲಿಮೆಂಟ್ಸ್ ನಿಂದಲೇ ಪರಿಣಾಮಕಾರಿಯಾಗುವುದು. ಇದಿಲ್ಲದ ರೊಮ್ಯಾನ್ಸ್ ಇದ್ದರೆ ತಿಳಿಸಿ.

ranjith adiga - ನನ್ನ ಇಷ್ಟ ಮತ್ತು ನನ್ನ ವಿಚಾರಧಾರೆ ಎರಡೂ ಬೇರೆ ಬೇರೆ ಸಂಗತಿ ಅಲ್ಲ.. ಅಲ್ಲದೇ ರೋಮಾನ್ಸ್ ಸ್ವತಂತ್ರವಾಗಿರುವ ಚಿತ್ರಗಳು ಇಲ್ಲವೇ ಇಲ್ಲವೆಂದಲ್ಲ.. ಹಂ ಆಪ್ ಕೆ ಹೈ ಕೌನ್ ನಂತಹ ಚಿತ್ರಗಳೂ ಇವೆ.. (ಅದಕ್ಕೂ ಯಾವುದಾದರೂ ಎಲಿಮೆಂಟ್ಸ್ ಹುಡುಕಿ ಜೋಡಿಸಬಹುದು ಅನ್ನುವುದರ ಅರಿವಿದೆ) ಚಿತ್ರದ ಹೆಸರು ಕೊಡಿ ಅದರಲ್ಲಿನ ಎಲಿಮೆಂಟ್ಸನ್ನು ಭೇದಿಸಿ ತಿಳಿಸುತ್ತೇನೆ ಎಂದು ಹಟ ಹಿಡಿದರೆ, ಯಾವ ಎಲಿಮೆಂಟ್ಸೂ ಇರದ ರೋಮಾನ್ಸ್ ಚಿತ್ರ ಹುಡುಕುವುದು ಎಂಬುವುದು ಹೋಟೇಲ್ ನಲ್ಲಿ ’ಎಣ್ಣೆ ಹಾಕದ ಪೂರಿ ಕೊಡಿ’ ಎಂಬ ರಿಕ್ವೆಸ್ಟ್ ನ ಹಾಗೆಯೇ ಆಗುತ್ತದೆ.. ಮತ್ತು ಆ ರೀತಿಯಾಗೇ ವಿಚಾರ ಮಾಡಹೊರಟರೆ "ಡ್ರಾಮಾ ಸ್ವತಂತ್ರವಾಗಿರುವ ಸಿನೆಮಾಗಳಿರಲು ಸಾಧ್ಯವೇ ಇಲ್ಲ" "ಫೈಟಿಂಗ್ ಸ್ವತಂತ್ರವಾಗಿರುವ ಸಿನೆಮಾಗಳಿರುವ ಸಾಧ್ಯತೆಯೇ ಇಲ್ಲ" ಹೀಗೆ ಸ್ಟೇಟ್ ಮೆಂಟ್ ಗಳ ಲಿಸ್ಟು ಕೊಡುತ್ತಾ ಹೋಗಬಹುದು..

supreeth ks - ಹೌದು ಶೇಖರ್ ಸರ್ ಹೇಳಿದ ಪಾಯಿಂಟ್ ಅದೇ. ನಾವು ನೀವು ಮಧ್ಯಮ ವರ್ಗದ ಹಿಪಾಕ್ರಸಿಯ ಭಾಗವಾಗಿ ಬಳಸುವ ಪ್ರೀತಿ, ಭಾವುಕತೆ, ಪ್ರೇಮ, ನಿಷ್ಕಲ್ಮಶ ಭಾವನೆ ಮೊದಲಾದವು ಕಲೆಯಾಗುವಲ್ಲಿ ಸ್ವತಂತ್ರವಾಗಿ ನಿಲ್ಲಲಾರವು. ಅದನ್ನು ಸಪೋರ್ಟ್ ಮಾಡುವುದಕ್ಕೆ ಯಾವಾಗಲೂ ವಿರುದ್ಧ ಅಂಶಗಳು ಬೇಕೇಬೇಕಾಗುತ್ತವೆ.
ಅಲ್ಲದೆ ಶೇಕರ್ ಪೂರ್ಣ ಹೇಳಿದ್ದು ಭಾರತೀಯ ಸಿನೆಮಾಗಳ ಮೇಲೆ ಅವು ತೀರಾ ಸೆಕ್ಷುಯಲ್ ಹಾಗೂ ರೊಮ್ಯಾಂಟಿಕ್ ಎನ್ನುವ ಆರೋಪಕ್ಕೆ ತಮ್ಮ ವಿರೋಧವಿದೆಯೆಂದು.
ನಿಮ್ಮ ಇಷ್ಟ ಹಾಗೂ ವಸ್ತುನಿಷ್ಠ ವಿಮರ್ಶೆ ಬೇರೆ ಬೇರೆ. ನಿಮಗೆ ನಿಮ್ಮ ತಾಯಿ ನಾಡು ಅಂದರೆ ಪ್ರೀತಿ, ಆದರೆ ಇದರಲ್ಲಿನ ಕುಂದು ಕೊರತೆಯನ್ನು ನೀವು ಇಷ್ಟದಿಂದ ದೂರ ನಿಂತು ನಿರ್ಲಿಪ್ತಿಯಲ್ಲೇ ನೋಡಬೇಕು.

Tuesday, January 4, 2011

ಪಾಡ್‌ಕಾಸ್ಟ್ 2: ಪ್ರಣಯ ಎಂಬುದು ಸಿನೆಮಾದ ಸ್ವತಂತ್ರ ಅಂಗವಾಗುವುದಕ್ಕೆ ಸಾಧ್ಯವೇ ಇಲ್ಲ

ಭೂತಗನ್ನಡಿ ತಂಡದ ಮಾತುಕತೆಯ ಎರಡನೆಯ ಭಾಗವನ್ನು ಪಾಡ್ ಕಾಸ್ಟ್ ಮಾಡುತ್ತಿದ್ದೇವೆ.


ಈ ಪಾಡ್ ಕಾಸ್ಟಿನಲ್ಲಿ ಚರ್ಚಿಸಲ್ಪಟ್ಟ ಅಂಶಗಳು ಹೀಗಿವೆ:
ಸಿನೆಮಾಗಳಲ್ಲಿ, ಮುಖ್ಯವಾಗಿ ಭಾರತೀಯ ಸಿನೆಮಾಗಳಲ್ಲಿ ರೊಮ್ಯಾನ್ಸ್ ಎನ್ನುವುದು ಇಂಡಿಪೆಂಡೆಂಟ್ ಆಗಿ ನಿಲ್ಲುವುದಕ್ಕೆ ಸಾಧ್ಯ ಇಲ್ಲ
ಮಾತೇ ಇಲ್ಲದೆ ಸಿನೆಮ ಮಾಡಲಿಕ್ಕೆ ಸಾಧ್ಯ

(ಮಾತುಕತೆಯಲ್ಲಿ ಭಾಗಿಯಾದವರು:
ಶೇಖರ್ ಪೂರ್ಣ
ಸುಪ್ರೀತ್.ಕೆ.ಎಸ್
ಕಿರಣ್.ಎಂ
ಧ್ವನಿ ಮುದ್ರಣ, ಸಂಸ್ಕರಣೆ: ಸುಪ್ರೀತ್.ಕೆ.ಎಸ್)